* ನಾನು ಎಂದಿಗೂ ತಾಲಿಬಾನ್‌ಗೆ ಶರಣಾಗಲ್ಲ: ಮಾಜಿ ಉಪಾಧ್ಯಕ್ಷ* ಶರ​ಣಾ​ಗುವ ಸ್ಥಿತಿ ಬಂದರೆ ತಲೆ​ಗೆ ಗುಂಡು ಹಾರಿಸು: ಅಂಗರಕ್ಷಕನಿಗೆ ಸಲೇಹ್‌ ಸೂಚನೆ

ಕಾಬೂಲ್‌(ಸೆ.06): ಪಂಜ್‌ಶೀರ್‌ ಪ್ರಾಂತ್ಯವನ್ನು ತಾಲಿಬಾನ್‌ ವಶಪಡಿಸಿಕೊಂಡಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವಾಗಲೇ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌, ‘ನಾನು ಎಂದಿಗೂ ತಾಲಿಬಾನ್‌ಗೆ ಶರಣಾಗತನಾಗುವುದಿಲ್ಲ. ಒಂದು ವೇಳೆ ಗಾಯಗೊಂಡು ಶರಣಾಗತನಾಗುವ ಪರಿಸ್ಥಿತಿ ಉದ್ಭವಿಸಿದರೆ ತನ್ನ ತಲೆಗೆ ಗುಂಡಿಟ್ಟು ಹತ್ಯೆ ಮಾಡಿಬಿಡು’ ಎಂದು ತಮ್ಮ ಅಂಗರಕ್ಷಕನಿಗೆ ಸೂಚನೆ ನೀಡಿದ್ದಾರೆ.

YouTube video player

ಕಾಬೂಲ್‌ ತಾಲಿಬಾನಿಗಳ ವಶವಾಗಿದ್ದು ಹೇಗೆ ಎಂಬ ಕುರಿತು ಡೈಲಿ ಮೇಲ್‌ ವೆಬ್‌ಸೈಟ್‌ನಲ್ಲಿ ಲೇಖನ ಬರೆದಿರುವ ಸಲೇಹ್‌, ‘ಮಾಜಿ ಅಧ್ಯಕ್ಷ ಅಶ್ರಫ್‌ ಘನಿ ಮತ್ತು ಇತರ ಅಧಿಕಾರಿಗಳು ದೇಶಬಿಟ್ಟು ಪರಾರಿ ಆಗುವ ಮೂಲಕ ಜನತೆಗೆ ದ್ರೋಹ ಎಸಗಿದ್ದಾರೆ. ಅವರು ವಿದೇಶಿ ಹೋಟೆಲ್‌ ಮತ್ತು ವಿಲ್ಲಾಗಳಲ್ಲಿ ಉಳಿದುಕೊಂಡಿದ್ದಾರೆ ಮತ್ತು ಅಫ್ಘಾನಿಸ್ತಾನ ಜನರ ಬಳಿ ದಂಗೆ ಏಳುವಂತೆ ಕರೆ ನೀಡಿದ್ದಾರೆ. ಆದರೆ, ಇದು ಹೇಡಿತನ ಕೃತ್ಯ. ನಾವು ದಂಗೆಯನ್ನು ಬಯಸಿದರೆ ದಂಗೆಯನ್ನು ಸ್ವತಃ ಮುನ್ನಡೆಸಬೇಕು’ ಎಂದು ಹೇಳಿದ್ದಾರೆ.

ಇದೇ ವೇಳೆ ತಾವು ಕಾಬೂಲ್‌ ಅನ್ನು ಬಿಡುವಾಗಿನ ಸನ್ನಿವೇಶವನ್ನು ವಿವರಿಸಿರುವ ಸಲೇಹ್‌, ಕಾಬೂಲ್‌ ಬಿಡುವುದಕ್ಕೂ ಮುನ್ನ ನಾನು ಮುಖ್ಯ ಕಾವಲುಗಾರನನ್ನು ಕರೆದು, ‘ನಾವು ಪಂಜ್‌ಶೀರ್‌ಗೆ ತೆರಳುತ್ತಿದ್ದೇವೆ. ನಮ್ಮ ದಾರಿಯನ್ನು ಈಗಾಗಲೇ ನಿರ್ಧರಿಸಿ ಆಗಿದೆ. ಒಂದು ವೇಳೆ ನಾನೇನಾದರೂ ಗಾಯಗೊಂಡರೆ, ನನ್ನ ತಲೆಗೆ ಎರಡು ಬಾರಿ ಗುಂಡು ಹಾರಿಸು. ನಾನು ಎಂದಿಗೂ ತಾಲಿಬಾನಿಗಳಿಗೆ ಶರಣಾಗಲು ಬಯಸುವುದಿಲ್ಲ’ ಎಂದು ತಿಳಿಸಿರುವುದಾಗಿಯೂ ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.

ತಾಲಿಬಾನಿಗಳು ಕಾಬೂಲ್‌ ಅನ್ನು ಪ್ರವೇಶಿಸಿದ ವೇಳೆ ಅಫ್ಘಾನಿಸ್ತಾನ ಸೇನೆಯೇ ಅಲ್ಲಿಂದ ಕಾಲು ಕಿತ್ತಿತ್ತು. ಪೊಲೀಸ್‌ ಮುಖ್ಯಸ್ಥರ ಜೊತೆ ಮಾತನಾಡಿ ಯಾವುದೇ ಪಡೆಯನ್ನು ನಿಯೋಜನೆ ಮಾಡಲು ಕೂಡ ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಧ್ಯಕ್ಷರ ಅರಮನೆ ಮತ್ತು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮೋಹಿಬ್‌ ಅವರನ್ನು ಸಂಪರ್ಕಿಸಲು ಯತ್ನಿಸಿದೆ. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲಿಲ್ಲ ಎಂದಿ​ದ್ದಾ​ರೆ.