Asianet Suvarna News Asianet Suvarna News

ಅಮೆರಿಕ, ಇರಾನ್‌ ನಡುವೆ ಯುದ್ಧಾತಂಕ: ವಿಶ್ವ ತಲ್ಲಣ!

ಅಮೆರಿಕ, ಇರಾನ್‌ ನಡುವೆ ಯುದ್ಧಾತಂಕ: ವಿಶ್ವ ತಲ್ಲಣ| ವಾಯುದಾಳಿ ನಡೆಸಿ ಇರಾನ್‌ ಸೇನಾಧಿಕಾರಿ ಹತ್ಯೆಗೈದ ಅಮೆರಿಕ| ಉಗ್ರ ಪ್ರತೀಕಾರ: ಇರಾನ್‌ ಪ್ರತಿಜ್ಞೆ| ಮತ್ತೆ ತೈಲ ದರ ಏರಿಕೆ ಭೀತಿ

Tensions Rise in the Middle East After US Killing of Iranian Military Leader
Author
Bangalore, First Published Jan 4, 2020, 10:51 AM IST

ವಾಷಿಂಗ್ಟನ್‌[ಜ.04]: ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕ ಹಾಗೂ ತೈಲಸಂಪದ್ಭರಿತ ಇಸ್ಲಾಮಿಕ್‌ ರಾಷ್ಟ್ರ ಇರಾನ್‌ ನಡುವಣ ಸಂಬಂಧ ಸಂಪೂರ್ಣ ಹಳಸಿರುವಾಗಲೇ, ಇರಾನ್‌ನ ಅತ್ಯಂತ ಪ್ರಭಾವಿ ಭದ್ರತಾ ಪಡೆಯೊಂದರ ದಂಡನಾಯಕ ಮತ್ತು ಧಾರ್ಮಿಕ ಮುಖಂಡ ಖಾಸಿಮ್‌ ಸೊಲೆಮನಿಯನ್ನು ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದೆ. ಇದು ಇರಾನ್‌ನ ಆಕ್ರೋಶಕ್ಕೆ ಕಾರಣವಾಗಿದ್ದು, ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿದೆ. ಹೀಗಾಗಿ ಅಮೆರಿಕ- ಇರಾಕ್‌ ನಡುವೆ ದಶಕಗಳ ಹಿಂದೆ ನಡೆದಿದ್ದ ಕೊಲ್ಲಿ ಯುದ್ಧದ ಭೀತಿ ಮತ್ತೊಮ್ಮೆ ಆವರಿಸಿಕೊಂಡಿದೆ. ಉಭಯ ದೇಶಗಳ ನಡುವಣ ವೈರತ್ವಕ್ಕೆ ಮತ್ತಷ್ಟುತುಪ್ಪ ಸುರಿದಿರುವ ಈ ಘಠನೆ, ಇಡೀ ವಿಶ್ವವನ್ನು ಮತ್ತಷ್ಟುಅಪಾಯಕಾರಿಯಾಗಿ ಪರಿವರ್ತಿಸಿದೆ ಎಂದು ಹಲವು ದೇಶಗಳು ಎಚ್ಚರಿಕೆ ನೀಡಿವೆ.

