ಕೊಲಂಬೋ(ಏ.13): ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೊರೋನಾ ಶ್ರೀಲಂಕಾಗೂ ಕಾಲಿಟ್ಟಿದೆ. ಈಗಾಗಲೇ ಈ ದ್ವೀಪದಲ್ಲಿ ಕೊರೋನಾಗೆ ಏಳು ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಲಾರಂಭಿಸಿದೆ. ಹೀಗಿರುವಾಗ ಇಲ್ಲಿನ ಸರ್ಕಾರ ಕೊರೋನಾದಿಂದ ಮೃತಪಟ್ಟವರ ಶವ ದಹಿಸಿ ಅಂತ್ರ ಕ್ರಿಯೆ ನೆರವೇರಿಸುವಂತೆ ಆದೇಶಿಸಿದೆ. ಆದರೀಗ ಇಲ್ಲಿನ ಅಲ್ಪ ಸಂಖ್ಯಾತರಾದ ಮುಸಲ್ಮಾನ ಸಮುದಾಯ ಭಾರೀ ವಿರೋಧ ವ್ಯಕ್ತಪಡಿಸಿದೆ. ಈ ಆದೇಶ ಇಸ್ಲಾಂ ಸಂಪ್ರದಾಯಕ್ಕೆ ವಿರೋಧವಾಗಿದೆ ಎಂದು ಪ್ರತಿಭಟನೆಯೂ ಆರಂಭವಾಗಿದೆ.

ಇನ್ನು ಶ್ರೀಲಂಕಾದಲ್ಲಿ ಕೊರೋನಾಗೆ ಸಾವನ್ನಪ್ಪಿರುವ ಒಟ್ಟು ಏಳು ಮಂದಿಯಲ್ಲಿ ಮೂವರು ಮುಸಲ್ಮಾನರು. ಆದರೀಗ ಮುಸಲ್ಮಾನ ಸಮುದಾಯ ಪ್ರತಿಭಟನೆ ಹಾಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, ಅಧಿಕಾರಿಗಳು ಸರ್ಕಾರದ ಆದೇಶದಂತೆ ಮೃತರ ಶವವನ್ನು ದಹಿಸಿದ್ದಾರೆ.

ವಾಹನವಿಲ್ಲ, ಕುಟುಂಬಸ್ಥರು ಬರುತ್ತಿಲ್ಲ: ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು!

ಇನ್ನು ವಿಶ್ವಸಂಸ್ಥೆ ಕೊರೋನಾಗೆ ಮೃತಪಟ್ಟವರ ಶವ ಒಂದೋ ದಹಿಸಬೇಕು ಅಥವಾ ಮಣ್ಣು ಮಾಡಬೇಕು ಎಂದು ತಿಳಿಸಿದೆ. ಹೀಗಿರುವಾಗ ಶ್ರೀಲಂಕಾದ ಆರೋಗ್ಯ ಇಲಾಖೆ  ಮಾತ್ರ ಕೊರೋನಾದಿಂದ ಮೃತಪಟ್ಟವರ ಶವ ದಹಿಸಲೇಬೇಕು ಎಂದ ನೀಡಿರುವ ಕಟ್ಟು ನಿಟ್ಟಿನ ಆದೇಶ ಭಾರೀ ಟೀಕೆಗೆ ಗುರಿಯಾಗಿದೆ.

ಇನ್ನು ಇಲ್ಲಿನ ವಿಪಕ್ಷಗಳು ಕೂಡಾ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಸಂದರ್ಭದಲ್ಲಿ ಆಡಳಿತ ವರ್ಗ ಜನರನ್ನು ಒಂದುಗೂಡಿಸುವ ಯತ್ನ ನಡೆಸಬೇಕೇ ಹೊರತು ಅವರನ್ನು ಪರಸ್ಪರ ದೂರ ಮಾಡಬಾರದು ಎಂದಿದೆ.

ಇನ್ನು ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಈವರರೆಗೆ ಒಟ್ಟು 200 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂಬುವುದು ಉಲ್ಲೇಖನೀಯ.