Asianet Suvarna News Asianet Suvarna News

ಲಂಕಾ ಮಾಜಿ ಪ್ರಧಾನಿ ಮಹಿಂದಾ ಪರಾರಿ?: ಮನೆಗೆ ಬೆಂಕಿ, ಕುಟುಂಬ ನೌಕಾ ನೆಲೆಗೆ ಶಿಫ್ಟ್‌!

* ಮಾಜಿ ಪ್ರಧಾನಿ ಮಹಿಂದಾ ಮನೆಗೆ ಬೆಂಕಿ ಮಹಿಂದಾ ಕುಟುಂಬ ನೌಕಾ ನೆಲೆಗೆ ಶಿಫ್ಟ್‌

* ಆಡಳಿತ ಪಕ್ಷದ 45 ನಾಯಕರ ಮನೆ, ನೂರಾರು ವಾಹನಕ್ಕೆ ಪ್ರತಿಭಟನಾಕಾರರಿಂದ ಬೆಂಕಿ

* ಹಿಂಸೆಗೆ ಪ್ರಚೋದನೆ ನೀಡಿದ ಮಹಿಂದಾ ರಾಜಪಕ್ಸೆ ಬಂಧನಕ್ಕೆ ಪ್ರತಿಪಕ್ಷಗಳ ಆಗ್ರಹ

Sri Lanka crisis Rajapaksa ancestral home set on fire pod
Author
Bangalore, First Published May 11, 2022, 11:10 AM IST

ಕೊಲಂಬೋ(ಮೇ.11): ಆರ್ಥಿಕ ಬಿಕ್ಕಟ್ಟಿನ ಕಾರಣ ತೀವ್ರ ಅರಾಜಕತೆ ಸೃಷ್ಟಿಯಾಗಿರುವ ಶ್ರೀಲಂಕೆಯಲ್ಲಿ ಮಂಗಳವಾರ ಮತ್ತೊಂದು ಮಹತ್ವದ ವಿದ್ಯಮಾನ ನಡೆದಿದೆ. ಸೋಮವಾರವಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಪ್ರಧಾನಿ ಮಹಿಂದಾ ರಾಜಪಕ್ಸೆ, ಕೊಲಂಬೋದಲ್ಲಿನ ತಮ್ಮ ಅಧಿಕೃತ ನಿವಾಸ ತೊರೆದು, ಸೇನೆಯ ನೆರವಿನೊಂದಿಗೆ 270 ಕಿ.ಮೀ. ದೂರದ ಟ್ರಿಂಕಾಮಲೈನಲ್ಲಿರುವ ನೌಕಾನೆಲೆಗೆ ಪರಾರಿಯಾಗಿದ್ದಾರೆ.

ಆದರೆ ಈ ವಿಷಯ ತಿಳಿಯುತ್ತಲೇ ಸಾವಿರಾರು ಪ್ರತಿಭಟನಾಕಾರರು ನೌಕಾನೆಲೆಯ ಬಳಿಯೂ ತೀವ್ರ ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರುವ ಲಕ್ಷಣಗಳು ಕಂಡುಬಂದಿವೆ.

ಪ್ರತಿಭಟನಾಕಾರರು ಸೋಮವಾರದಿಂದಲೇ ಕೊಲಂಬೋದಲ್ಲಿರುವ ಪ್ರಧಾನಿಗಳ ಅಧಿಕೃತ ನಿವಾಸವಾದ ಟೆಂಪಲ್‌ ಟ್ರೀ ನಿವಾಸಕ್ಕೆ ಮುತ್ತಿಗೆ ಹಾಕಿ, ಕಾಂಪೌಂಡ್‌ ಒಳಗೆ ಪೆಟ್ರೋಲ್‌ ಬಾಂಬ್‌ ಎಸೆದಿದ್ದರು. ಹೀಗಾಗಿ ಮಂಗಳವಾರ ಮಹಿಂದಾ ಅವರ ಕುಟುಂಬವನ್ನು ಹೆಲಿಕಾಪ್ಟರ್‌ ಮೂಲಕ ಕೊಲಂಬೋದಿಂದ 270 ಕಿ.ಮೀ ದೂರದಲ್ಲಿರುವ ಟ್ರಿಂಕಾಮಲಿ ನೌಕಾನೆಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳಿವೆ.