ಶುಕ್ರವಾರ ನಡೆದಿರುವ ಈ ಘಟನೆಯನ್ನು ಅತ್ಯಂತ ಅಪಾಯಕಾರಿ ಎಂದಿರುವ ವಿಶ್ವಸಂಸ್ಥೆ, ಮತ್ತೊಂದು ಕೊಲ್ಲಿ ಯುದ್ಧವನ್ನು ಎದುರಿಸುವ ಶಕ್ತಿ ವಿಶ್ವಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ. ಮತ್ತೊಂದೆಡೆ ತಕ್ಷಣವೇ ಇರಾಕ್‌ನಲ್ಲಿರುವ ತನ್ನೆಲ್ಲಾ ನಾಗರಿಕರಿಗೆ ದೇಶ ಬಿಡುವಂತೆ ಅಮೆರಿಕ ಸರ್ಕಾರ ಸೂಚಿಸಿದೆ. ಈ ನಡುವೆ ಉಭಯ ದೇಶಗಳು ಸಂಯಮ ತೋರಬೇಕು ಎಂದು ಭಾರತ ಸಲಹೆ ನೀಡಿದೆ. ಇದೇ ವೇಳೆ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಎಂದೋ ನಡೆಯಬೇಕಿದ್ದ ಹತ್ಯೆ ಇಂದು ನಡೆದಿದೆ. ಇದು ಮುಂಬರುವ ದಿನಗಳಲ್ಲಿ ಅಮೆರಿಕನ್ನರ ಮೇಲೆ ನಡೆಯಬೇಕಿದ್ದ ಸಂಭಾವ್ಯ ದಾಳಿಯನ್ನು ತಪ್ಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್-ಅಮೆರಿಕಕ್ಕೆ ಭಾರತದ ಸಂದೇಶ: ಹೀಗೆ ಮನವಿ ಮಾಡಿದ್ದೇ ವಿಶೇಷ!

ವಾಯುದಾಳಿ:

ಇರಾನ್‌ನಲ್ಲಿ ಆಂತರಿಕ ರಾಜಕೀಯ ವ್ಯವಸ್ಥೆ ರಕ್ಷಿಸಲು ರೆವಲ್ಯೂಷನರಿ ಗಾರ್ಡ್ಸ್ ಎಂಬ ಪಡೆ ಇದ್ದು, ಅದು ಸೇನೆಯ ಒಂದು ವಿಭಾಗವಾಗಿದೆ. ಅದರ ಕಮಾಂಡರ್‌ ಆಗಿದ್ದ ಜನರಲ್‌ ಖಾಸಿಮ್‌ ಸೊಲೆಮನಿ (62) ಇರಾಕ್‌ ರಾಜಧಾನಿ ಬಾಗ್ದಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವೇಳೆ ನಿಲ್ದಾಣದ ವ್ಯಾಪ್ತಿಯಲ್ಲೇ ಶುಕ್ರವಾರ ಅವರ ಮೇಲೆ ವೈಮಾನಿಕ ದಾಳಿ ನಡೆಸಿ ಅಮೆರಿಕ ಹತ್ಯೆ ಮಾಡಿದೆ. ಈ ವೇಳೆ ಸೊಲೆಮನಿ ಅವರ ಜತೆಗಿದ್ದ, ಇರಾನ್‌ನ ಹಶೆದ್‌ ಅಲ್‌ ಶಾಬಿ ಎಂಬ ಅರೆಸೇನಾಪಡೆಯ ಉಪಮುಖ್ಯಸ್ಥ ಅಬು ಮಹದಿ ಅಲ್‌ ಮುಹಾಂದಿಸ್‌ ಸೇರಿದಂತೆ 5 ಜನರು ಸಾವಿಗೀಡಾಗಿದ್ದಾರೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸೂಚನೆ ಮೇರೆಗೆ, ವಿದೇಶದಲ್ಲಿರುವ ಭದ್ರತಾ ಸಿಬ್ಬಂದಿಯನ್ನು ರಕ್ಷಿಸುವ ಉದ್ದೇಶದಿಂದ ನಿರ್ಣಾಯಕ ರಕ್ಷಣಾ ಕಾರ್ಯಾಚರಣೆ ನಡೆಸಿ ಖಾಸಿಮ್‌ ಸೊಲೆಮನಿ ಅವರನ್ನು ಕೊಂದಿದ್ದೇವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ ಘೋಷಣೆ ಮಾಡಿದೆ.

ಇರಾನ್‌ ರೆವಲ್ಯೂಷನರಿ ಗಾರ್ಡ್ಸ್ನ ಒಂದು ಭಾಗವಾಗಿರುವ, ಬೇಹುಗಾರಿಕೆ ನಡೆಸುವುದರ ಜತೆಗೆ ವಿದೇಶಿ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುವ ಖುದ್‌್ಸ ಪಡೆಗೆ ಸೊಲೆಮನಿ ಮುಖ್ಯಸ್ಥರಾಗಿದ್ದರು. ಈ ಪಡೆಯನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಈ ಹಿಂದೆಯೇ ಸಾರಿತ್ತು.

