ಕೊಲಂಬೋ(ಏ.14): ದ್ವೀಪ ರಾಷ್ಟ್ರ ಶ್ರೀಲಂಕಾ ಐಸಿಸ್‌, ಅಲ್‌ ಖೈದಾ ಸೇರಿ ಒಟ್ಟು ಹನ್ನೊಂದು ಉಗ್ರ ಸಂಘಟನೆಗಳಿಗೆ ನಿರ್ಬಂಧ ಹೇರಿದೆ. ಈ ಸಂಘಟನೆಗಳು ದೇಶದ ಭದ್ರತೆಗೆ ಅಪಾಯಕಾರಿ ಎಂದಿದ್ದು, ಇವು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನೆಲೆ ನಿಷೇಧ ಹೇರಲಾಗಿದೆ.  ಶ್ರೀಲಂಕಾ ರಾಷ್ಟ್ರಪತಿ ಗೊಟಬಾಯ ರಾಜಪಕ್ಸೆಯವರು ಭಯೋತ್ಪಾದನೆ ತಡೆ (ತಾತ್ಕಾಲಿಕ) ನಿಬಂಧನೆ ಕಾಯ್ದೆಯಡಿ ಹೊರಡಿಸಲಾದ ಅಧಿಸೂಚನೆಯನ್ವಯ ಈ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಶಿಕ್ಷೆ 10 ರಿಂದ 20 ವರ್ಷಗಳು ಎಂದು ಹೇಳಿದ್ದಾರೆ.

ಈ ಎಲ್ಲಾ ಸಂಘಟನೆಗಳಿಗೆ ನಿಷೇಧ

ಶ್ರೀಲಂಕಾ ನಿಷೇಧಿಸಿದ ಉಗ್ರ ಸಂಘಟನೆಗಳಲ್ಲಿ ಅಲ್‌ಖೈದಾ, ಐಎಸ್‌ಐಎಸ್‌ ಹೊರತುಪಡಿಸಿ ಇಸ್ಲಾಮಿಕ್ ಮೂವ್ಮೆಂಟ್‌ ಸೇರಿ ಸ್ಥಳೀಯ ಮುಸ್ಲಿಂ ಸಮೂಹ ಕೂಡಾ ಇದೆ. ಇದಕ್ಕೂ ಮೊದಲು 2019ರಲ್ಲಿ ಈಸ್ಟರ್‌ ಭಾನುವಾರದಂದು ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಸ್ಥಳೀಯ ಜಿಹಾದಿ ಸಂಘಟನೆ ನ್ಯಾಷನಲ್‌ ತೌಹೀದ್ ಜಮಾತ್ ಹಾಗೂ ಇತರ ಎರಡು ಸಂಘಟನೆಗಳನ್ನು ನಿಷೇಧಿಸಿತ್ತು. ಈ ದಾಳಿ ಚರ್ಚ್‌ ಹಾಗೂ ಹೋಟೆಲ್‌ಗಳ ಮೇಲೆ ನಡೆದಿತ್ತು. ಈ ದಾಳಿಯಲ್ಲಿ 270 ಮಂದಿ ಮೃತಪಟ್ಟು ಐನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಬೌದ್ಧ ಬಹುಸಂಖ್ಯಾತ ದೇಶದಲ್ಲಿ ಮೂಲಭೂತವಾದವನ್ನು ಪ್ರತಿಪಾದಿಸುವ ಸಂಸ್ಥೆಗಳ ಮೇಲೆ ನಿಷೇಧ

ರಾಷ್ಟ್ರಪತಿಗಳು ರಚಿಸಿದ ಸಮಿತಿಯು ಬೌದ್ಧ ಬಹುಸಂಖ್ಯಾತ ದೇಶದಲ್ಲಿ ಮೂಲಭೂತವಾದವನ್ನು ಪ್ರತಿಪಾದಿಸುವ ಮುಸ್ಲಿಂ ಬಂಡಾಯ ಸಂಘಟನೆಗಳ ಮೇಲೆ ನಿಷೇಧ ಹೇರಲು ಶಿಫಾರಸು ಮಾಡಿತ್ತು.