ಅಧ್ಯಕ್ಷ ಪರಾರಿಯಾದ ಬೆನ್ನಲ್ಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ!
- ಅಧ್ಯಕ್ಷ ಗೊಟಬಯ ಪರಾರಿಯಾದ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಣೆ
- ಪ್ರಧಾನಿ ರಾನಿಲ್ ಖಾಸಗಿ ಮನಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು
- ಪ್ರತಿಭಟನೆ ನಿಯಂತ್ರಿಸಲು ಸೇನೆ ನಿಯೋಜನೆ
ಕೊಲೊಂಬೊ(ಜು.13): ಶ್ರೀಲಂಕಾದ ಪರಿಸ್ಥಿತಿ ಗಂಭೀರವಾಗಿದೆ. ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ಗೆ ಪರಾರಿಯಾದ ಬೆನ್ನಲ್ಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಪ್ರಧಾನಿ ರನಿಲ್ ವಿಕ್ರಮಸಿಂಘೆ ಕಚೇರಿಯಿಂದ ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ರನಿಲ್ ವಿಕ್ರಮಸಿಂಘೆ ಆಪ್ತ ವಕ್ತಾರ ದಿನೌಕ್ ತುರ್ತು ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದಾರೆ. ಇತ್ತ ಉದ್ರಿಕ್ತರ ಗುಂಪು ಗಲಭೆ ಹೆಚ್ಚಿಸಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ್ ವಿದೇಶಕ್ಕೆ ಪರಾರಿಯಾಗಲು ಅನುಮತಿ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇದೀಗ ಪ್ರಧಾನಿ ರನಿಲ್ ಖಾಸಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇದೇ ವೇಳೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾದಲ್ಲಿ ಪರಿಸ್ತಿತಿ ವಿಕೋಪಕ್ಕೆ ತಲುಪಿದೆ. ಅಧ್ಯಕ್ಷರು ಪರಾರಿಯಾಗಿದ್ದರೆ, ಪ್ರಧಾನಿ ರನಿಲ್ ರಾಜೀನಾಮೆ ನೀಡಿದ್ದಾರೆ. ಸರ್ವ ಪಕ್ಷ ಸರ್ಕಾರ ರಚನೆ ಕಸರತ್ತು ಮುಂದುವರಿದರೂ ಒಮ್ಮತದ ಅಭಿಪ್ರಾಯ ಮೂಡಿಲ್ಲ. ಇದರ ಪರಿಣಾಮ ಶ್ರೀಲಂಕಾದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಕಾವು ಜೋರಾಗಿದೆ.
ರಾಜಧಾನಿ ಕೊಲೊಂಬೊ ಸೇರಿದಂತೆ ಶ್ರೀಲಂಕಾದ ವೆಸ್ಟರ್ನ್ ಪ್ರಾವಿನ್ಸ್‌ನಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಜಲಫಿರಂಗಿಗಳ ಮೂಲಕ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸೇನೆ ಹರಸಾಹಸ ಮಾಡುತ್ತಿದೆ. ದಿಕ್ಕಿಲ್ಲದೆ ಸಾಗುತ್ತಿರುವ ಶ್ರೀಲಂಕಾ ದಿವಾಳಿಯ ಅಂಚಿನಲ್ಲಿದೆ. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ರಾಜಕೀಯ ಬಿಕ್ಕಟ್ಟು ಸೇರಿಕೊಂಡಿದ್ದು, ದೇಶ ಮತ್ತೊಂದು ಗಂಭೀರ ಸಮಸ್ಯೆಗೆ ಸಿಲಕುವ ಸಾಧ್ಯತೆ ದಟ್ಟವಾಗಿದೆ.
ಪ್ರತಿಭಟನೆ ನಡುವೆ ಮಾಲ್ಡೀವ್ಸ್‌ಗೆ ಪರಾರಿಯಾದ ಶ್ರೀಲಂಕಾ ಅಧ್ಯಕ್ಷ ಗೊಟಬಯ!
