ನವದೆಹಲಿ (ಅ.23): 2019ರಲ್ಲಿ ಭಾರತದಿಂದ ವಾಯುದಾಳಿಗೆ ಒಳಗಾಗಿ ನಾಶವಾಗಿದ್ದ ಬಾಲಾಕೋಟ್‌ ಭಯೋತ್ಪಾದಕರ ಕ್ಯಾಂಪ್‌ಗಳಿಗೆ ಪಾಕಿಸ್ತಾನ ಈಗ ಮರುಜೀವ ನೀಡಿದೆ ಎಂಬ ಮಾಹಿತಿ ಲಭಿಸಿದೆ. ಇದಲ್ಲದೆ, ಇದೇ ತಿಂಗಳು ರಾಜಸ್ಥಾನದ ಸೇನಾ ನೆಲೆಯೊಂದರ ಮೇಲೆ ಹಾಗೂ ದಿಲ್ಲಿಯಲ್ಲಿ ಭಾರೀ ಪ್ರಮಾಣದ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದೂ ತಿಳಿದುಬಂದಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’, ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಗಳ ಕ್ಯಾಂಪ್‌ಗಳಿಗೆ ಮರುಜೀವ ನೀಡಿದೆ. ಬಾಲಾಕೋಟ್‌ನಲ್ಲಿನ ಜೈಷ್‌ ಕ್ಯಾಂಪ್‌ಗಳಲ್ಲಿ ಹೊಸದಾಗಿ ನೇಮಕಗೊಂಡ ಉಗ್ರರಿಗೆ ತರಬೇತಿ ನೀಡಬೇಕು ಎಂದು ಜೈಷ್‌ ಕಮಾಂಡರ್‌ ಜುಬೇರ್‌ ಎಂಬಾತನಿಗೆ ಐಎಸ್‌ಐ ಸೂಚನೆ ನೀಡಿದೆ ಎಂದು ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಗೃಹ ಸಚಿವರಿಂದ ಐಜಿಪಿ ಕಿಡ್ನಾಪ್‌ ? ...

ಬಾಲಾಕೋಟ್‌ ಕ್ಯಾಂಪ್‌ನಲ್ಲಿ ಹೊಸದಾಗಿ ಕಂಟ್ರೋಲ್‌ ರೂಂ ನಿರ್ಮಿಸಲಾಗಿದೆ. ಈ ರೂಂ ಅನ್ನು ಭಾರತದ ಗಡಿಯಲ್ಲಿ ಉಗ್ರರನ್ನು ಒಳತೂರಿಸಲು ಜೈಷ್‌ ಹಾಗೂ ಇತರ ಉಗ್ರ ಸಂಘಟನೆಗಳು ಬಳಕೆ ಮಾಡಿಕೊಳ್ಳುತ್ತವೆ. ಪಾಕಿಸ್ತಾನದಲ್ಲೇ ಇರುವ ಈ ಉಗ್ರರ ಸೂತ್ರಧಾರರು, ಸಂಕೇತಾಕ್ಷರಗಳಲ್ಲಿ (ಕೋಡ್‌ವರ್ಡ್‌) ಭಾರತಕ್ಕೆ ನುಸುಳಿದ ಉಗ್ರರ ಜತೆ ಸಂವಹನ ನಡೆಸುತ್ತಾರೆ.

ಈ ನಡುವೆ, ಉಗ್ರರು ಇದೇ ತಿಂಗಳು ರಾಜಸ್ಥಾನ ಸೇನಾ ನೆಲೆಯೊಂದರ ಮೇಲೆ ‘ಪಠಾಣ್‌ಕೋಟ್‌ ದಾಳಿ’ ಮಾದರಿಯ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ. ಇನ್ನು ಆಷ್ಘಾನಿಸ್ತಾನದಲ್ಲಿ ಜೈಷ್‌ ಉಗ್ರಗಾಮಿ ಚಟುವಟಿಕೆ ನಿರ್ವಹಿಸಿದ ಅನುಭವ ಹೊಂದಿರುವ ‘ಮೌಲಾನಾ’ ಒಬ್ಬನಿಗೆ ದಿಲ್ಲಿಯಲ್ಲಿ ದಾಳಿ ನಡೆಸುವ ಹೊಣೆಯನ್ನು ಐಎಸ್‌ಐ ಹೊರಿಸಿದೆ. ಹೀಗಾಗಿ ಈ ‘ಮೌಲಾನಾ’ ಯಾರು ಎಂಬ ಮಾಹಿತಿಯನ್ನು ಗುಪ್ತಚರ ದಳಗಳು ಸಂಗ್ರಹಿಸುತ್ತಿವೆ.