*ಸಶಸ್ತ್ರ ಪಡೆಗಳು, ನಾಗರಿಕರ ಪರ ಅಭಿಯಾನ*ಈಗಾಗಲೇ 30 ಕೋಟಿ ರು. ಹಣ ಸಂಗ್ರಹ*ಬ್ಲಾಕ್‌ಚೈನ್‌ ವಿಶ್ಲೇಷಣಾ ಸಂಸ್ಥೆ ಎಲ್ಲಿಪ್ಟಿಕ್‌ ಅಂಕಿ-ಅಂಶ*ವಿಶ್ವದ ಅತಿದೊಡ್ಡ ವಿಮಾನ ‘ಮ್ರಿಯಾ’ಕ್ಕೆ ತೀವ್ರಹಾನಿ

ವಾಷಿಂಗ್ಟನ್‌ (ಮಾ. 01) : ಬಲಾಢ್ಯ ರಷ್ಯಾ ವಿರುದ್ಧ ಸಮರಾಂಗಣದಲ್ಲಿ ಕಾದಾಡುತ್ತಿರುವ ಉಕ್ರೇನ್‌ ಪರ ವಿಶ್ವಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ಆ ದೇಶಕ್ಕೆ ಬಲ ತುಂಬುವ ಉದ್ದೇಶದಿಂದ ದೇಣಿಗೆ ಸಂಗ್ರಹ ಅಭಿಯಾನವೂ ಆರಂಭವಾಗಿದೆ. ಉಕ್ರೇನ್‌ ಪರ ಹಲವು ಸಂಸ್ಥೆಗಳು ಅಭಿಯಾನವನ್ನು ಆರಂಭಿಸಿವೆ. ಬ್ಲಾಕ್‌ಚೈನ್‌ ವಿಶ್ಲೇಷಣಾ ಸಂಸ್ಥೆ ಎಲ್ಲಿಪ್ಟಿಕ್‌ ಅಂಕಿ-ಅಂಶಗಳ ಪ್ರಕಾರ, ಉಕ್ರೇನ್‌ನ ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳಿಗೆ 30 ಕೋಟಿ ರು.ಗೂ ಅಧಿಕ ಮೊತ್ತದ ಕ್ರಿಪ್ಟೋಕರೆನ್ಸಿ ಹರಿದುಬಂದಿದೆ. ಈ ನಡುವೆ, 29 ವರ್ಷ ವಯಸ್ಸಿನ ಅಮೆರಿಕದ ಶತಕೋಟ್ಯಧೀಶ ಉದ್ಯಮಿ ಸ್ಯಾಮ್‌ ಬ್ಯಾಂಕ್‌ಮ್ಯಾನ್‌- ಫ್ರೈಡ್‌ ಅವರ ಕಂಪನಿ ಪ್ರತಿ ಉಕ್ರೇನ್‌ ಪ್ರಜೆಗೆ 1900 ರು. ಘೋಷಿಸಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಕಟುಟೀಕಾಕಾರರಾಗಿರುವ, ಗೆರಿಲ್ಲಾ ಮಾದರಿ ಪ್ರತಿಭಟನಾ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿರುವ ಪುಸ್ಸಿ ರೈಟ್‌ ಎಂಬ ಸಂಸ್ಥೆ ಕೂಡ ಉಕ್ರೇನ್‌ ಪರ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದೆ.

ಉಕ್ರೇನ್‌ನ ರಕ್ಷಣಾ ಬಜೆಟ್‌ ಗಾತ್ರ 30 ಸಾವಿರ ಕೋಟಿ ರುಪಾಯಿ. ಯುದ್ಧ ಆರಂಭದ ಬಳಿಕ ಬಜೆಟ್‌ ಗಾತ್ರವನ್ನು 6500 ಕೋಟಿ ರು.ನಷ್ಟುಹೆಚ್ಚಳ ಮಾಡಲು ಉಕ್ರೇನ್‌ ನಿರ್ಧರಿಸಿದೆ. ರಷ್ಯಾದ ಬಜೆಟ್‌ ಗಾತ್ರ ಉಕ್ರೇನ್‌ಗಿಂತ 10 ಪಟ್ಟು ಹೆಚ್ಚಿದೆ.

