* ಜರ್ಮನಿಯಲ್ಲೇ ಕುಳಿತು ಪಾಕಿಸ್ತಾನ ಜೊತೆಗಾರನಿಂದ ಕೃತ್ಯ* ರೈತ ನಾಯಕನ ಕೊಲೆಯ ಯೋಜನೆಯನ್ನು ರೂಪಿಸಿದ್ದ* ಲೂಧಿಯಾನ ಕೋರ್ಟ್‌ ಸ್ಫೋಟ: ಜರ್ಮನಿಯಲ್ಲಿ ಉಗ್ರನ ಬಂಧನ

ನವದೆಹಲಿ(ಡಿ.29): ಇತ್ತೀಚೆಗೆ ಪಂಜಾಬ್‌ನ ಲೂಧಿಯಾನದ ಕೋರ್ಟ್‌ನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದ ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ ಶಂಕಿತ ಉಗ್ರ ಜಸ್ವಿಂದರ್‌ ಸಿಂಗ್‌ ಮುಲ್ತಾನಿಯನು ಜರ್ಮನಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸ್ಫೋಟದ ನಂತರ ನಡೆದ ತನಿಖೆಯಲ್ಲಿ, ಘಟನೆಗೆ ಕಾರಣರಾದ ಇಬ್ಬರು ಉಗ್ರರು ಪಾಕಿಸ್ತಾನ ಮತ್ತು ಜರ್ಮನಿಯಲ್ಲಿ ನೆಲೆಸಿರುವುದು ತಿಳಿದುಬಂದಿತ್ತು. ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಜರ್ಮನಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರನ್ವಯ ಜರ್ಮನಿ ಪೊಲೀಸರು ಸೋಮವಾರ ಮುಲ್ತಾನಿಯನ್ನು ಬಂಧಿಸಿದ್ದಾರೆ. ಈತನ ವಿಚಾರಣೆ ನಡೆಸಲು ಭಾರತೀಯ ಪೊಲೀಸರು ಜರ್ಮನಿಗೆ ತೆರಳಿದ್ದಾರೆ.

ಮುಲ್ತಾನಿ ಲೂಧಿಯಾನ ಕೋರ್ಟ್‌ ಅಷ್ಟೇ ಅಲ್ಲದೇ ಭಾರತದ ಹಲವು ಪ್ರದೇಶಗಳಲ್ಲಿ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದ. ರೈತ ಹೋರಾಟದ ಸಮಯದಲ್ಲಿ ಹೋರಾಟದ ದಿಕ್ಕು ತಪ್ಪಿಸಲು ರೈತ ನಾಯಕ ಬಲ್ಬೀರ್‌ ಸಿಂಗ್‌ ರಾಜೇವಾಲ ಅವರ ಕೊಲೆ ಮಾಡಲು ಯೋಜನೆ ರೂಪಿಸಿದ್ದ. ಜರ್ಮನಿಯಲ್ಲೇ ಕುಳಿತು ಪಾಕಿಸ್ತಾನದಲ್ಲಿರುವ ತನ್ನ ಜೊತೆಗಾರ ಹರ್ವಿಂದರ್‌ ಸಿಂಗ್‌ ಸಂಧು ಜೊತೆಗೂಡಿ ಸ್ಫೋಟದ ಯೋಜನೆ ರೂಪಿಸಿದ್ದ.

ಡಿ.23ರಂದು ಲೂಧಿಯಾನ ನ್ಯಾಯಾಲಯ ಆವರಣದಲ್ಲಿ ನಡೆದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದರು.

ಭಾರೀ ಸ್ಫೋಟ:

