* ಅಮೆರಿಕ ಮೇಲೆ ಉಗ್ರದಾಳಿ ನಡೆಸಿದ 20ನೇ ವಾರ್ಷಿಕೋತ್ಸವ ದಿನ* ಸೆಪ್ಟೆಂಬರ್‌ 11ರಂದು ನಡೆಯಬೇಕಿದ್ದ ತಾಲಿಬಾನ್‌ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ರದ್ದು * ಆರ್ಥಿಕ ಸಂಕಷ್ಟ ನೀಡಿ ಕಾರ್ಯಕ್ರಮ ರದ್ದುಗೊಳಿಸಿದ ತಾಲಿಬಾನ್ 

ಕಾಬೂಲ್‌(ಸೆ.12): ಅಮೆರಿಕ ಮೇಲೆ ಉಗ್ರದಾಳಿ ನಡೆಸಿದ 20ನೇ ವಾರ್ಷಿಕೋತ್ಸವ ದಿನವಾದ ಸೆಪ್ಟೆಂಬರ್‌ 11ರಂದು ನಡೆಯಬೇಕಿದ್ದ ತಾಲಿಬಾನ್‌ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮವನ್ನು ತಾಲಿಬಾನ್‌ ರದ್ದುಗೊಳಿಸಿದೆ. ದೇಶದಲ್ಲಿ ಆರ್ಥಿಕ ಕುಸಿತ ಇರುವುದರಿಂದ ಹಣ ಉಳಿಸಲು ತಾಲಿಬಾನ್‌ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ತಾಲಿಬಾನ್‌ನ ಕೆಲ ಬಣಗಳು ಕಾರ್ಯಕ್ರಮ ನಡೆಸದಂತೆ ಒತ್ತಡ ಹೇರಿವೆ ಎಂದು ಸಹ ಹೇಳಲಾಗುತ್ತಿದೆ.

‘ಅಷ್ಘಾನಿಸ್ತಾನದ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ತಾಲಿಬಾನ್‌ ನೇತೃತ್ವದಲ್ಲಿ ಘೋಷಣೆಯಾದ ಇಸ್ಲಾಮಿಕ್‌ ಎಮಿರೇಟ್ಸ್‌ ಆಫ್‌ ಅಷ್ಘಾನಿಸ್ತಾನದಲ್ಲಿ ಘೋಷಣೆಯಾಗಿರುವ ಮಂತ್ರಿಮಂಡಲ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ’ ಎಂದು ತಾಲಿಬಾನ್‌ ಸರ್ಕಾರದ ಸಾಂಸ್ಕೃತಿಕ ಮಂತ್ರಿ ಇನಾಮುಲ್ಲಾ ಸಮಾಂಘನಿ ಹೇಳಿದ್ದಾರೆ.

ತಾಲಿಬಾನ್‌ ರಚಿತ ಸರ್ಕಾರ ಸಪ್ಟೆಂಬರ್‌ 11ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿತ್ತು. ಈ ಕಾರ್ಯಕ್ರಮಕ್ಕೆ ಚೀನಾ, ಪಾಕಿಸ್ತಾನ, ಇರಾನ್‌, ರಷ್ಯಾ, ಕತಾರ್‌, ಭಾರತ, ಅಮೆರಿಕ ದೇಶಗಳಿಗೆ ತಾಲಿಬಾನ್‌ ಆಹ್ವಾನ ನೀಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ರಷ್ಯಾ ಶುಕ್ರವಾರ ಹೇಳಿತ್ತು. ಈಗ ತಾಲಿಬಾನ್‌ ಈ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.