ಬಾಂಗ್ಲಾದೇಶದಲ್ಲಿ ಸಾವಿರಾರು ಜನರ ಅಪಹರಣದಲ್ಲಿ ಶೇಖ್‌ ಹಸೀನಾ ಭಾಗಿ ಆರೋಪ

ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಅರಾಜಕತೆಯಿಂದ ಸುದ್ದಿಯಲ್ಲಿರುವ ಬಾಂಗ್ಲಾದೇಶದಲ್ಲಿ ದಾಖಲಾಗಿದ್ದ 3500ಕ್ಕೂ ಹೆಚ್ಚು ಜನರ ಅಪಹರಣ (ಬಲವಂತದ ನಾಪತ್ತೆ) ಪ್ರಕರಣದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪಾತ್ರ ಇದೆ ಎಂಬ ಆರೋಪ ಕೇಳಿ ಬಂದಿದೆ.

Sheikh Hasina involved in kidnapping of thousands of people in Bangladesh: Investigation report

ಢಾಕಾ : ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಅರಾಜಕತೆಯಿಂದ ಸುದ್ದಿಯಲ್ಲಿರುವ ಬಾಂಗ್ಲಾದೇಶದಲ್ಲಿ ದಾಖಲಾಗಿದ್ದ 3500ಕ್ಕೂ ಹೆಚ್ಚು ಜನರ ಅಪಹರಣ (ಬಲವಂತದ ನಾಪತ್ತೆ) ಪ್ರಕರಣದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಪಾತ್ರ ಇದೆ ಎಂದು ಈ ಕುರಿತು ತನಿಖೆಗೆ ರಚಿಸಲಾಗಿದ್ದ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಹಸೀನಾ ಜೊತೆಗೆ, ಅವರ ರಕ್ಷಣಾ ಸಲಹೆಗಾರ ನಿವೃತ್ತ ಮೇ। ಜ। ಅಹಮದ್‌ ಸಿದ್ದಿಕಿ ಸೇರಿದಂತೆ ಇತರೆ ಹಲವು ಸರ್ಕಾರಿ ಅಧಿಕಾರಿಗಳು ಕೂಡಾ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಅವರಿಗೆ ಸಲ್ಲಿಸಲಾದ ವರದಿಯಲ್ಲಿ ಹೇಳಲಾಗಿದೆ.

ಏನಿದು ಪ್ರಕರಣ?:

ಹಿಂದಿನ ಶೇಖ್‌ ಹಸೀನಾ ಸರ್ಕಾರದ ಅವಧಿಯಲ್ಲಿ ರಾಜಕೀಯ ವಿರೋಧಿಗಳು, ವಿದ್ಯಾರ್ಥಿ ಹೋರಾಟಗಾರರನ್ನು ಸರ್ಕಾರ ದಮನ ಮಾಡಿತ್ತು. ಸಾವಿರಾರು ಜನರನ್ನು ಬಲವಂತವಾಗಿ ನಾಪತ್ತೆ ಮಾಡಿ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ಮಧ್ಯಂತರ ಸರ್ಕಾರ ಆ ಕುರಿತು ತನಿಖೆಗೆ ಸಮಿತಿ ರಚಿಸಿತ್ತು. ತನಿಖೆ ನೆಡೆಸುತ್ತಿರುವ ಸಮಿತಿ, ‘ಇದುವರೆಗೂ 1676 ಜನರ ಅಪಹರಣದ ಕುರಿತು ತನಿಖೆ ನಡೆಸಲಾಗಿದೆ. ಮುಂದಿನ ಮಾರ್ಚ್‌ನಲ್ಲಿ ಈ ಕುರಿತು ಮಧ್ಯಂತರ ವರದಿ ಸಲ್ಲಿಸಲಿದ್ದು, ಅದರಲ್ಲಿ ಇದೇ ರೀತಿ ದಾಖಲಾಗಿರುವ 3500ಕ್ಕೂ ಹೆಚ್ಚು ಪ್ರಕರಣಗಳ ಮಾಹಿತಿ ನೀಡಲಾಗುವುದು’ ಎಂದು ಹೇಳಿದೆ.

ಅಲ್ಲದೆ, ‘ಇಂಥ ಬಲವಂತದ ನಾಪತ್ತೆ ಪ್ರಕರಣಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿತ್ತು. ಅದರ ಸುಳಿವು ಸಿಗದಂತೆ ವ್ಯವಸ್ಥೆ ರೂಪುಗೊಂಡಿತ್ತು’ ಎಂದು ಹೇಳಿದೆ. ಇದೇ ವೇಳೆ ಭಯೋತ್ಪಾದನೆ ನಿಗ್ರಹಕ್ಕೆಂದು ಹಿಂದಿನ ಸರ್ಕಾರ ರಚಿಸಿದ್ದ ರ್‍ಯಾಪಿಡ್‌ ಆ್ಯಕ್ಷನ್‌ ಬೆಟಾಲಿಯನ್‌ ಅನ್ನು ವಿಸರ್ಜಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ. ಈ ಪಡೆ ಭಾರೀ ಪ್ರಮಾಣದಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಸಿದೆ ಎಂದು ಸಮಿತಿ ಆರೋಪಿಸಿದೆ.

ಯೂನಸ್ ಸ್ವಾಗತ:

ವರದಿಯನ್ನು ಸ್ವಾಗತಿಸಿರುವ ಮಧ್ಯತರ ಸರ್ಕಾರದ ಮುಖ್ಯಸ್ಥ ಯೂನಸ್, ‘ನೀವು ನಿಜವಾಗಿಯೂ ಬಹಳ ಮುಖ್ಯವಾದ ಕೆಲಸವನ್ನು ಮಾಡುತ್ತಿದ್ದೀರಿ. ನಿಮಗೆ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡಲು ನಾವು ಸಿದ್ಧರಿದ್ದೇವೆ’ ಎಂದು ಸಮಿತಿಗೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios