Asianet Suvarna News Asianet Suvarna News

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೇಲ್‌ ಮೂಲಕ ಸ್ಪೀಕರ್‌ಗೆ ತಮ್ಮ ರಾಜೀನಾಮೆ ಪತ್ರವನ್ನು ರಾಜಪಕ್ಸ ಗುರುವಾರ ಸಂಜೆ ಕಳಿಸಿದ್ದಾರೆ.

Sri Lankan President Gotabaya Rajapaksa resigns after protest and Economic Crisis san
Author
Bengaluru, First Published Jul 14, 2022, 7:46 PM IST

ಕೊಲಂಬೊ (ಜುಲೈ 14): ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ಗುರುವಾರ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಶ್ರೀಲಂಕಾದ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ. ತಮ್ಮ ಪತ್ನಿಯೊಂದಿಗೆ  ಸಿಂಗಾಪುರಕ್ಕೆ ಆಗಮಿಸಿದ್ದ ಬೆನ್ನಲ್ಲಿಯೇ ಗೊಟಬಯ ರಾಜಪಕ್ಸ ತಮ್ಮ ರಾಜೀನಾಮೆಯನ್ನು ಈ ಮೇಲ್‌ ಮೂಲಕ ಶ್ರೀಲಂಕಾದ ಸ್ಪೀಕರ್‌ಗೆ ಕಳಿಸಿದ್ದಾರೆ ಎಂದು ವರದಿಯಾಗಿದೆ. ಮಾಲ್ಡೀವ್ಸ್‌ನಿಂದ "ಖಾಸಗಿ ಭೇಟಿ" ಯಲ್ಲಿ ರಾಜಪಕ್ಸೆಗೆ ನಗರ-ರಾಜ್ಯವನ್ನು ಪ್ರವೇಶಿಸಲು ಅವಕಾಶ ನೀಡಿರುವುದಾಗಿ ಸಿಂಗಾಪುರ ಹೇಳಿದೆ. ಅವರು ಆಶ್ರಯಕ್ಕಾಗಿ ಸಿಂಗಾಪುರ ಸರ್ಕಾರಕ್ಕೆ ಯಾವುದೇ ಮನವಿ ಸಲ್ಲಿಸಿಲ್ಲ ಎನ್ನುವುದನ್ನೂ ಸಿಂಗಾಪುರ ಖಚಿತಪಡಿಸಿದೆ. ಶ್ರೀಲಂಕಾದ ಆರ್ಥಿಕತೆಯನ್ನು ದಿವಾಳಿ ಮಾಡಿದ ರಾಜಪಕ್ಸ ವಿರುದ್ಧ ಶ್ರೀಲಂಕಾದಲ್ಲಿ ಸಾರ್ವಜನಿಕ ದಂಗೆ ನಡೆದಿತ್ತು. ರಾಷ್ಟ್ರಪತಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ ಬೆನ್ನಲ್ಲಿಯೇ ರಾಜಪಕ್ಸ ಇಡೀ ಕುಟುಂಬದೊಂದಿಗೆ ಪಲಾಯನ ಮಾಡಿದ್ದರು.ಬುಧವಾರ ಮುಂಜಾನೆ ಪತ್ನಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ 73 ವರ್ಷದ ಗೊಟಬಯ ರಾಜಪಕ್ಸ ಮಿಲಿಟರಿ ಜೆಟ್‌ನಲ್ಲಿ ಮಾಲ್ಡಿವ್ಸ್‌ಗೆ ಪ್ರಯಾಣ ಮಾಡಿದ್ದರು. ದೇಶದ ಆರ್ಥಿಕ ಸ್ಥಿತಿಯನ್ನು ತಪ್ಪಾಗಿ ನಿರ್ವಹಣೆ ಮಾಡಿದ್ದ ಕಾರಣಕ್ಕೆ ಗೊಟಬಯ ರಾಜಪಕ್ಸ ವಿರುದ್ಧ ಶ್ರೀಲಂಕಾದ ಜನರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು.

ಶ್ರೀಲಂಕಾದಲ್ಲಿ(Sri Lanka) ಅಧ್ಯಕ್ಷ ಪದವಿಯಲ್ಲಿದ್ದ ವ್ಯಕ್ತಿ ಕಾನೂನು ಕ್ರಮದಿಂದ ವಿನಾಯಿತಿಯನ್ನು ಪಡೆದುಕೊಳ್ಳುತ್ತಾರೆ. ಮುಂಬರುವ ಸರ್ಕಾರದಿಂದ ಬಂಧನವಾಗುವ ಸಾಧ್ಯತೆಯನ್ನು ಅರಿತ ಗೊಟಬಯ ರಾಜಪಕ್ಸ (Gotabaya Rajapaksa), ಸಿಂಗಾಪುರಕ್ಕೆ(Singapore) ಪಲಾಯನ ಮಾಡುವವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ (Resign) ನೀಡಿರಲಿಲ್ಲ. 22 ಮಿಲಿಯನ್‌ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ದೇಶವು ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದ್ದು, ಏಳು ದಶಕಗಳಲ್ಲಿಯೇ ಜನರು ಅತ್ಯಂತ ಹೀನಾಯ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಕ್ಷಾಂತರ ಜನರು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ.


ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಕೆ: ರಾಜಪಕ್ಸ ತಮ್ಮ ರಾಜೀನಾಮೆಯನ್ನು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರಿಗೆ ಕಳುಹಿಸಿದ್ದಾರೆ. ಸರ್ವಪಕ್ಷ ಸರ್ಕಾರ ರಚನೆಗೆ ದಾರಿ ಮಾಡಿಕೊಡಲು ಬುಧವಾರ ರಾಜೀನಾಮೆ ನೀಡುವುದಾಗಿ ಗೊಟಬಯ ಭರವಸೆ ನೀಡಿದ್ದರು. ಇದರ ನಡುವೆ ಅವರು ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಲ್ಲದೆ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣ ಮಾಡಿದ್ದರು. ಇದರ ಬೆನ್ನಲ್ಲಿಯೇ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ಇನ್ನಷ್ಟು ತೀವ್ರವಾಗಿದ್ದವು.

ಇದನ್ನೂ ಓದಿ: Sri Lanka Crisis ಪರಾರಿಯಾಗಲ್ಲ ಎಂದಿದ್ರು ಗೊಟಬಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಯಸೂರ್ಯ!

ಸಿಂಗಾಪುರಕ್ಕೆ ತೆರಳಿದ ಗೊಟಬಯ:
ಗುರುವಾರ, ಅವರು ಸೌದಿ ಏರ್‌ಲೈನ್ಸ್ ಫ್ಲೈಟ್ - SV 788 ರಲ್ಲಿ ಸಿಂಗಾಪುರಕ್ಕೆ ಗೊಟಬಯ ರಾಜಪಕ್ಸ ಬಂದಿಳಿದರು. ಸಿಂಗಾಪುರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ರಾಜಪಕ್ಸ ಅವರಿಗೆ "ಖಾಸಗಿ ಭೇಟಿಯಲ್ಲಿ ಸಿಂಗಾಪುರಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ" ಎಂದು ಖಚಿತಪಡಿಸಿದ್ದಾರೆ. ಸಿಂಗಾಪುರ ದೇಶವು ಸಾಮಾನ್ಯವಾಗಿ ಆಶ್ರಯದ ಮನವಿಗಳನ್ನು ಸ್ವೀಕಾರ ಮಾಡುವುದಿಲ್ಲ ರಾಜಪಕ್ಸ ಆದಷ್ಟು ಬೇಗ ರಾಜೀನಾಮೆ ಪತ್ರವನ್ನು ಸಲ್ಲಿಸಬೇಕು ಇಲ್ಲದಿದ್ದರೆ ಅವರನ್ನು ಕಚೇರಿಯಿಂದ ವಜಾಗೊಳಿಸಲು ಇತರ ಆಯ್ಕೆಗಳನ್ನು ಪರಿಗಣಿಸುವುದಾಗಿ ಸ್ಪೀಕರ್ ಅಬೇವರ್ಧನ ಗುರುವಾರ ತಿಳಿಸಿದ್ದರು.

ಇದನ್ನೂ ಓದಿ: Sri Lanka Crisis: ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ ಸಂಸತ್ತು ವಶಕ್ಕೆ; ಪ್ರತಿಟಭನಾಕಾರರ ಬೆದರಿಕೆ

ಶುಕ್ರವಾರ ಸಹೋದರರ ವಿಚಾರಣೆ: ಗೊಟಬಯ ಅವರ ಸಹೋದರರಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ (Mahinda Rajapaksa) ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ (Basil Rajapaks) ಅವರು ತಮ್ಮ ವಿರುದ್ಧ ಸಲ್ಲಿಸಿರುವ ಮೂಲಭೂತ ಹಕ್ಕುಗಳ ಅರ್ಜಿಯನ್ನು(Fundamental Rights petition) ಶುಕ್ರವಾರದಂದು ವಿಚಾರಣೆ ಮಾಡುವವರೆಗೆ ದೇಶವನ್ನು ತೊರೆಯುವುದಿಲ್ಲ ಎಂದು ಗುರುವಾರ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ್ದಾರೆ ಎಂದು ಮಿರರ್ ವರದಿ ಮಾಡಿದೆ. ಲಂಕಾ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಹಿಂದಿನ ಶಕ್ತಿಶಾಲಿ ರಾಜಪಕ್ಸ ಕುಟುಂಬದ ಇಬ್ಬರು ಸದಸ್ಯರ ವಿರುದ್ಧದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲಿದೆ. ಅಧ್ಯಕ್ಷ ರಾಜಪಕ್ಸ ಅವರ ಕಚೇರಿಯ ಹೊರಗೆ ಪ್ರತಿಭಟನಾಕಾರರು ದಾಳಿ ಮಾಡಿದ ಗಂಟೆಗಳ ನಂತರ, ರಾಜಪಕ್ಸ ವಂಶದವರಾಗಿದ್ದ ಮಹಿಂದಾ ಅವರು ಮೇ 9 ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

Follow Us:
Download App:
  • android
  • ios