ಸುಮಿ ನಗರದಲ್ಲಿ ರಷ್ಯಾದಿಂದ ತೀವ್ರ ದಾಳಿ ಸುರಕ್ಷಿತವಾಗಿ ಬಂಕರ್‌ನಲ್ಲಿರಿ, ಹೊರಗೆ ಬರಬೇಡಿ ಎಂದು ಸೂಚನೆ ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿ ಸೂಚನೆ
ಕೀವ್(ಮಾ.08): ಸುಮಿಯಲ್ಲಿ ರಷ್ಯಾ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿರುವುದರಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವುದಕ್ಕೆ ಮತ್ತೊಮ್ಮೆ ತೊಡಕು ಉಂಟಾಗಿದೆ. ಸುಮಿಯಲ್ಲಿ ಇನ್ನೂ 700 ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ರಷ್ಯಾದ ದಾಳಿ ಹೆಚ್ಚಾಗಿರುವುದರಿಂದ ಸುಮಿಯಲ್ಲಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿ ಹಾಸ್ಟೆಲ್ ಮತ್ತು ಬಂಕರ್‌ಗಳಲ್ಲೇ ಇರುವಂತೆ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿದೆ. ಸತತವಾಗಿ ರಷ್ಯಾ ಶೆಲ್ ದಾಳಿ ನಡೆಸುತ್ತಿರುವುದರಿಂದ ಇಲ್ಲಿ ಸ್ಥಳಾಂತರ ಕಾರ್ಯ ಕೈಗೊಳ್ಳುವುದು ಕಷ್ಟವಾಗುತ್ತಿದೆ.
ಸುಮಿ ಭಾರತೀಯರ ತೆರವಿಗೆ ಸಹಕರಿಸಿ:
ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರ ಜತೆ ಸೋಮವಾರ ಪ್ರತ್ಯೇಕವಾಗಿ ಸುದೀರ್ಘ ದೂರವಾಣಿ ಚರ್ಚೆ ನಡೆಸಿದ್ದಾರೆ. ಈ ವೇಳೆ, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಮನವಿ ಮಾಡಿರುವ ಅವರು, ಉಕ್ರೇನ್‌ನಲ್ಲಿನ ಭಾರತೀಯರ ತೆರವು ಕಾರ್ಯಾಚರಣೆಗೆ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.
Russia-Ukraine Crisis: ವಿನ್ನಿಸಿಯಾ ಏರ್‌ಪೋರ್ಟ್ ಧ್ವಂಸ, ಮುಂದುವರೆದ ದಾಳಿ
ಜೆಲೆನ್‌ಸ್ಕಿ ಜತೆ 35 ನಿಮಿಷ ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ ಮೋದಿ, ‘ಉಕ್ರೇನ್‌ನ ಸುಮಿಯಲ್ಲಿ 700 ಭಾರತೀಯರು ಸಿಲುಕಿ ಸಂಕಷ್ಟದಲ್ಲಿದ್ದಾರೆ. ಅವರ ಸುರಕ್ಷಿತ ತೆರವಿಗೆ ಸಹಕರಿಸಬೇಕು ಎಂದು ಕೋರಿದರು ದೇಶದಲ್ಲಿನ ಯುದ್ಧ ಹಾಗೂ ಮಾನವೀಯತೆ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಈವರೆಗೆ ಸುಮಾರು 20 ಸಾವಿರ ಜನರನ್ನು ಉಕ್ರೇನ್‌ನಿಂದ ತೆರವುಗೊಳಿಸಲಾಗಿದ್ದು, ಇದಕ್ಕೆ ಸಹಕರಿಸಿದ್ದಕ್ಕೆ ಜೆಲೆನ್‌ಸ್ಕಿಗೆ ಧನ್ಯವಾದ ತಿಳಿಸಿದರು’ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ.