ತುರ್ತು ಪರಿಸ್ಥಿತಿ ಘೋಷಣೆ ಬಳಿಕ ಪ್ರಧಾನಿ ನಿವಾಸಕ್ಕೆ ನುಗ್ಗಲು ಯತ್ನಿಸಿದ ಹಲವು ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿದೆ. ಇಂದು ಪ್ರತಿಭಟನೆ ತೀವ್ರಗೊಳ್ಳಲು ಅಧ್ಯಕ್ಷ ಗೊಟಬಯ ರಾಜಪಕ್ಸ ಸದ್ದಿಲ್ಲದೆ ಮಾಲ್ಡೀವ್ಸ್‌ಗೆ ಪರಾರಿಯಾಗಿರವುದೇ ಮುಖ್ಯಕಾರಣವಾಗಿದೆ. ಗೊಟಬಯ ರಾಜೀನಾಮೆಗೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ದಂಗೆ ಆರಂಭಗೊಂಡಿದೆ. ಇತ್ತ ಗೊಟಬಯ ಶ್ರೀಲಂಕಾ ಮಿಲಿಟರಿ ಏರ್‌ಬೇಸ್‌ನಿಂದ ನೇರವಾಗಿ ಮಾಲ್ಡೀವ್ಸ್‌ಗೆ ಪ್ರಯಾಣ ಮಾಡಿದ್ದಾರೆ. ಗೊಟಬಯ ರಾಜಪಕ್ಸರನ್ನು ವಿದೇಶಕ್ಕೆ ಪರಾರಿಯಾಗಲು ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ದಂಗೆ ಎದ್ದಿದ್ದಾರೆ.
ತನಗೆ ಹಾಗೂ ಕುಟುಂಬಕ್ಕೆ ಬೆದರಿಕೆ ಇದೆ. ತಮ್ಮ ಮೇಲೆ ದಾಳಿಯಾಗುವ ಸಾಧ್ಯತೆ ದಟ್ಟವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಕಾರಣ ಜನರ ಮುಂದೆ ಪ್ರತ್ಯಕ್ಷರಾಗಲು ಸಾಧ್ಯವಿಲ್ಲ. ಪರಿಸ್ಥಿತಿ ಹತೋಟಿಗೆ ಬಂದ ಬಳಿಕ ಮರಳಿ ಬಂದು ಜನರ ಮುಂದೆ ನಿಲ್ಲುತ್ತೇನೆ ಎಂದು ಶ್ರೀಲಂಕಾ ಇಮಿಗ್ರೇಶನ್ ಅಧಿಕಾರಿಗಳಲ್ಲಿ ಗೊಟಬಯ ಮನವಿ ಮಾಡಿದ್ದರು. ದಾಳಿ ಸಾಧ್ಯತೆ ಅರಿತಿದ್ದ ಇಮಿಗ್ರೇಶನ್ ಅಧಿಕಾರಿಗಳು ಜೀವ ರಕ್ಷಣೆಗಾಗಿ ವಿದೇಶಕ್ಕೆ ಪರಾರಿಯಾಗಲು ಅನುಮತಿ ನೀಡಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಸಾರ್ವಜನಿಕರ ಕೋಪಕ್ಕೆ ಶ್ರೀಲಂಕಾ ರಾಜಕಾರಣಿಗಳು ಗಢಗಢ, ಎಲೆಕ್ಷನ್‌ಗೂ ನಕಾರ!
ಗೊಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬಳಿಕ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಅನ್ನೋ ಮಾಹಿತಿಗಳು ಇವೆ. ಗೊಟಬಯ ತಮ್ಮ ರಾಜೀನಾಮೆ ಪತ್ರವನ್ನು ಹಿರಿಯ ಅಧಿಕಾರಿಗೆ ರವಾನಿಸಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದ್ದಾರೆ.