ಲುಧಿಯಾನದ ಜಿಲ್ಲಾ ಕೋರ್ಟ್‌ನ ಎರಡನೇ ಮಹಡಿಯಲ್ಲಿ ಕಲಾಪ ನಡೆಯುತ್ತಿರುವಾಗಲೇ ಸಮೀಪದಲ್ಲೇ ಇದ್ದ ಶೌಚಾಲಯದಲ್ಲಿ ಮಧ್ಯಾಹ್ನ 12.22ರ ವೇಳೆಗೆ ಸ್ಫೋಟವಾಗಿತ್ತು. ಇದರ ತೀವ್ರತೆಗೆ ಗೋಡೆಗೆ ಹಾನಿಯಾಗಿದ್ದು, ನ್ಯಾಯಾಲಯದ ಕಿಟಕಿ ಗಾಜು, ಕಟ್ಟಡದ ಸಮೀಪ ನಿಂತಿದ್ದ ಕಾರುಗಳ ಗಾಜು ಪುಡಿಪುಡಿಯಾಗಿವೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 5 ಜನರು ಗಾಯಗೊಂಡಿದ್ದರು. ಮೃತ ವ್ಯಕ್ತಿ ಶೌಚಾಲಯದಲ್ಲಿ ಬಾಂಬ್‌ ಜೋಡಿಸುವ ವೇಳೆ ಸ್ಫೋಟಗೊಂಡು ಸಾವನ್ನಪ್ಪಿರಬಹುದು ಅಥವಾ ಆತ ಆತ್ಮಾಹುತಿ ದಾಳಿಕೋರನಾಗಿದ್ದಿರಬಹುದು. ಸ್ಫೋಟಕ್ಕೆ ಸುಧಾರಿತ ಸ್ಫೋಟಕ (ಐಇಡಿ) ಬಳಕೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಸ್ಫೋಟದ ಸಂಗತಿ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಗೃಹ ಸಚಿವಾಲಯ ಮಾಹಿತಿ ಪಡೆದಿದೆ. ಎನ್‌ಎಸ್‌ಜಿ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಬಾಂಬ್‌ ನಿಷ್ಕಿ್ರಯ ದಳ ಹಾಗೂ ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್‌ ಮುಖ್ಯಮಂತ್ರಿ ಚರಣಜಿತ್‌ ಚನ್ನಿ, ಕೆಲವು ದೇಶವಿದ್ರೋಹಿ, ರಾಜ್ಯ ದ್ರೋಹಿ ಶಕ್ತಿಗಳು ವಿಧಾನಸಭೆ ಚುನಾವಣೆಗೆ ಮುನ್ನ ಕಾನೂನು- ಸುವ್ಯವಸ್ಥೆ ಹಾಳುಗೆಡವಲು ಇಂತಹ ಅಸಹ್ಯ ಕೃತ್ಯ ಎಸಗಲು ಯತ್ನಿಸುತ್ತಿವೆ ಎಂದು ದೂಷಿಸಿದರು. ಬಳಿಕ ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡರಿದ್ದರು ಅಲ್ಲದೇ ಪಂಜಾಬ್‌ನ ಶಾಂತಿ ಕದಡಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಆದರೆ ಪಂಜಾಬ್‌ನ 3 ಕೋಟಿ ಜನರು ಈ ಯೋಜನೆಗಳು ಯಶ ಕಾಣಲು ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕೂಡ ಆಕ್ರೋಶವ್ಯಕ್ತಪಡಿಸಿದ್ದರು.

5 ವರ್ಷದ ಹಿಂದೆ ಮೈಸೂರು ಕೋರ್ಟಲ್ಲೂ ಸ್ಫೋಟ ಆಗಿತ್ತು

ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಗುರುವಾರ ಸಂಭವಿಸಿದ ಬಾಂಬ್‌ ಸ್ಫೋಟ ಐದು ವರ್ಷಗಳ ಹಿಂದೆ ಮೈಸೂರು ನ್ಯಾಯಾಲಯದಲ್ಲಿ ಸಂಭವಿಸಿದ್ದ ಸ್ಫೋಟವನ್ನು ನೆನಪಿಸಿದೆ. ಮೈಸೂರು ನ್ಯಾಯಾಲಯದಲ್ಲೂ ಶೌಚಾಲಯದಲ್ಲೇ ಬಾಂಬ್‌ ಸ್ಫೋಟವಾಗಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. 2016ರ ಆ.1ರಂದು ಸಂಭವಿಸಿದ್ದ ಈ ಸ್ಫೋಟ ಪ್ರಕರಣದ ಕುರಿತು ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವಹಿಸಲಾಗಿತ್ತು. ತಮಿಳುನಾಡಿನ ಬೇಸ್‌ ಎಂಬ ಸಂಘಟನೆ ದೇಶದ 5 ಕಡೆ ಕೋರ್ಟ್‌ಗಳಲ್ಲಿ ನಡೆಸಿದ ಸ್ಫೋಟ ಕಾರ್ಯಾಚರಣೆಯ ಭಾಗ ಮೈಸೂರು ಆಗಿತ್ತು ಎಂಬ ಸಂಗತಿ ತಿಳಿದುಬಂದಿತ್ತು. ಮೈಸೂರು ಸ್ಫೋಟಕ್ಕೂ ಮುಂಚೆ ಆಂಧ್ರದ ಚಿತ್ತೂರು, ನೆಲ್ಲೂರು, ಕೇರಳದ ಕೊಲ್ಲಂ, ಮಲ್ಲಪುರಂ ನ್ಯಾಯಾಲಯಗಳಲ್ಲೂ ಬಾಂಬ್‌ ಸ್ಫೋಟಿಸಿದ್ದವು. ಮೈಸೂರು ಘಟನೆಯ ಸಂಬಂಧ ಅಕ್ಟೋಬರ್‌ನಲ್ಲಷ್ಟೇ ಮೂವರಿಗೆ ಬೆಂಗಳೂರಿನ ಎನ್‌ಐಎ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.