ಇರಾನ್ ಟಾಪ್ ಕಮಾಂಡರ್ ಹತ್ಯೆ: ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಟ್ರಂಪ್-ರೋಹಾನಿ!

ಸೊಲೆಮನಿ ಹತ್ಯೆ ವಿರುದ್ಧ ಇರಾನ್‌ ಕೆಂಡಕಾರಿದೆ. ಇರಾನ್‌ ಹಾಗೂ ಇತರೆ ಮುಕ್ತ ದೇಶಗಳು ಸೊಲೆಮನಿ ಹತ್ಯೆ ಮಾಡಿದ ಅಮೆರಿಕ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಿವೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಅವರು ಘೋಷಿಸಿದ್ದಾರೆ. ಜೊತೆಗೆ ಖುದ್‌್ಸ ಪಡೆಗೆ ಇಸ್ಮಾಯಿಲ್‌ ಖಾನಿ ಎಂಬುವವರನ್ನು ನೂತನ ಮುಖ್ಯಸ್ಥರನ್ನಾಗಿ ಇರಾನ್‌ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಎಲ್ಲಾ ಬೆಳವಣಿಗೆಗಳು ಕೊಲ್ಲಿ ವಲಯದಲ್ಲಿ ಮತ್ತೊಂದು ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಕಚ್ಚಾತೈಲ ಬೆಲೆ ಶೇ.4ರಷ್ಟುಏರುವಂತೆ ಮಾಡಿದೆ.

ಸೊಲೆಮನಿ ಹತ್ಯೆ ಏಕೆ?

ಇರಾಕ್‌ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಕಳೆದ ಹಲವು ತಿಂಗಳುಗಳಿಂದ ದಾಳಿಗಳು ನಡೆದಿದ್ದವು. ಅದರ ಸೂತ್ರಧಾರ ಸೊಲೆಮನಿ ಆಗಿದ್ದರು. ಇದೇ ವಾರದಲ್ಲಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೂ ದಾಳಿಯಾಗಿತ್ತು. ಅದಕ್ಕೆ ಸೊಲೆಮನಿ ಅನುಮತಿ ನೀಡಿದ್ದರು. ಇದಲ್ಲದೆ ಇರಾಕ್‌ ಹಾಗೂ ಆ ಭಾಗದಲ್ಲಿರುವ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ದಾಳಿಗೆ ಸೊಲೆಮನಿ ಯೋಜನೆ ರೂಪಿಸುತ್ತಿದ್ದರು ಎಂಬುದು ಅಮೆರಿಕ ವಾದ. ಇರಾನ್‌ನ ಪರಮೋಚ್ಛ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ಹೊರತುಪಡಿಸಿದರೆ, ಅತ್ಯಂತ ಪ್ರಭಾವಿ ಧಾರ್ಮಿಕ ನಾಯಕ ಎಂಬ ಹಿರಿಮೆ ಖಾಸಿಮ್‌ಗಿತ್ತು.

ಭಾರತೀಯ ಮೂಲದ 80 ಲಕ್ಷ ಜನರಿಗೆ ಸಂಕಷ್ಟ?

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲಾ ಅಲ್ಲಿಂದ ಭಾರತೀಯರ ವಲಸೆ ಹೆಚ್ಚಾಗುತ್ತದೆ. ಸೊಲೆಮನಿ ಹತ್ಯೆಯಿಂದಾಗಿ ಇರಾನ್‌- ಅಮೆರಿಕ ನಡುವೆ ಬಿಕ್ಕಟ್ಟು ಸೃಷ್ಟಿಯಾಗುವ ಸಂಭವ ಇದ್ದು, ಪಶ್ಚಿಮ ಏಷ್ಯಾದಲ್ಲಿರುವ 80 ಲಕ್ಷ ಭಾರತೀಯರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜತೆಗೆ ತೈಲಬೆಲೆ ಕೂಡ ಏರಿಕೆ ಕಾಣುವ ಸಂಭವ ಇದೆ.

"

Follow Us:
Download App:
  • android
  • ios