ಸಾವಿನ ಸಂಖ್ಯೆ 8ಕ್ಕೆ, ಬೆಂಕಿ:

ಈ ನಡುವೆ, ಮಂಗಳವಾರ ಮತ್ತಷ್ಟುಭುಗಿಲೆದ್ದಿದ್ದು 2 ದಿನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೇರಿದೆ. ಗಾಯಗೊಂಡವರ ಸಂಖ್ಯೆ 250 ದಾಟಿದೆ.

ಆಡಳಿತಾರೂಢ ಪಕ್ಷದ ಹಾಲಿ, ಮಾಜಿ ಸಚಿವರು, ಸಂಸದರು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದ್ದು ಮಹಿಂದಾ ಅವರ ಪೂರ್ವಜರ ಮನೆ ಸೇರಿದಂತೆ 45ಕ್ಕೂ ಹೆಚ್ಚು ಮನೆಗಳು ಮತ್ತು ಗಣ್ಯರಿಗೆ ಸೇರಿದ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. 10 ಮಾಜಿ ಸಚಿವರು, 15 ಸಂಸದರು, ಸ್ಪೀಕರ್‌ ಸೇರಿದಂತೆ ಹಲವು ನಾಯಕರ ಮನೆಗಳು ಇದರಲ್ಲಿ ಸೇರಿವೆ. ಜೊತೆಗೆ ಕುರುನೆಗೆಲಾ ನಗರದಲ್ಲಿ ಮಹಿಂದಾ ಅವರು ಪೂರ್ವಜರ ಮನೆಗೂ ಅಗ್ನಿಗೆ ಆಹುತಿಯಾಗಿದೆ. ಹಿಂಸೆ ನಿಯಂತ್ರಣಕ್ಕೆ ಸೇನೆ ಹರಸಾಹಸ ಪಡುತ್ತಿದ್ದರೂ, ಅದು ಸಾಧ್ಯವಾಗಿಲ್ಲ.

ರಾಜೀನಾಮೆ, ಬಂಧನಕ್ಕೆ ಒತ್ತಾಯ:

ಈ ನಡುವೆ ಆಡಳಿತ ಪಕ್ಷದ ಜೊತೆಸೇರಿ ಮಧ್ಯಂತರ ಸರ್ಕಾರ ರಚಿಸುವಂತೆ ಮಾಜಿ ಪ್ರಧಾನಿ ಮಹಿಂದಾ ಅವರ ಕಿರಿಯ ಸೋದರ, ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಷೆ ನೀಡಿದ್ದ ಆಹ್ವಾನವನ್ನು ಪ್ರಮುಖ ವಿಪಕ್ಷ ಎಸ್‌ಜೆಬಿ ಸೇರಿದಂತೆ ಎಲ್ಲಾ ಪಕ್ಷಗಳು ತಿರಸ್ಕರಿಸಿವೆ. ಜೊತೆಗೆ ಅಧ್ಯಕರ ರಾಜೀನಾಮೆಗೂ ಆಗ್ರಹಿಸಿವೆ. ಜೊತೆಗೆ ಸೋಮವಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಾಳಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಬಂಧಿಸಬೇಕು ಮತ್ತು ಕೂಡಲೇ ಸಂಸತ್ತಿನ ಅಧಿವೇಶನ ಕರೆಯುವಂತೆ ವಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.

*ಲಂಕಾದಲ್ಲಿ ಕಂಡಲ್ಲಿ ಗುಂಡಿಗೆ ಆದೇಶ

ಶ್ರೀಲಂಕಾದಲ್ಲಿ ಹೆಚ್ಚಾಗುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಕಂಡಲ್ಲಿ ಗುಂಡು ಹೊಡೆಯಲು ಭದ್ರತಾ ಪಡೆಗಳಿಗೆ ಆದೇಶಿಸಲಾಗಿದೆ. ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆಸುತ್ತಿರುವವರು ಮತ್ತು ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡುತ್ತಿರುವವರ ಮೇಲೆ ಗುಂಡು ಹಾರಿಸುವಂತೆ ಭದ್ರತಾ ಸಚಿವಾಲಯ ಸೂಚನೆ ನೀಡಿದೆ.

Follow Us:
Download App:
  • android
  • ios