ಕರಾಳ ಮುಖ ತೋರಲು ಆರಂಭಿಸಿದ ತಾಲಿಬಾನಿಗಳು : ನಾಗರಿಕರ ಮೇಲೆ ಗುಂಡಿನ ಮಳೆ
- ‘ತಾಲಿಬಾನಿಗಳು ಬದಲಾಗಿದ್ದಾರೆ. ಅವರು ಹಿಂದಿನಂತಲ್ಲ. ಈಗ ಶಾಂತಿಮಂತ್ರ ಪಠಿಸುತ್ತಿದ್ದಾರೆ’ ಎಂಬುದು ಸುಳ್ಳು
- ತಮ್ಮ ನಿಜವಾದ ಕರಾಳ ಮುಖ ತೋರಿಸಲು ಆರಂಭಿಸಿದ್ದಾರೆ.
- ರಾಷ್ಟ್ರಧ್ವಜ ಹಾರಿಸಿದ ಆಫ್ಘನ್ ನಾಗರಿಕರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ಮಳೆ
ಕಾಬೂಲ್ (ಆ.20): ‘ತಾಲಿಬಾನಿಗಳು ಬದಲಾಗಿದ್ದಾರೆ. ಅವರು ಹಿಂದಿನಂತಲ್ಲ. ಈಗ ಶಾಂತಿಮಂತ್ರ ಪಠಿಸುತ್ತಿದ್ದಾರೆ’ ಎಂಬ ವಾದಗಳ ನಡುವೆಯೇ ಅವರು ತಮ್ಮ ನಿಜವಾದ ಕರಾಳ ಮುಖ ತೋರಿಸಲು ಆರಂಭಿಸಿದ್ದಾರೆ. ಅಷ್ಘಾನಿಸ್ತಾನದ ಸ್ವಾತಂತ್ರ್ಯ ದಿನವಾದ ಆಗಸ್ಟ್ 19ರ ಗುರುವಾರ ರಾಷ್ಟ್ರಧ್ವಜ ಹಾರಿಸಿದ ಆಫ್ಘನ್ ನಾಗರಿಕರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ಮಳೆಗರೆದಿದ್ದಾರೆ. ದಾಳಿಯಲ್ಲಿ ಹಲವಾರು ಜನ ಸಾವಿಗೀಡಾಗಿದ್ದಾರೆ.
ಇದೇ ವೇಳೆ, ದೇಶದ ಹಲವು ಭಾಗಗಳಲ್ಲಿ ವರದಿಗಾರಿಕೆ ಮಾಡುತ್ತಿರುವ ದೇಶ-ವಿದೇಶದ ವರದಿಗಾರರ ಮೇಲೂ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸಿಎನ್‌ಎನ್ ಪತ್ರಕರ್ತರು ಸೇರಿ ಹಲವರು ಗಾಯಗೊಂಡಿದ್ದಾರೆ.
ತಾಲಿಬಾನ್ ಧ್ವಜ ಇಳಿಸಿದ ಜನ: 20 ವರ್ಷದ ಬಳಿಕ ದೇಶವನ್ನು ತಮ್ಮ ವಶಕ್ಕೆ ಪಡೆದ ತಾಲಿಬಾನಿಗಳ ಅಟ್ಟಹಾಸದಿಂದ ರೋಸಿಹೋಗಿರುವ ಜನರು ಗುರುವಾರ ತಾಲಿಬಾನ್ ಧ್ವಜಕ್ಕೆ ಸಡ್ಡು ಹೊಡೆದು, ಆ ಧ್ವಜ ಇಳಿಸಿ ಹಲವು ಕಡೆ ಅಷ್ಘಾನಿಸ್ತಾನದ ನೈಜ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಈ ವೇಳೆ ‘ನಮ್ಮ ಧ್ವಜ, ನಮ್ಮ ಗುರುತು’ ಎಂಬ ಘೋಷಣೆ ಕೂಗಿದರು. ಇದರಿಂದ ಕಂಗಾಲಾದ ತಾಲಿಬಾನಿಗಳು, ಮುಖ್ಯವಾಗಿ ಕಾಬೂಲ್, ಅಸಾದಾಬಾದ್, ಜಲಾಲಾಬಾದ್ ಹಾಗೂ ಇತರ ಕೆಲವು ಪ್ರದೇಶಗಳಲ್ಲಿ ಜನರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆಫ್ಘಾನಿಸ್ತಾನ ಬಿಕ್ಕಟ್ಟು; ಭಾರತದ ಜೊತೆಗಿನ ರಫ್ತು, ಆಮದು ವಹಿವಾಟು ಸ್ಥಗಿತಗೊಳಿಸಿದ ತಾಲಿಬಾನ್!
ಕಾಬೂಲ್‌ನಲ್ಲಿ ಜನಸಾಮಾನ್ಯರು ರಾಷ್ಟ್ರಧ್ವಜದ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ನಂಗರ್‌ಹಾರ್ ಪ್ರಾಂತ್ಯದಲ್ಲಿ ಧ್ವಜ ಹಾರಿಸಿದ ಜನರ ಮೇಲೆ ತಾಲಿಬಾನ್ ಉಗ್ರರು ಗುಂಡು ಹಾರಿಸಿದ ಹಾಗೂ ಜನರು ರಕ್ತದ ಮಡುವಿನಲ್ಲಿ ಬಿದ್ದ ವಿಡಿಯೋ ವೈರಲ್ ಆಗಿದೆ. ಕುನಾರ್‌ನಲ್ಲಿ ಜನರು ತಾಲಿಬಾನ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಪಕ್ತಿಯಾ ಪ್ರಾಂತ್ಯ, ಖೋಸ್‌್ತ ಎಂಬ ನಗರದಲ್ಲೂ ಇಂತಹ ಘಟನೆಗಳು ವರದಿಯಾಗಿವೆ. ಜಲಾಲಾಬಾದ್‌ನಲ್ಲಿ ಬುಧವಾರ ಅಫ್ಘಾನಿಸ್ತಾನದ ಧ್ವಜಾರೋಹಣ ಮಾಡಿದ ಕಾರಣ ಮೂವರನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದರು.
ಆ.19 ಸ್ವಾತಂತ್ರ್ಯ ದಿನ: 1919ರ ಆ.19ರಂದು ಬ್ರಿಟಿಷರಿಂದ ಅಫ್ಘಾನಿಸ್ತಾನಕ್ಕೆ ಮುಕ್ತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಆ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಸ್ವಾತಂತ್ರ್ಯ ದಿನದ ಹೊತ್ತಿಗೇ ಇಡೀ ದೇಶ ತಾಲಿಬಾನ್ ಕೈವಶವಾಗಿರುವುದು ಜನರಲ್ಲಿ ಕಳವಳಕ್ಕೆ ಕಾರಣವಾಗಿದೆ.