Asianet Suvarna News Asianet Suvarna News

ಭೂದೇವಿಗಿಂದು ಜನುಮದಿನ ; ಅವಳ ರಕ್ಷಣೆಗೆ ನಾವೆಲ್ಲರೂ ತೊಡಬೇಕಿದೆ ಪಣ

ಯಾವುದೇ ಪ್ರತಿಫಲವನ್ನು ಬಯಸದೇ ನಿಸ್ವಾರ್ಥದಿಂದ ನಮಗೆಲ್ಲಾ ಉಸಿರು ನೀಡಿ , ಬದುಕು ನೀಡಿ ಮನುಷ್ಯನ ಪಾಪಗಳನ್ನು ಸಹನೆಯಿಂದಲೇ ಕ್ಷಮಿಸುವ ಭೂತಾಯಿಗೆ ನಾವೆಲ್ಲರೂ ಕೊನೆತನಕ ಋಣಿಯಾಗಿ , ಕೃತಜ್ಞರಾಗಿರುವ ಪ್ರತಿಜ್ಞೆ ಇನ್ನಾದರೂ ಮಾಡಿ ಅದರಂತೆ ನಡೆದುಕೊಳ್ಳೋಣ . 

Special thanks to earth on the day of International Earth Day
Author
Bengaluru, First Published Apr 22, 2020, 7:03 PM IST

ರಾಮಾಯಣ ಘಟನೆ 1
ಇಂದ್ರಜಿತುವಿನ ಬಾಣಕ್ಕೆ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ಹಿಮಾಲಯದ ತೆಪ್ಪಲಿಗೆ ತೆರಳಿ  ಹನುಮಂತ ಸಂಜೀವಿನಿ ತಂದು ಲಕ್ಷ್ಮಣನನ್ನು ಬದುಕಿಸುತ್ತಾನೆ. ಪುನಃ  ಸಂಜೀವಿನಿ ಪರ್ವತವನ್ನು ಹಿಮಾಲಯದಲ್ಲೇ ಇಟ್ಟು ಬರಲು ಹನುಮಂತನಿಗೆ ಹೇಳಿದಾಗ ಯಾಕೆ ಎಂದು ಪ್ರಶ್ನಿಸುತ್ತಾನೆ. ಇದು ಅತ್ಯಮೂಲ್ಯವಾದ ಗಿಡಮೂಲಿಕೆ. ಇದು ಅಲ್ಲೇ ಇದ್ದರೆ ಮಾತ್ರ ಅದರ ಪ್ರಯೋಜನ ಸಿಗುವುದು. ಎಲ್ಲರಿಗೂ ಅದರ ಪ್ರಯೋಜನ ಸಿಗುವಂತಾಗಲು ಅಲ್ಲಿಯೇ ಇಟ್ಟು ಬಾ ಎಂದು ರಾಕ್ಷಸ ರಾಜವೈದ್ಯ ತಿಳಿಸುತ್ತಾನೆ.

ರಾಮಾಯಣ ಘಟನೆ 2
ರಾವಣನ ಸಂಹಾರ ಮುಗಿದ ಬಳಿಕ ಲಕ್ಷ್ಮಣ, ಸೀತೆ, ಹನುಮಂತ ಮತ್ತಿತರರೊಂದಿಗೆ ಶ್ರೀ ರಾಮ ಅಯೋಧ್ಯೆ ತಲುಪುತ್ತಾನೆ. ಹದಿನಾಲ್ಕು ವರ್ಷಗಳ ಬಳಿಕ ಅಯೋಧ್ಯೆಗೆ ಬಂದ ರಾಮ ಮೊದಲು ಕೈಮುಗಿದದ್ದು ತಾಯಿ ಕೌಸಲ್ಯೆಗಲ್ಲ, ದೇವರಿಗೂ ಅಲ್ಲ. ಅಯೋಧ್ಯೆ ಭೂಸ್ಪರ್ಶದಿಂದ ಪುಳಕಿತನಾಗಿ ತಾಯ್ನೆಲಕ್ಕೆ ಮೊದಲ ಪ್ರಣಾಮ ಸಲ್ಲಿಸುತ್ತಾನೆ. ವನವಾಸಕ್ಕೆ ತೆರಳುವ ಮುನ್ನ ಅಯೋಧ್ಯೆಯ ಹಿಡಿಮಣ್ಣನ್ನು ತನ್ನೊಂದಿಗೆ ರಾಮ  ಕೊಂಡೊಯ್ಯುತ್ತಾನೆ. ತವರಿನ ಮಣ್ಣಿಗೆ ಪ್ರತಿದಿನವೂ ಪೂಜಿಸುತ್ತಾನೆ.

