ಸೈಬಿರಿಯಾ(ನ.30): ನಿಸರ್ಗದ ವೈಚಿತ್ರ್ಯವನ್ನು ನಿಸರ್ಗ ಮಾತ್ರವೇ ಅರ್ಥ ಮಾಡಿಕೊಳ್ಳಲ್ಲದು. ಈ ಭೂಮಿಯ ಮೇಲೆ ಕಾಲಿಡಲಾಗದ ಸುಡುವ ಮರಳುಗಾಡು, ನುಸುಳಲಾಗದ ದಟ್ಟ ಕಾಡುಗಳು, ಏರಲಾಗದ ಪರ್ವತಗಳು, ತಲುಪಲಾಗದಷ್ಟು ಆಳದ ಸಮುದ್ರಗಳು, ಹಿಮಚ್ಛಾದಿತ ಪ್ರದೇಶಗಳಿಗೆ ಬರವಿಲ್ಲ.

ವಿಭಿನ್ನ ಹವಾಮಾನದ ಗುಣಲಕ್ಷಣಗಳೂ ಕೂಡ ಅಷ್ಟೇ ವಿಭಿನ್ನ. ಅದರಲ್ಲೂ ಹಿಮದಿಂದ ಆವೃತವಾದ ಪರ್ವತ ಪ್ರದೇಶಗಳ ಗುಣಲಕ್ಷಣ ತುಂಬ ವಿಭಿನ್ನ ಹಾಗೂ ವಿಚಿತ್ರ. ಹಿಮದಲ್ಲಿ ಸಿಲುಕುವ ವಸ್ತುಗಳು ಸಹಸ್ರಾರು ವರ್ಷಗಳವರೆಗೆ ಸುಸ್ಥಿತಿಯಲ್ಲೇ ಇರುವುದು ವಿಶೇಷ.

40 ಸಾವಿರ ವರ್ಷಗಳ ಹಿಂದೆ ಸತ್ತ ಹಿಮಯುಗದ ತೋಳದ ತಲೆ ಪತ್ತೆ!
ಅದರಂತೆ ಸೈಬಿರಿಯಾದ ದಟ್ಟ ಹಿಮ ಪರ್ವತದಲ್ಲಿ ಕಳೆದ 18 ಸಾವಿರ ವರ್ಷಗಳಿಂದ ಸುಸ್ಥಿಯಲ್ಲಿರುವ ಮೃತ ಪ್ರಾಣಿಯೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆದರೆ ಈ ಮೃತ ಪ್ರಾಣಿ ಯಾವುದು ಎಂಬುದು ಪತ್ತೆ ಹಚ್ಚಲು ವಿಜ್ಞಾನಿಗಳು ವಿಫಲರಾಗಿದ್ದಾರೆ.

ವಿಜ್ಞಾನಿಗಳು ಈ ಮೃತ ಪ್ರಾಣಿಗೆ ಡೊಗೊರ್(ಗೆಳೆಯ)ಎಂದು ಹೆಸರಿಸಿದ್ದು, ಇದರ ಹೆಚ್ಚಿನ ಅಧ್ಯಯನಕ್ಕೆ ಮುನ್ನಡಿ ಬರೆದಿದ್ದಾರೆ. ಕಳೆದ 18 ಸಾವಿರ ವರ್ಷಗಳ ಹಿಂದೆಯೇ ಸಾವನ್ನಪ್ಪಿರುವ ಈ ಪ್ರಾಣಿ ಹಿಮದಲ್ಲಿ ಸುಸ್ಥಿತಿಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸ್ಟಾಕ್‌ಹೋಮ್‌ನ ಪ್ಯಾಲಿಯೋಜೆನೆಟಿಕ್ಸ್ ರಿಸರ್ಚ್ ಸೆಂಟರ್‌ನ ಡೇವ್ ಸ್ಟ್ಯಾಂಟನ್, ಹಿಮದಲ್ಲಿ ಸುಸ್ಥಿಯಲ್ಲಿ ಸಿಕ್ಕಿರುವ ಈ ಪ್ರಾಣಿಯ ಹೆಚ್ಚಿನ ಅಧ್ಯಯನ ಅವಶ್ಯ ಎಂದು ತಿಳಿಸಿದ್ದಾರೆ.