Sri Lanka Crisis ಪರಾರಿಯಾಗಲ್ಲ ಎಂದಿದ್ರು ಗೊಟಬಯ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಯಸೂರ್ಯ!

  • ರಾಜೀನಾಮೆ ನೀಡುತ್ತೇನೆ, ಲಂಕಾ ಪರಿಸ್ಥಿತಿ ನಿಯಂತ್ರಣಕ್ಕೆ ಅನಿವಾರ್ಯ
  • ಯಾವುದೇ ಕಾರಣಕ್ಕೂ ಪರಾರಿಯಾಗಲ್ಲ ಎಂದಿದ್ದ ಗೊಟಬಯ
  • ಅಧ್ಯಕ್ಷ ಗೊಟಬಯ ಹೇಳಿದ ಎರಡನ್ನೂ ಮಾಡಿಲ್ಲ, ಸನತ್ ಜಯಸೂರ್ಯ
Sri lanka Crisis people unrest due to mismanaged political administration says Sanath Jayasuriya ckm

ಕೊಲೊಂಬೊ(ಜು.14): ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಿಂದ ಶ್ರೀಲಂಕಾ ಹೊತ್ತಿ ಉರಿಯುತ್ತಿದೆ. ಗಲಭೆ, ಪ್ರತಿಭಟನೆ, ಪ್ರಧಾನಿ, ಅಧ್ಯಕ್ಷರ ಮನೆಗೆ ನುಗ್ಗಿ ದಾಂಧಲೆ ಸೇರಿದಂತೆ ಹಲವು ಹಿಂಸಾಚಾರ ಘಟನೆಗಳು ನಡೆದಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಪರಾರಿಯಾದ ಬಳಿಕ ಲಂಕಾ ಜನರ ಆಕ್ರೋಶ ಹೆಚ್ಚಾಗಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅಧ್ಯಕ್ಷರ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಗೊಟಬಯ ರಾಜಪಕ್ಸ ಭರವಸೆ ನೀಡಿದ ಯಾವ ಕಾರ್ಯಗಳನ್ನು ಮಾಡಿಲ್ಲ, ಲಂಕಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ ಮತ್ತೆ ಸಹಜ ಸ್ಥಿತಿಗೆ ಮರಳಲು ರಾಜೀನಾಮೆ ನೀಡುತ್ತೇನೆ.  ಆದರೆ ಶ್ರೀಲಂಕಾದಿಂದ ಪರಾರಿಯಾಗುವುದಿಲ್ಲ ಎಂದಿದ್ದರು. ಆದರೆ ರಾಜೀನಾಮೆಯನ್ನೂ ನೀಡಿಲ್ಲ, ಜೊತೆಗೆ ಪಲಾಯನ ಮಾಡಿದ್ದಾರೆ. ಇದರಿಂದ ಶ್ರೀಲಂಕಾ ಮತ್ತಷ್ಟು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಸನತ್ ಜಯಸೂರ್ಯ ಹೇಳಿದ್ದಾರೆ.  ಗೊಟಬಯ ರಾಜಪಕ್ಸ ಮಿಲಿಟರಿ ವಿಮಾನ ಮೂಲಕ ರಾತ್ರೋ ರಾತ್ರಿ ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ. ಇದೀಗ ಮಾಲ್ಡೀವ್ಸ್‌ನಿಂದ ಪ್ರೈವೇಟ್ ಜೆಟ್ ಮೂಲಕ ಸಿಂಗಾಪೂರಕ್ಕೆ ತೆರಳಲು ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದ ಒಂದು ವರ್ಷದಿಂದ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ರಾಜಕೀಯ ಕಾರಣಗಳಿಂದ ಹದಗೆಡಲು ಆರಂಭಿಸಿದೆ. ಕಳೆದ 6 ತಿಂಗಳಲ್ಲಿ ಶ್ರೀಲಂಕಾ ಪರಿಸ್ಥಿತಿ ಜಗತ್ತಿನ ಮುಂದೆ ಜಗಜ್ಜಾಹೀರಾಗಿದೆ. ಆದರೆ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾತ್ರ ತಮ್ಮ ಕುಟುಂಬದ ಕುರಿತು ಚಿಂತೆ ಮಾಡಿದರೆ ಹೊರತು, ಲಂಕಾ ಜನರ ಬಗ್ಗೆ ಎಳ್ಳಷ್ಟು ಯೋಚನೆ ಮಾಡಲಿಲ್ಲ. ಜನರು ಅಧ್ಯಕ್ಷರು ಹಾಗೂ ಪ್ರಧಾನಿ ರಾಜೀನಾಮೆ ಆಗ್ರಹಿಸಿದ ಬೆನ್ನಲ್ಲೇ ರಾಜೀನಾಮೆ ನೀಡಬೇಕಿತ್ತು. ಹಾಗಾಗಿದ್ದರೆ ಶ್ರೀಲಂಕಾ ಇಂದು ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಪ್ರಯತ್ನ ಮಾಡುವ ಅವಕಾಶ ಒದಗಿಬರುತ್ತಿತ್ತು. ಆದರೆ ಇದೀಗ ಆರ್ಥಿಕತೆ ಜೊತೆಗೆ ರಾಜಕೀಯ ಬಿಕ್ಕಟ್ಟನ್ನು ತಂದಿಟ್ಟಿದ್ದಾರೆ ಎಂದು ಸನತ್ ಜಯಸೂರ್ಯ ಹೇಳಿದ್ದಾರೆ.