 ಹಿಂದಿನಿಂದಲೂ ಮಾನವ ಮತ್ತು ಪ್ರಕೃತಿಯ ಸಂಬಂಧ ಹೇಗಿತ್ತು ಎಂಬುದನ್ನು ತಿಳಿಸಲು ಈ ಎರಡು ಉದಾಹರಣೆ ಸಾಕು. ಪ್ರಕೃತಿಯ ಆರಾಧನೆಯೇ ರಾಮರಾಜ್ಯದ ಮೂಲಮಂತ್ರ ಆದರೆ ಇಂದು ಪ್ರಕೃತಿ, ಭೂದೇವಿಯ ಆರಾಧನೆ ಹಾಗಿರಲಿ, ಸಿಕ್ಕಿದ್ದನ್ನು ಬಾಚಿಕೋ  ಮತ್ತೆ ಉಳಿದರೆ ನೋಡೊಣ ಎಂಬ ಭಾವನೆ ಬೆಳೆದಿದೆ. ಯಾವಾಗ ಈ ಭೂಮಿಗೆ ಬುಲ್ಡೋಜರ್ ಎಂಬ ಬ್ರಹ್ಮ ರಾಕ್ಷಸ ನ ಎಂಟ್ರಿ ಆಯಿತೋ  ಆಗಲೇ ಭೂಮಿಯ ಸರ್ವ ನಾಶಕ್ಕೆ ನಾಂದಿ ಆಯಿತು. ರಾತ್ರಿ ಬೆಳಗಾಗುವವರೆಗೆ ಗುಡ್ಡ, ಪರ್ವತ, ಮರ ಗಿಡಗಳ ನಾಶವಾಗುತ್ತಾ ಬಂತು. ಪೂಜಿಸುವ ಸಂಸ್ಕೃತಿ ಹೋಗಿ ಕಟುಕರ ಸಂಸ್ಕೃತಿ ಬಂತು. ಬುಲ್ಡೋಜರ್ ಎಂಬ ಬ್ರಹ್ಮ ರಾಕ್ಷಸನಿಗೆ ಬ್ರೇಕ್ ಹಾಕದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ.

ಭೂಮಿಯ ಮೇಲೆ ತಾನೊಬ್ಬನೇ ಇದ್ದರೆ ಸಾಕು ಉಳಿದವರು ಏನಾದರೂ ನನಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವ ವಿಜೃಂಭಿಸ ತೊಡಗಿತು. ನಮಗೆ ಭೂಮಿ ಏನೆಲ್ಲಾ ನೀಡಿದೆ, ಹಸಿರು, ಉಸಿರು, ಹಣ್ಣು, ನೀರು ಗಾಳಿ ಎಲ್ಲವನ್ನೂ  ಭೂಮಿ ನಮಗಾಗಿ ನೀಡಿದೆ. ಆದರೆ ಅದಕ್ಕೆ ಪ್ರತಿಯಾಗಿ ನಾವೇನೂ ಮರಳಿಸಿಲ್ಲ. ಬದಲಾಗಿ ಉಂಡ ಮನೆಗಳ ಎಣಿಸದಂತೆ ಭೂಮಿಯನ್ನು ಬರಿದಾಗಿಸುತ್ತಿದ್ದೇವೆ. ನಿನಗೆ ಸೃಷ್ಟಿಸಲು ಸಾಧ್ಯವಿಲ್ಲದ ಮೇಲೆ ನಾಶ ಮಾಡಲು ಅಧಿಕಾರ ನೀಡಿದವರು ಯಾರು? ಇದು ಮನುಷ್ಯ ಮನುಷ್ಯನಿಗೇ ಕೇಳಿಕೊಳ್ಳಬೇಕಾದ ಪ್ರಶ್ನೆ .. 

