Asianet Suvarna News Asianet Suvarna News

ಹಣದ ಮೌಲ್ಯ ಕುಸಿತ, ಆಹಾರ ಬಿಕ್ಕಟ್ಟು: ಲಂಕಾಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ

* ಕೋವಿಡ್‌ನಿಂದ ಪ್ರವಾಸೋದ್ಯಮಕ್ಕೆ ಹೊಡೆತ, ವಿದೇಶಿ ವಿನಿಮಯ ಕುಸಿತ

* ವಿದೇಶದಿಂದ ಆಮದಿಗೆ ಹಣ ಇಲ್ಲ, ಸರ್ಕಾರದಿಂದಲೇ ಆಹಾರ ವಿತರಣೆ

* ಆಹಾರ ಬಿಕ್ಕಟ್ಟು: ಲಂಕಾಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ

Sri Lanka declares economic emergency to contain food prices as forex crisis worsens pod
Author
Bangalore, First Published Sep 2, 2021, 7:29 AM IST
  • Facebook
  • Twitter
  • Whatsapp

ಕೊಲಂಬೋ(ಸೆ.02): ಕೋವಿಡ್‌ ನೀಡಿದ ಆರ್ಥಿಕ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳದ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಬೇರೆ ದಾರಿ ಕಾಣದ ಸರ್ಕಾರ, ಜನಸಾಮಾನ್ಯರನ್ನು ರಕ್ಷಿಸುವ ಸಲುವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ. ಹೀಗಾಗಿ ಅಕ್ಕಿ, ಸಕ್ಕರೆ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಸರ್ಕಾರವೇ ಪಡಿತರ ವ್ಯವಸ್ಥೆಯ ಮೂಲಕ ಅಗ್ಗದ ದರದಲ್ಲಿ ಮಾರಾಟ ಮಾಡಲಿದೆ.

ಒಂದು ವೇಳೆ ಈ ವಸ್ತುಗಳನ್ನು ಯಾರಾದರೂ ಅಕ್ರಮವಾಗಿ ಸಂಗ್ರಹಿಸಿದ್ದು ಕಂಡುಬಂದಲ್ಲಿ ಅದನ್ನು ವಶಪಡಿಸಿಕೊಂಡು ಅವರನ್ನು ಬಂಧಿಸುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ. ಹೀಗಾಗಿ ಕಳೆದ ಹಲವು ತಿಂಗಳಿನಿಂದ ಅಗತ್ಯ ವಸ್ತುಗಳ ದರ ಗಗನಕ್ಕೇರಿ ಜೀವನವೇ ದುಸ್ತರವಾಗಿದ್ದ ದೇಶದ ಜನತೆ ತುಸು ನಿಟ್ಟುಸಿರು ಬಿಡುವಂತಾಗಿದೆ.

"

ಕಾರಣ ಏನು?:

ಲಂಕಾದಲ್ಲಿ ಪ್ರವಾಸೋದ್ಯಮ ಆರ್ಥಿಕತೆಯ ಪ್ರಮುಖ ಮೂಲ. 30 ಲಕ್ಷಕ್ಕೂ ಹೆಚ್ಚು ಜನರಿಗೆ ಅದು ಉದ್ಯೋಗ ಕಲ್ಪಿಸಿದೆ. ಆದರೆ 2019ರಲ್ಲಿ ಈಸ್ಟರ್‌ ದಿನ ಚಚ್‌ರ್‍ ಮೇಲೆ ನಡೆದ ಬಾಂಬ್‌ ದಾಳಿಯ ಬಳಿಕ ಪ್ರವಾಸಿಗರ ಆಗಮನ ಕುಂಠಿತವಾಗಿದೆ. ಅದರ ಬೆನ್ನಲ್ಲೇ ಒಂದೂವರೆ ವರ್ಷದಿಂದ ಕೋವಿಡ್‌ ಕಾರಣ ಪ್ರವಾಸಿಗರ ಆಗಮನ ಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ವಿದೇಶಿ ವಿನಿಮಯ ಸಂಗ್ರಹ ಮತ್ತಷ್ಟುಕುಸಿದಿದೆ. ಮತ್ತೊಂದೆಡೆ ಸಾಲದ ಪ್ರಮಾಣವೂ ಭಾರೀ ಏರಿದೆ. ಈ ವರ್ಷವೊಂದರಲ್ಲೇ ಅದು 75000 ಕೋಟಿ ರು. ವಿದೇಶಿ ಸಾಲ ಮರುಪಾವತಿ ಮಾಡಬೇಕಿತ್ತು. ಅದರಲ್ಲಿ ಅಂದಾಜು 30000 ಕೋಟಿ ರು. ಬಾಕಿ ಇದೆ. ಇದರ ಜೊತೆಗೆ ದೇಶೀಯ ಸಾಲ ಕೂಡ ಇದೆ. (1 ಅಮೆರಿಕನ್‌ ಡಾಲರ್‌ಗೆ 200 ಶ್ರೀಲಂಕಾ ರುಪಿಗೆ ಸಮ).

2019ರಲ್ಲಿ ರಾಜಪಕ್ಸೆ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದೇಶಿ ವಿನಿಮಯ ಸಂಗ್ರಹ ಪ್ರಮಾಣ 7.5 ಶತಕೋಟಿ ಡಾಲರ್‌ (1.50 ಲಕ್ಷ ಕೋಟಿ ಶ್ರೀಲಂಕಾ ರುಪಿ) ಇತ್ತು. ಅದು ಈಗ 2.8 ಶತಕೋಟಿ ಡಾಲರ್‌ (56000 ಕೋಟಿ ಶ್ರೀಲಂಕಾ ರುಪಿ)ಗೆ ಇಳಿದಿದೆ. ಜೊತೆಗೆ ಈ ಅವಧಿಯಲ್ಲಿ ಡಾಲರ್‌ ಎದುರು ಲಂಕಾ ರುಪಾಯಿ ಮೌಲ್ಯ ಶೇ.20ರಷ್ಟುಕುಸಿತ ಕಂಡಿದೆ.

