* ಮಹತ್ವದ ಮಿಲಿಟರಿ ದ್ವಾರ ಸೇರಿ 3 ಗೇಟು ತಾಲಿಬಾನ್‌ ವಶಕ್ಕೆ* ಕಾಬೂಲ್‌ ಏರ್‌ಪೋರ್ಟ್‌ ಬಹುತೇಕ ಉಗ್ರರ ತೆಕ್ಕೆಗೆ* 3 ಗೇಟು ಉಗ್ರರ ವಶಕ್ಕೆ ಒಪ್ಪಿಸಿ ಚಿಕ್ಕ ಭಾಗಕ್ಕೆ ಅಮೆರಿಕ ಸೀಮಿತ* ನಿಲ್ದಾಣದ ಸುತ್ತ ಈಗ ಉಗ್ರರ ಸರ್ಪಗಾವಲು* ಏರ್‌ಪೋರ್ಟ್‌ ನಿರ್ವಹಣೆಗೆ ಸಿದ್ಧ: ತಾಲಿಬಾನ್‌ ಘೋಷಣೆ

ಕಾಬೂಲ್‌(ಆ.30): ಅಮೆರಿಕ ಹಾಗೂ ಇತರ ದೇಶಗಳ ಮಿತ್ರಸೇನೆಗಳು ಕಾಬೂಲ್‌ನಿಂದ ಹಿಂತೆಗೆಯುತ್ತಿದ್ದಂತೆಯೇ, ಈವರೆಗೆ ತನ್ನ ಹಿಡಿತದಲ್ಲಿ ಇಲ್ಲದ ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್‌ ನಿಯಂತ್ರಣ ಸಾಧಿಸಲು ಆರಂಭಿಸಿದೆ. ಕಾಬೂಲ್‌ ಏರ್‌ಪೋರ್ಟ್‌ನ 3 ಪ್ರವೇಶ ದ್ವಾರಗಳನ್ನು ಅಮೆರಿಕ ಸೈನಿಕರು, ತಾಲಿಬಾನ್‌ ವಶಕ್ಕೆ ನೀಡಿದ್ದಾರೆ ಎಂದು ಭಾನುವಾರ ತಿಳಿದುಬಂದಿದೆ.

ವಿವಿಧ ದೇಶಗಳ ಸೈನಿಕರು ತಮ್ಮವರನ್ನು ಅಫ್ಘಾನಿಸ್ತಾನದಿದ ಶನಿವಾರವೇ ಬಹುತೇಕ ತೆರವು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತಷ್ಟುಆಫ್ಘನ್ನರು ದೇಶ ತೊರೆಯಬಾರದು ಎಂಬ ಉದ್ದೇಶದಿಂದ ತಾಲಿಬಾನ್‌ ಸೈನಿಕರು ಶನಿವಾರವೇ ಏರ್‌ಪೋರ್ಟ್‌ ಹೊರಗೆ ತಮ್ಮ ಕಾವಲು ಬಿಗಿಗೊಳಿಸಿ, ಅದನ್ನು ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದರು.

ಇದರ ಬೆನ್ನಲ್ಲೇ ಭಾನುವಾರ ಮಿಲಿಟರಿ ಸೆಕ್ಷನ್‌ ಪ್ರವೇಶ ದ್ವಾರ ಸೇರಿದಂತೆ 3 ಏರ್‌ಪೋರ್ಟ್‌ ದ್ವಾರಗಳನ್ನು ಅಮೆರಿಕ ಯೋಧರು, ತಾಲಿಬಾನ್‌ಗೆ ವಹಿಸಿದ್ದಾರೆ. ಈಗ ಅಮೆರಿಕ ಯೋಧರು, ರಾಡಾರ್‌ ವ್ಯವಸ್ಥೆಯ ಭಾಗ ಸೇರಿದಂತೆ ಏರ್‌ಪೋರ್ಟ್‌ನ ಚಿಕ್ಕ ಭಾಗವನ್ನು ಮಾತ್ರ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಎಂದು ತಾಲಿಬಾನ್‌ ಅಧಿಕಾರಿ ಎನ್ಹಾಮುಲ್ಲಾ ಸಮಾಂಗನಿ ಹೇಳಿದ್ದಾನೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದಲ್ಲದೆ, ‘ನಾವು ಏರ್‌ಪೋರ್ಟ್‌ನ ಭದ್ರತೆ ಹಾಗೂ ತಾಂತ್ರಿಕ ಭಾಗಗಳ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿದ್ದೇವೆ’ ಎಂದೂ ಆತ ತಿಳಿಸಿದ್ದಾನೆ.

ಎರಡು ವಾರ ಹಿಂದೆಯೇ ತಾಲಿಬಾನ್‌, ಏರ್‌ಪೋರ್ಟ್‌ ಹೊರಗೆ ತನ್ನ ಉಗ್ರರನ್ನು ಕಾವಲಿಗೆ ನಿಲ್ಲಿಸಿತ್ತು. ಆದರೆ ಏರ್‌ಪೋರ್ಟ್‌ ಒಳಭಾಗ ಅಮೆರಿಕ ವಶದಲ್ಲಿದ್ದ ಕಾರಣ, ಅಲ್ಲಿಗೆ ಪ್ರವೇಶಿಸದೇ ಸುಮ್ಮನಿತ್ತು. ತನ್ನ ಬಳಿಯೂ ತಾಂತ್ರಿಕ ನಿಪುಣ ಎಂಜಿನಿಯರ್‌ಗಳು ಇದ್ದು, ಏರ್‌ಪೋರ್ಟ್‌ ನಿಭಾಯಿಸುವ ಶಕ್ತಿ ತನಗಿದೆ ಎಂದು ತಾಲಿಬಾನ್‌ ಹೇಳಿಕೊಂಡಿತ್ತು.

ಈ ಮುನ್ನ 6 ಸಾವಿರ ಅಮೆರಿಕ ಯೋಧರು ಏರ್‌ಪೋರ್ಟ್‌ನಲ್ಲಿದ್ದರು. ಆದರೆ ತೆರವು ಪ್ರಕ್ರಿಯೆ ಆರಂಭವಾದ ನಂತರ ಈಗ ಸುಮಾರು 4000 ಯೋಧರು ಮಾತ್ರ ಉಳಿದಿದ್ದಾರೆ. ಇವರೆಲ್ಲರೂ ಆ.31ರ ಗಡುವಿನ ಒಳಗೆ ತಾಯ್ನಾಡಿಗೆ ಮರಳಲು ಸಿದ್ಧರಾಗಿ ನಿಂತಿದ್ದಾರೆ. ತೆರವು ಕಾರಾರ‍ಯಚರಣೆ ಅಂತಿಮ ಹಂತದಲ್ಲಿದೆ.