 ಕ್ಷಮಯಾ ಧರಿತ್ರಿ...
ನೀವು ಭೂಮಿಯ ಮೇಲೆ ಬರಿಗಾಲಲ್ಲಿ ನಡೆದಾಗಲೂ ಭೂಮಿ ನಿಮ್ಮನ್ನು ಕ್ಷಮಿಸಿದೆ. ಚಪ್ಪಲಿ ಹಾಕಿ ನಡೆದಾಗಲೂ, ಕುಣಿದು ಕುಪ್ಪಳಿಸಿ ಕೇಕೆ ಹಾಕಿದಾಗಲೂ ಭೂಮಿ ನಮಗೆ ಶಪಿಸಿಲ್ಲ ಬದಲಿಗೆ ನಮ್ಮನ್ನು  ಕ್ಷಮಿಸಿದೆ. ಕ್ಷಮಾಗುಣಕ್ಕೆ ಭೂಮಿಯೇ ಹೋಲಿಕೆ. ಎಲ್ಲವನ್ನು ನೀಡಿಯೂ ಮತ್ತೆ ಮತ್ತೆ ಆಕ್ರಮಣಕ್ಕೆ ಒಳಗಾಗಿದೆ. ಮಾನವನ ದುರಹಂಕಾರಕ್ಕೆ ಭೂಮಿಯೇ ಮೊದಲ ಬಲಿಪಶು.
 ನಿನ್ನ ಪೂರ್ವಜರು ಭೂಮಿಯನ್ನು ಸೃಷ್ಟಿಸಿಲ್ಲ, ನೀನೂ ಸೃಷ್ಟಿಸಿದ್ದಲ್ಲ. ಅಂದಮೇಲೆ  ನೀನಷ್ಟೇ ಅನುಭವಿಸಿದರೆ ಸಾಕೆ? ನಿನ್ನ ಮುಂದಿನ ತಲೆಮಾರಿನ ಚಿಂತೆ ಬೇಡವೇ? ಈ ಗ್ರಹದಲ್ಲಿ ನೀನೊಬ್ಬನೇ ಅಲ್ಲ, ಎಷ್ಟೊಂದು ಜೀವಸಂಕುಲಗಳಿವೆ. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನಿನ್ನಷ್ಟೇ ಅವಕಾಶ, ಹಕ್ಕು ಇದೆ. ಆದರೆ ಯಾವುದೂ ಮಾನವನಷ್ಟು ದುರಹಂಕಾರದಿಂದ ಮೆರೆಯುತ್ತಿಲ್ಲ.
 ಭೂಮಿ, ಪ್ರಕೃತಿಯನ್ನು ಬಳಸಲು ಮಾನವನಿಗೆ ಅವಕಾಶವಿದೆ. ಆದರೆ ಬಲಾತ್ಕರಿಸುವಂತಿಲ್ಲ. ವಿಪರ್ಯಾಸವೇನೆಂದರೆ ಈಗ ನಡೆಯುತ್ತಿರುವುದು ಅದೇ ಆಗಿದೆ.

ಕಾಪಿಡದಿದ್ದರೆ ಕಾಪಾಡುವರ್ಯಾರು?
ಭೂಮಿಯೆಂಬ ಅತ್ಯಮೂಲ್ಯ ಕೊಡುಗೆಯನ್ನು ನಾವು ಹೇಗೆ ಕಾಪಾಡಿಕೊಳ್ಳುವ ಬಗ್ಗೆ ಚಿಂತಿಸಲು ಈಗ ಕಾಲ ಕೂಡಿಬಂದಿದೆ. ಭೂಮಿ ಕೊಟ್ಟಿದ್ದನ್ನೆಲ್ಲ ನಾವು ಅನುಭವಿಸಿ ತಿಂದು ತೇಗಿ ಹೋಗುವ ಬದಲು ಇರುವುದೊಂದೇ ಭೂಮಿಯನ್ನು ಉಳಿಸಲು ಪಣ ತೊಡೋಣ. 

Special thanks to earth on the day of International Earth Day

ಗಂಗೆಯೀಗ ನಿರ್ಮಲವಾಗಿಲ್ಲವೆ?
ಭಗೀರಥ ಪ್ರಯತ್ನದಿಂದ ಭೂಮಿಗೆ ಬಂದ ಗಂಗಾನದಿಯೇ  ಕಲುಷಿತಗೊಂಡು ಕೊಂಪೆಯಾದಳು. ಪಾಪನಾಶಿನಿಯಾದ ಗಂಗಾನದಿಯಲ್ಲಿ  ಮಿಂದರೆ ಕಜ್ಜಿಯಾಗುವ ಹಂತ ತಲುಪಿತ್ತು. ಶುದ್ಧೀಕರಣಕ್ಕಾಗಿಯೇ ಕೋಟಿ ಕೋಟಿ ಸುರಿದರೂ ಸಂಪೂರ್ಣ ಶುದ್ಧೀಕರಣವಾಗಿರಲಿಲ್ಲ. ಈಗ ಲಾಕ್ಡೌನ್ ಪರಿಣಾಮ ಮಾನವ ಹಸ್ತಕ್ಷೇಪವಿಲ್ಲದೆಯೇ ಗಂಗೆ ನಿರ್ಮಲಳಾಗಿ ಹರಿಯುತ್ತಿದ್ದಾಳೆಂದು ಇತ್ತೀಚೆಗೆ ಬಂದ ಸುದ್ದಿಯನ್ನು ನೋಡಿದ್ದೇವೆ.ಎಲ್ಲೆಲ್ಲಿ ಮಾನವ ಹಸ್ತಕ್ಷೇಪ ನಡೆಯುತ್ತದೆಯೋ ಅಲ್ಲೆಲ್ಲ  ಪ್ರಕೃತಿ ಬರಡಾಗುತ್ತಿದೆ. ಮಾನವನಿಲ್ಲದೇ ಪ್ರಕೃತಿ ತನ್ನ ಸಹಜ ಸುಂದರವಾಗಿರುತ್ತಾಳೆ ಎಂಬುದಕ್ಕೆ ಗಂಗೆಯ ಉದಾಹರಣೆಯೇ ಸಾಕು. 

ಭೂಮಿಗಿಂದು ಜನುಮದಿನ
ನಮಗೆಲ್ಲ ಉಸಿರು ನೀಡಿ ಬದುಕಿಸುವ ಭೂದೇವಿಗಿಂದು ಜನುಮದಿನ. ಭೂಮಿತಾಯಿಯಾಣೆಯಾಗಿ  ನಾವೆಲ್ಲ ಭೂಮಾತೆಯ ರಕ್ಷಣೆಗೆ ಪ್ರಮಾಣ ಮಾಡಬೇಕಿದೆ. ವಿಶ್ವಭೂದಿನದಂದು ಕೃತಜ್ಞತೆ ಸಲ್ಲಿಸಬೇಕಾಗಿದೆ. 
ವಿಶ್ವ ಭೂಮಿ ದಿನದ ಶುಭಾಶಯಗಳು

- ರಾಘವೇಂದ್ರ ಅಗ್ನಿಹೋತ್ರಿ, ಮಂಗಳೂರು

Follow Us:
Download App:
  • android
  • ios