ಮಾತುಕತೆ ಬಗ್ಗೆ ಟ್ವೀಟ್ ಮಾಡಿರುವ ಜೆಲೆನ್‌ಸ್ಕಿ, ‘ರಷ್ಯಾ ದಾಳಿಯನ್ನು ಹೇಗೆ ಎದುರಿಸುತ್ತಿರುವುದಾಗಿ ಮೋದಿ ಅವರಿಗೆ ತಿಳಿಸಿದೆ. ಭಾರತೀಯ ಜನರ ರಕ್ಷಣೆಗೆ ನಾವು ಕೈಗೊಂಡ ಕ್ರಮಗಳ ಬಗ್ಗೆ ಮೋದಿ ಪ್ರಶಂಸಿಸಿದರು. ಶಾಂತಿ ಮಾತುಕತೆಗೆ ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ. ಅಲ್ಲದೆ, ‘ಉಕ್ರೇನ್ ಜನತೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ’ ಎಂದೂ ಮೋದಿ ಅವರಿಗೆ ತಿಳಿಸಿದ್ದಾರೆ.
ಭಾರತೀಯರ ಸುರಕ್ಷತೆಗೆ ಪುಟಿನ್‌ಗೂ ಮನವಿ:
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜತೆಗೂ ಮೋದಿ 55 ನಿಮಿಷ ಕಾಲ ದೂರವಾಣಿಯಲ್ಲಿ ಚರ್ಚಿಸಿದರು. ‘ಸುಮಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಯ ಮಹತ್ವದ ಬಗ್ಗೆ ವಿವರಿಸಿದರು. ಜನರ ಸುರಕ್ಷಿತ ತೆರವಿಗೆ ಉಕ್ರೇನ್‌ನ ಹಲವು ಕಡೆ ರಷ್ಯಾ ಸಾರಿರುವ ಯುದ್ಧವಿರಾಮದ ಬಗ್ಗೆಯೂ ಪ್ರಶಂಸಿಸಿದರು’ ಎಂದು ಮೂಲಗಳು ಹೇಳಿವೆ.
ಉಕ್ರೇನ್‌ನಲ್ಲಿ ಗಾಯಗೊಂಡಿದ್ದ ಹರ್ಜೋತ್ ವಾಯುಪಡೆಯ ವಿಶೇಷ ವಿಮಾನದಲ್ಲಿ ಭಾರತಕ್ಕೆ!
ಉಕ್ರೇನಿಂದ 7 ವಿಮಾನಗಳಲ್ಲಿ 1314 ಮಂದಿ ಭಾರತಕ್ಕೆ ಆಗಮನ
ಯುದ್ಧಪೀಡಿತ ಉಕ್ರೇನ್‌ನ ನೆರೆಯ ರಾಷ್ಟ್ರಗಳಿಂದ ಭಾರತೀಯರನ್ನು ರಕ್ಷಿಸುವ ಬೃಹತ್ ಏರ್‌ಲಿಫ್ಟ್ ಯೋಜನೆ ಆಪರೇಶನ್ ಗಂಗಾ ಕೊನೆ ಹಂತ ತಲುಪಿದ್ದು, ಸೋಮವಾರ ಸೋಮವಾರ 7 ವಿಮಾನಗಳಲ್ಲಿ 1,314 ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ. ಈ ಮೂಲಕ 89 ವಿಮಾನಗಳಲ್ಲಿ 16600ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆತಂದಂತಾಗಿದೆ.
ಸೋಮವಾರ 5 ವಿಮಾನಗಳು ದೆಹಲಿಗೆ ಮತ್ತು 2 ವಿಮಾನಗಳು ಮುಂಬೈಗೆ ಬಂದು ತಲುಪಿವೆ. ಮಂಗಳವಾರ ಮತ್ತೆರಡು ವಿಮಾನಗಳು ರೊಮೆನಿಯಾದಿಂದ ಹೊರಡಲಿವೆ. ಈ ವಿಮಾನಗಳಲ್ಲಿ ಸುಮಾರು 400 ಭಾರತೀಯರು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ. ರಷ್ಯಾ ಆಕ್ರಮಣದ ನಂತರ ಉಕ್ರೇನ್‌ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಹಂಗೇರಿ, ಸ್ಲೊವಾಕಿಯಾ ಹಾಗೂ ಪೊಲೆಂಡ್‌ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಏರ್‌ಲಿಫ್ಟ್ ಕಾರ್ಯಾಚರಣೆಯನ್ನು ಭಾರತ ಆರಂಭಿಸಿತ್ತು.