ನಮ್ಮ ಕಷ್ಟಗಳಿಗೆ ರಾಜಕಾರಣಿಗಳು ಸ್ಪಂದಿಸಲಿಲ್ಲ: ಶ್ರೀಲಂಕಾ ಜನತೆ

ಕೊಲೊಂಬೊ ಅಧಿಕೃತ ನಿವಾಸದಿಂದ ಗೌಪ್ಯ ಸ್ಥಳಕ್ಕೆ ತೆರಳಿದ ಗೊಟಬಯ ರಾಜಪಕ್ಸ, ಜುಲೈ 13 ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅಧಿಕಾರವನ್ನು ಹಸ್ತಾಂತರಿಸಿ ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗೆ ಒತ್ತು ನೀಡುತ್ತೇನೆ ಎಂದು ಗೊಟಬಯ ಹೇಳಿದ್ದರು. ಆದರೆ ಗೊಟಬಯ ಹೇಳಿಕೆ ಹಾಗೂ ಅವರ ನಡತೆ ತದ್ವಿರುದ್ದವಾಗಿದೆ. ರಾಜೀನಾಮೆ ನೀಡಿದ ದೇಶ ಬಿಟ್ಟು ಪರಾರಿಯಾಗಿದ್ದಾರೆ. ರಾಜೀನಾಮೆ ನೀಡಿ ರಾಜಪಕ್ಸ ಶ್ರೀಲಂಕಾದಲ್ಲಿ ಉಳಿದುಕೊಂಡರೆ ಜನರ ಆಕ್ರೋಶ ತಣ್ಣಗಾಗುತ್ತಿತ್ತು. ಆದರೆ ಇದ್ಯಾವುದನ್ನು ಗೊಟಬಯ ಮಾಡಲಿಲ್ಲ ಎಂದು ಸನತ್ ಜಯಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ನಾನು ಪಾಲ್ಗೊಂಡಿದ್ದೇನೆ. ಆದರೆ ಶಾಂತಿಯುತ ಪ್ರತಿಭಟನೆಗೆ ನನ್ನ ಬೆಂಬಲವಿದೆ. ಆದರೆ ಸದ್ಯ ಪ್ರತಿಭಟನೆಗಿಂತ ಶ್ರೀಲಂಕಾ ಶಾಂತವಾಗಬೇಕು. ಜನರ ಜೀವನ ಸಹಜಸ್ಥಿತಿಗೆ ಮರಳಬೇಕು. ಹೀಗಾಗಿ ಪ್ರತಿಭಟನೆಗಿಂತ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಹಕರಿಸಬೇಕು ಎಂದು ಸನತ್ ಜಯಸೂರ್ಯ ಮನವಿ ಮಾಡಿದ್ದಾರೆ.

Sri Lanka Crisis: ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ ಸಂಸತ್ತು ವಶಕ್ಕೆ; ಪ್ರತಿಟಭನಾಕಾರರ ಬೆದರಿಕೆ

ಭಾರತ ನಮಗೆ ಸಹಕಾರ ನೀಡಿದೆ. ಈ ಪರಿಸ್ಥಿತಿ ಹೊರಬರಲು ಭಾರತ ಎಲ್ಲಾ ನೆರವು ನೀಡಿದೆ. ಆದರೆ ಪ್ರತಿ ಬಾರಿ ಭಾರತದ ಬಳಿ ಸಹಾಯ ಕೇಳಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಿಂದ ಹೊರಬರಲು ನಾವು ಯೋಜನೆ ರೂಪಿಸಬೇಕಿದೆ. ಪ್ರತಿ ಭಾರಿ ಭಾರತ ಸೇರಿದಂತೆ ಇತರ ದೇಶದ ನೆರವು ಕೇಳುವುದು ಸಮಂಜಸವಲ್ಲ ಎಂದು ಸನತ್ ಜಯಸೂರ್ಯ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios