Asianet Suvarna News Asianet Suvarna News

ಶಾಂಘೈನಲ್ಲಿ ಕೊರೋನಾ ಅಬ್ಬರ, ಜನರ ಓಡಾಟ ತಡೆಗೆ ಲೋಹದ ತಡೆಗೋಡೆ!

* ನಗರದಲ್ಲಿ ಒಂದೇ ದಿನ 39 ಸೋಂಕಿತರ ಸಾವು

* ಜನರ ಓಡಾಟ ತಡೆಗೆ ಲೋಹದ ತಡೆಗೋಡೆ

* ನಮ್ಮನ್ನು ಪ್ರಾಣಿಗಳಂತೆ ಕೂಡಿ ಹಾಕಲಾಗಿದೆ, ಜನಾಕ್ರೋಶ

 

Shanghai fences up Covid hit areas fuelling fresh outcry pod
Author
Bangalore, First Published Apr 25, 2022, 4:35 AM IST | Last Updated Apr 25, 2022, 4:35 AM IST

ಬೀಜಿಂಗ್‌(ಏ.25): ಚೀನಾದ ವಾಣಿಜ್ಯ ನಗರ ಶಾಂಘೈನಲ್ಲಿ ಒಂದೇ ದಿನ 39 ಕೋವಿಡ್‌ ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಒಂದೇ ದಿನ ದಾಖಲಾದ ಅತಿ ಹೆಚ್ಚು ಸಾವು ಇದಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಚ್‌ ಸಾರಲಾಗಿದ್ದು, ಶಾಂಘೈನಲ್ಲಿ ಜನಸಂಚಾರ ನಿರ್ಬಂಧಿಸಲು ಲೋಹದ ತಡೆಗೋಡೆ ನಿರ್ಮಿಸಿ, ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಕೋವಿಡ್‌ ನಿರ್ಬಂಧಗಳಿಂದ ಜರ್ಜರಿತವಾಗಿದ್ದ ಶಾಂಘೈ ನಿವಾಸಿಗಳನ್ನು ಮತ್ತಷ್ಟುಹೈರಾಣಾಗಿಸಿದೆ.

ಸೋಂಕು ಹೆಚ್ಚಾಗುತ್ತಿದ್ದಂತೆಯೇ ಶಾಂಘೈನಲ್ಲಿ ಸ್ವಯಂಸೇವಕರು ಮತ್ತು ಕೆಳಸ್ತರದ ಸರ್ಕಾರಿ ನೌಕರರು ಜನರ ಓಡಾಟ ನಿಯಂತ್ರಿಸಲು ಲೋಹದ ತಡೆಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ತೆಳುವಾದ ಲೋಹದ ಹಾಳೆಗಳು ಅಥವಾ ಬಲೆಗಳನ್ನು ಬಳಸಿ ಬೇಲಿಗಳನ್ನು ನಿರ್ಮಿಸಲಾಗುತ್ತಿದೆ. ಸೋಂಕು ಕಾಣಿಸಿಕೊಂಡಿರುವ ಕಟ್ಟಡಗಳ ಮುಖ್ಯದ್ವಾರಗಳನ್ನು ಮುಚ್ಚಲಾಗುತ್ತಿದೆ. ಇಂತಹ ಕಟ್ಟಡಗಳಲ್ಲಿ ಸಣ್ಣ ಬಾಗಿಲುಗಳನ್ನು ನಿರ್ಮಿಸಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗುತ್ತಿದೆ.

ಸರ್ಕಾರದ ಈ ಕಠಿಣ ನಿರ್ಬಂಧಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ‘ನಮ್ಮನ್ನು ಪ್ರಾಣಿಗಳಂತೆ ಕೂಡಿಹಾಕಲಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ಇದೇ ರೀತಿಯ ಕಠಿಣ ಲಾಕ್‌ಡೌನ್‌ನಿಂದ ಶಾಂಘೈ ಜನರು ಒಪ್ಪತ್ತು ಊಟಕ್ಕೂ ಪರದಾಡಿದ್ದರು ಹಾಗೂ ಅಗತ್ಯ ವಸ್ತುಗಳಿಗಾಗಿ ಅಂಗಡಿ ಲೂಟಿ ಮಾಡಿದ್ದರು.

ಚೀನಾದಲ್ಲಿ 21 ಸಾವಿರ ಕೇಸು:

ಚೀನಾದಲ್ಲಿ ಶನಿವಾರ 21,796 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಶಾಂಘೈನಲ್ಲೇ ದಾಖಲಾಗಿವೆ. 22 ಹೊಸ ಸಾಮುದಾಯಿಕ ಕೋವಿಡ್‌ ಪ್ರಕರಣಗಳು ಕಾಣಿಸಿಕೊಂಡಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚೀನಾ ಆಡಳಿತದ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದಾರೆ. ಶಾಂಘೈ ಅಷ್ಟೇ ಅಲ್ಲದೇ ಜಿಲಿನ್‌ನಲ್ಲಿ 60, ಹೈಲೋಂಗ್‌ಜಿಯಾಂಗ್‌ನಲ್ಲಿ 26, ಬೀಜಿಂಗ್‌ನಲ್ಲಿ 22 ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ದಿಲ್ಲಿಯಲ್ಲಿ ಗಣನೀಯ ಏರಿಕೆ ಕಂಡ ಕೋವಿಡ್

ದೆಹಲಿಯಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು ಒಂದೇ ದಿನ ಸಾವಿರಕ್ಕೂ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿದೆ. ಶುಕ್ರವಾರ 1,042 ಪ್ರಕರಣ ದಾಖಲಾಗಿತ್ತು. ಇದೀಗ ಸತತ 1,000ಕ್ಕಿತಂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದೆ. ಇದೇ ಅವಧಿಯಲ್ಲಿ ಇಬ್ಬರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. ಪಾಸಿಟಿವಿಟಿ ದರ ಗುರುವಾರಕ್ಕಿಂತ ಕೊಂಚ ಇಳಿಕೆಯಾಗಿದ್ದು ಶೇ.4.64ರಷ್ಟುದಾಖಲಾಗಿದೆ.

ಗುರುವಾರ ಶೇ.4.71ರಷ್ಟುಪಾಸಿಟಿವಿಟಿ ದರದೊಂದಿಗೆ 965 ಪ್ರಕರಣಗಳು ದಾಖಲಾಗಿತ್ತು. ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಸೋಂಕು ವೇಗವಾಗಿ ಹೆಚ್ಚಾಗುತ್ತಿದೆ. ಏ.11ರಂದು 601 ಇದ್ದ ಸಕ್ರಿಯ ಪ್ರಕರಣಗಳು 3,253ಕ್ಕೆ ಏರಿಕೆಯಾಗಿವೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕೇವಲ ಶೇ.3 ಇದೆ.ಕಳೆದ 24 ಗಂಟೆಗಳಲ್ಲಿ 22,442 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ದೆಹಲಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 18.72 ಲಕ್ಷಕ್ಕೆ, ಒಟ್ಟು ಸಾವು 26 ಸಾವಿರಕ್ಕೆ ಏರಿಕೆಯಾಗಿದೆ.

Latest Videos
Follow Us:
Download App:
  • android
  • ios