ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡಾ ರಾಜೀನಾಮೆ, ದ್ವೀಪ ರಾಷ್ಟ್ರದಲ್ಲಿನ್ನು ಸರ್ವಪಕ್ಷ ಸರ್ಕಾರ!
* ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಅರಾಜಕತೆ
* ಬೀದಿಗಿಳಿದು ಪ್ರತಿಭಟನೆಗೆ ಮುಂದಾದ ನಾಗರಿಕರು
* ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡಾ ರಾಜೀನಾಮೆ
ಕೊಲಂಬೋ(ಜು.09): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಗದ್ದಲದ ನಡುವೆಯೇ ಸರ್ವಪಕ್ಷ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ಸಾರ್ವಜನಿಕರ ಆಕ್ರೋಶ ಮತ್ತು ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಜಕೀಯ ಬದಲಾವಣೆಗಳ ಬಗ್ಗೆ ಚರ್ಚೆಗಳಾಗುತ್ತಿತ್ತು ಮತ್ತು ಅಧ್ಯಕ್ಷ ಗೊಟಬಾಯ ರಾಜೀನಾಮೆಗೆ ನಿರಂತರ ಒತ್ತಡ ಹೇರಲಾಗಿತ್ತು. ಹೀಗಿರುವಾಗಲೇ ಪ್ರಧಾನಿ ರನಿಲ್ ವಿಕ್ರಮಸಿಂಘೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶನಿವಾರ, ಸಾವಿರಾರು ಮಂದಿ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದಾದ ಬಳಿಕ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ತಮ್ಮ ನಿವಾಸವನ್ನು ತೊರೆದು ಓಡಿಹೋಗಬೇಕಾಯಿತು. ಈ ಮೊದಲಿನಿಂದಲೂ ಅಧ್ಯಕ್ಷ ಗೊಟಬಾಯ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆಗೆ ಬೇಡಿಕೆಗಳು ಕೇಳಿ ಬಂದಿದ್ದವಾದರೂ, ಇಬ್ಬರೂ ರಾಜೀನಾಮೆ ನೀಡಲು ಸಿದ್ಧರಿರಲಿಲ್ಲ.
ಶ್ರೀಲಂಕಾ ನಾಗರಿಕರು ಉದ್ರಿಕ್ತ ಪ್ರಧಾನಿ ರನಿಲ್ ಬಿಕ್ರಮಸಿಂಘೆ ನಿವಾಸ ಧಗಧಗ!
ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆಗೆ ಸಿದ್ಧ
ಪಿಎಂಒ ಪರವಾಗಿ ಇದೀಗ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ವಪಕ್ಷ ಸರ್ಕಾರ ರಚನೆ ಮಾಡಲು ಸಿದ್ಧ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಸ್ಪೀಕರ್ ಮಹಿಂದಾ ಯಾಪಾ ಅಭಯವರ್ಧನೆ ಅವರ ಮನೆಯಲ್ಲಿ ಈ ಕುರಿತು ನಡೆದ ನಾಯಕರ ಜೂಮ್ ವರ್ಚುವಲ್ ಸಭೆಯಲ್ಲಿ ಅಧ್ಯಕ್ಷ ಮತ್ತು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಪ್ರಸ್ತಾವನೆ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಂದರಿಂದ ಟ್ವೀಟ್
ವಿಕ್ರಮಸಿಂಘೆ ಅವರ ಸರ್ಕಾರದಲ್ಲಿ ಸಂಸದ ರೌಫ್ ಹಕೀಮ್ ಅವರು ಟ್ವೀಟ್ ಮಾಡಿದ್ದು, ನಾಯಕರು ಪ್ರಧಾನಿ ಮತ್ತು ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಸ್ತಾವನೆ ಕುರಿತು ಸ್ಪೀಕರ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಹೊಸ ಸರ್ಕಾರ ರಚನೆ ಮತ್ತು ಆಯ್ಕೆಗೆ ಒಮ್ಮತ ಮೂಡಿತು
ಏತನ್ಮಧ್ಯೆ, ಅಧ್ಯಕ್ಷ ಮತ್ತು ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಬಹುತೇಕ ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯ ಸಚಿವ ವಿಜೇದಸ್ಸ ರಾಜಪಕ್ಸೆ ಹೇಳಿದ್ದಾರೆ. ಸ್ಪೀಕರ್ ಒಂದು ವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂಬುದಕ್ಕೆ ಪಕ್ಷದ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು. ಪಾರ್ಲಿಮೆಂಟನ್ನು ಕರೆದು ಸರ್ವಪಕ್ಷ ಸರ್ಕಾರ ರಚಿಸಬೇಕು, ನಂತರ ಹಂಗಾಮಿ ಅಧ್ಯಕ್ಷರನ್ನು ನೇಮಿಸಬೇಕು ಎಂದು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. ಆದಾಗ್ಯೂ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಪ್ರಸ್ತಾವನೆಗಳನ್ನು ಒಪ್ಪಲಿಲ್ಲ ಎಂದು ನ್ಯಾಯ ಸಚಿವರು ಹೇಳಿದರು.
Sri Lanka Economic Crisis: ನಿವಾಸಕ್ಕೆ ಪ್ರತಿಭಟನಾಕಾರರ ಮುತ್ತಿಗೆ, ದೇಶದಿಂದ ಕಾಲ್ಕಿತ್ತ ಅಧ್ಯಕ್ಷ ಗೋಟಬ ರಾಜಪಕ್ಸ
ಪಕ್ಷದ ಸಭೆಯಲ್ಲಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ
ಈ ಸಭೆಯಲ್ಲಿ ಸ್ಪೀಕರ್ ಮಹಿಂದ ಯಾಪಾ ಅಭಯವರ್ಧನ ಮತ್ತು ಆಡಳಿತ ಪಕ್ಷದ ಉನ್ನತ ನಾಯಕರು ಭಾಗವಹಿಸಿದ್ದರು. ಸಮಗಿ ಜನ ಬಲವೇಗಯ ಪಕ್ಷದ ಮುಖಂಡರ ಸಭೆಯಲ್ಲಿ ತೆಗೆದುಕೊಂಡ ನಾಲ್ಕು ಪ್ರಮುಖ ನಿರ್ಧಾರಗಳನ್ನು ಸಂಸದ ಡಾ.ಹರ್ಷ ಡಿ ಸಿಲ್ವಾ ಬಹಿರಂಗಪಡಿಸಿದ್ದಾರೆ.
1- ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತಕ್ಷಣವೇ ರಾಜೀನಾಮೆ ನೀಡುತ್ತಾರೆ.
2- ಸ್ಪೀಕರ್ ಗರಿಷ್ಠ 30 ದಿನಗಳವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.
3- ಸಂಸತ್ತು ಉಳಿದ ಅವಧಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.
4- ಶೀಘ್ರದಲ್ಲೇ ಮಧ್ಯಂತರ ಸರ್ವಪಕ್ಷ ಸರ್ಕಾರವನ್ನು ನೇಮಿಸಲಾಗುವುದು ಮತ್ತು ಶೀಘ್ರದಲ್ಲೇ ಚುನಾವಣೆಯೂ ನಡೆಯಲಿದೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ
ಶನಿವಾರ, ಸಾವಿರಾರು ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಇದ್ದಕ್ಕಿದ್ದಂತೆ ಮುತ್ತಿಗೆ ಹಾಕಿದ್ದಾರೆ. ಅಧ್ಯಕ್ಷ ಗೊಟಬಾಯ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಹಣದುಬ್ಬರ ಉತ್ತುಂಗದಲ್ಲಿದೆ. ಜನರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದಕ್ಕೆ ಸರ್ಕಾರದ ನೀತಿಗಳೇ ಕಾರಣ ಎಂದು ಜನ ಆರೋಪ ಮಾಡುತ್ತಿದ್ದಾರೆ.