ಇದನ್ನೂ ಓದಿ:Russia Ukraine Crisis: ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಮಾಹಿತಿ ನೀಡದೇ ಗಡಿ ದಾಟದಂತೆ ಸೂಚನೆ!

ಬಹುಮಾನ ಮೊತ್ತ ದೇಶಕ್ಕೆ ದೇಣಿಗೆ: ಉಕ್ರೇನಿ ಟೆನಿಸ್‌ ತಾರೆ ಘೋಷಣೆ: ಉಕ್ರೇನಿನ ಟೆನಿಸ್‌ ಪಟು ಎಲಿನಾ ಸ್ವಿಟೋಲಿನಾ ಮಹಿಳಾ ಟೆನಿಸ್‌ ಅಸೋಸಿಯೇಶನ್‌ನ ಪಂದ್ಯಾವಳಿಯಿಂದ ತನಗೆ ಬರಲಿರುವ ಬಹುಮಾನದ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ಮಾನವೀಯ ನೆರವು ಒದಗಿಸುವ ನಿಟ್ಟಿನಲ್ಲಿ ದೇಣಿಗೆಯಾಗಿ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

ವಿಶ್ವದ ನಂಬರ್‌ 15 ನೇ ಸ್ಥಾನದಲ್ಲಿರುವ ಎಲಿನಾ, ‘ಉಕ್ರೇನಿನಲ್ಲಿದ್ದು ದೇಶವನ್ನು ರಕ್ಷಿಸಲು ಹೋರಾಡುತ್ತಿರುವ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಹಾಯ ಮಾಡಲು ಬಯಸುತ್ತೇನೆ. ನನ್ನ ದೇಶದಲ್ಲಿ ಕೆಲವರು ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿದ್ದರೆ, ಕೆಲವರು ದೇಶ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಹೀಗಾಗಿ ಮೆಕ್ಸಿಕೊ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಪಂದ್ಯಾವಳಿಗಳಲ್ಲಿ ನಾನು ಪಡೆಯುವ ಬಹುಮಾನದ ಎಲ್ಲ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ಮಾನವೀಯ ನೆರವಾಗಿ ನೀಡುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿRussia Ukraine Crisis: ಮತ್ತೆ 489 ಭಾರತೀಯರು ಉಕ್ರೇನ್‌ನಿಂದ ತವರಿಗೆ: ವಾಪಸಾದವರಿಗೆ ಕೋವಿಡ್‌ ನಿರ್ಬಂಧ ಸಡಿಲ!

ರಷ್ಯಾ ದಾಳಿ: ವಿಶ್ವದ ಅತಿದೊಡ್ಡ ವಿಮಾನ ‘ಮ್ರಿಯಾ’ಕ್ಕೆ ತೀವ್ರಹಾನಿ: ಉಕ್ರೇನಿನ ರಾಜಧಾನಿ ಕೀವ್‌ ವಿಮಾನ ನಿಲ್ದಾಣದಲ್ಲಿದ್ದ ವಿಶ್ವದ ಅತ್ಯಂತ ದೊಡ್ಡ ವಿಮಾನವು ರಷ್ಯಾದ ಪಡೆಗಳೊಂದಿಗೆ ಹೋರಾಡುವಾಗ ತೀವ್ರ ಹಾನಿಗೆ ಒಳಗಾಗಿದೆ ಎಂದು ಉಕ್ರೇನಿನ ರಕ್ಷಣಾ ಉದ್ಯಮದ ಸಮೂಹ ಹೇಳಿದೆ.

‘ವಿಶ್ವದ ಅತಿದೊಡ್ಡ ವಿಮಾನವಾದ ಆಂಟೋನೋವ್‌-225 ವಿಮಾನ ‘ಮ್ರಿಯಾ’ವನ್ನು ರಷ್ಯಾ ಪಡೆಗಳು ಸುಟ್ಟು ಹಾಕಿದ್ದಾರೆ. ಮ್ರಿಯಾ ಎಂದಿಗೂ ನಾಶವಾಗಲು ಸಾಧ್ಯವಿಲ್ಲ. ನಾವು ಅದನ್ನು ಮತ್ತೆ ನಿರ್ಮಿಸುತ್ತೇವೆ’ ಉಕ್ರೇನ್‌ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್‌ ಮಾಡಿದ್ದಾರೆ.

ವಿಶೇಷತೆ: ಜಗತ್ತಿನ ಅತಿದೊಡ್ಡ ವಿಮಾನ ಮ್ರಿಯಾ 276 ಅಡಿ ಉದ್ದವಾಗಿದ್ದು 250 ಟನ್‌ ತೂಕದ ಸರಕುಗಳನ್ನು ಪ್ರತಿಗಂಟೆಗೆ 850 ಕೀಮಿ ವೇಗದಲ್ಲಿ ಸಾಗಿಸುವ ಸಾಮರ್ಥ್ಯವನ್ನು ಹೊಂದಿತ್ತು. ಮ್ರಿಯಾ ಎಂದರೆ ಉಕ್ರೇನಿ ಭಾಷೆಯಲ್ಲಿ ಕನಸು ಎಂದರ್ಥ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ಸಾಗಿಸಲು ಇದನ್ನು ವಿಶೇಷವಾಗಿ ಬಳಸಲಾಗಿತ್ತು.

ತನ್ನ ನಾಗರಿಕರ ರಕ್ಷಣೆಗೆ ಮುಂದಾಗದ ಚೀನಾ!: ರಷ್ಯಾದಿಂದ ದಾಳಿಗೆ ತುತ್ತಾಗಿರುವ ಉಕ್ರೇನ್‌ನಿಂದ ತಮ್ಮ ನಾಗರಿಕರ ರಕ್ಷಣೆಗೆ ಭಾರತ ಸೇರಿ ಹಲವು ದೇಶಗಳು ಮುಂದಾಗಿದ್ದರೆ, ಚೀನಾ ಮಾತ್ರ ಈ ವಿಷಯದಲ್ಲಿ ಅಸಡ್ಡೆ ತೋರಿದೆ ಎಂಬ ಟೀಕೆ ವ್ಯಕ್ತವಾಗಿದೆ. ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಈಗಿನ ಪರಿಸ್ಥಿತಿ ಸುರಕ್ಷಿವಲ್ಲ ಎಂದು ಚೀನಾ ಸರ್ಕಾರ ಕಾರಣ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಉಕ್ರೇನ್‌ನಲ್ಲಿನ ಚೀನಾ ರಾಯಭಾರಿ ಫ್ಯಾನ್‌ ಕ್ಸಿಯಾನ್‌ರಾಂಗ್‌, ‘ನಮ್ಮೆಲ್ಲಾ ನಾಗರಿಕರನ್ನು ಬಿಟ್ಟು ನಾನು ಉಕ್ರೇನ್‌ನಿಂದ ತೆರಳಿದ್ದೇನೆ ಎಂಬ ಸುದ್ದಿ ಸುಳ್ಳು. ನಾವು ಇಲ್ಲಿಂದ ತೆರವು ಕಾರ್ಯಾಚರಣೆ ಆರಂಭಿಸಲು, ಪರಿಸ್ಥಿತಿ ಸುಧಾರಣೆ ಆಗುವವರೆಗೂ ಕಾಯಬೇಕು. ಎಲ್ಲರಿಗೂ ಗರಿಷ್ಠ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ ಮತ್ತು ನಾವು ಎಲ್ಲರಿಗೂ ಸುರಕ್ಷತೆಯನ್ನು ಖಾತರಿಪಡಿಸುತ್ತೇವೆ. ನಾವು ಎಲ್ಲಾ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.