ಹೀಗಾಗಿ ಬಹುತೇಕ ವಸ್ತುಗಳಿಗೆ ವಿದೇಶಗಳನ್ನೇ ಅವಲಂಬಿಸಿದ ಶ್ರೀಲಂಕಾಕ್ಕೆ, ಆಮದು ಮಾಡಿಕೊಳ್ಳುವ ವಸ್ತುಗಳ ದರ ದುಬಾರಿಯಾಗಿ ಪರಿಣಮಿಸಿದೆ. ಮತ್ತೊಂದೆಡೆ ವಿದೇಶಿ ವಿನಿಮಯ ಉಳಿಸಲು ಲಂಕಾ ಸರ್ಕಾರವು ಟೂತ್‌ಬ್ರಷ್‌, ಕಾರು, ರಸಗೊಬ್ಬರ, ಸಕ್ಕರೆ ಮೊದಲಾದ ವಸ್ತುಗಳ ಆಮದಿಗೆ ನಿಷೇಧ ಹೇರಿದ ಕಾರಣ, ದೇಶೀಯವಾಗಿ ಅವುಗಳ ಲಭ್ಯತೆ ಇಳಿಕೆಯಾಗಿದೆ. ಇದು ಕೂಡ ದರ ಏರಿಕೆಗೆ ಕಾರಣವಾಗಿದೆ.

ಉದಾಹರಣೆಗೆ ಸಕ್ಕರೆ ಬೆಲೆ ಕೆಜಿಗೆ 150 ರು., ಅಕ್ಕಿ ಬೆಲೆ 100- 130 ರು., ಪೆಟ್ರೋಲ್‌ ಲೀಟರ್‌ಗೆ 157 ರು., ಡೀಸೆಲ್‌ 111 ರು., ಸೀಮೆಎಣ್ಣೆ 77 ರು. ತಲುಪಿದ್ದು ಜನರ ಜೀವನ ಹೈರಾಣಾಗಿಸಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿರುವ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಸರ್ಕಾರ, ತಕ್ಷಣದಿಂದಲೇ ಜಾರಿಗೆ ಬರುವಂತೆ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ. ಈ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸರ್ಕಾರವೇ ಪಡಿತರ ವ್ಯವಸ್ಥೆ ಮೂಲಕ ಅಕ್ಕಿ, ಸಕ್ಕರೆ, ಹಾಲಿನಪುಡಿ, ಈರುಳ್ಳಿ, ಆಲೂಗಡ್ಡೆ, ಸೀಮೆಎಣ್ಣೆ ಮೊದಲಾದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ.

ಏನಿದು ಆರ್ಥಿಕ ತುರ್ತು ಸ್ಥಿತಿ?

ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾದಾಗ ಅಧ್ಯಕ್ಷರು ಇದನ್ನು ಘೋಷಿಸಬಹುದು. ಯಾವುದೇ ವ್ಯಾಪಾರಿ ಹೊಂದಿರುವ ಆಹಾರ ಪದಾರ್ಥವನ್ನು ಜಪ್ತಿ ಮಾಡಬಹುದು. ಅಕ್ರಮ ದಾಸ್ತಾನು ಮಾಡುವವರನ್ನು ಬಂಧಿಸಬಹುದು.

ಹೇರಿದ್ದು ಏಕೆ?

ಶ್ರೀಲಂಕಾಕ್ಕೆ ಪ್ರವಾಸೋದ್ಯಮವೇ ಆದಾಯ ಮೂಲ. ಕೊರೋನಾದಿಂದ ಅದಕ್ಕೆ ಹೊಡೆತ ಬಿದ್ದಿದೆ. ಪರಿಣಾಮ ವಿದೇಶಿ ವಿನಿಮಯ ಸಂಗ್ರಹ ಭಾರಿ ಕುಸಿದಿದೆ. ರುಪಾಯಿ ಮೌಲ್ಯ ಕಳೆದುಕೊಂಡಿದೆ. 30 ಸಾವಿರ ಕೋಟಿ ರು. ಸಾಲ ತೀರಿಸಬೇಕಾಗಿದೆ. ವಿದೇಶದಿಂದ ವಸ್ತುಗಳನ್ನು ಖರೀದಿಸಿದರೆ ಅದಕ್ಕೆ ಮರುಪಾವತಿಸಲು ಹಣ ಇಲ್ಲ. ಹೀಗಾಗಿ ಲಭ್ಯ ಇರುವ ಉತ್ಪನ್ನಗಳ ಬೆಲೆ ದುಬಾರಿಯಾಗಿದೆ.

ಪರಿಣಾಮ ಏನು?

ಸರ್ಕಾರ ನಿಗದಿಪಡಿಸಿದ ಬೆಲೆಯಲ್ಲಿ ಅಥವಾ ಆಮದು ದರಕ್ಕೆ ಅನುಗುಣವಾಗಿ ಭತ್ತ, ಅಕ್ಕಿ, ಸಕ್ಕರೆ ಮಾರಾಟ. ಈ ವಸ್ತುಗಳ ದಾಸ್ತಾನು ನಿಷೇಧ. ಆಹಾರ ವಿತರಣೆ ಮೇಲೆ ನಿಗಾ ಇಡಲು ಸೇನೆಯ ಮೇಜರ್‌ ಜನರಲ್‌ ಒಬ್ಬರ ನೇಮಕ.

Follow Us:
Download App:
  • android
  • ios