ಮಾಸ್ಕೋ(ಜೂ.15): ಹಿಮ ಅಥವಾ ಮುಂಜುಗಡ್ಡೆಯಲ್ಲಿ ಸಿಕ್ಕ ಪ್ರಾಣಿಗಳ ದೇಹ ಎಷ್ಟು ವರ್ಷವಾದರೂ ಕೊಳೆಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ 40 ಸಾವಿರ ವರ್ಷವಾದರೂ ಪ್ರಾಣಿಯೊಂದರ ದೇಹ ಕೊಳೆಯದಿರುವುದು ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿ. 

ಹಿಮಯುಗಕ್ಕೆ ಸೇರಿದ ಸತ್ತ ತೋಳವೊಂದರ ತಲೆ ಸೈಬಿರಿಯಾದಲ್ಲಿ ಪತ್ತೆಯಾಗಿದ್ದು, ಈ ತೋಳ ಸುಮಾರು 40 ಸಾವಿರ ವರ್ಷಗಳ ಹಿಂದೆ ಸಾವನ್ನಪ್ಪಿತ್ತು ಎಂದು ತಜ್ಞರು ತಿಳಿಸಿದ್ದಾರೆ.

ಆರ್ಕಿಟಿಕ್ ಪ್ರದೇಶದ ಟಿರೆಕ್ ಟೈಖ್ ನದಿಯ ತೀರದಲ್ಲಿ ಈ ತೋಳದ ತಲೆ ದೊರೆತಿದ್ದು, ತೋಳದ ತಲೆ ಸಂರಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಯಕುಟಿಯಾದ ಸೈನ್ಸ್‌ ಅಕಾಡೆಮಿಗೆ ತೋಳದ ತಲೆಯನ್ನು ಹಸ್ತಾಂತರಿಸಲಾಗಿದ್ದು, ವಿಜ್ಞಾನಿಗಳು ತಲೆಯ ಮಾದರಿ ಮತ್ತು ಅಳತೆಯ ವಿವರಗಳನ್ನು ಇದೀಗ ಬಹಿರಂಗಗೊಳಿಸಿದ್ದಾರೆ. ಜಪಾನ್‌ ಮತ್ತು ಸ್ವೀಡನ್‌ ವಿಜ್ಞಾನಿಗಳ ಸಹಾಯದಿಂದ ಈ ತೋಳ ಸುಮಾರು 40 ವರ್ಷಗಳ ಹಿಂದೆಯೇ ಅಸುನೀಗಿತ್ತು ಎಂದು ಅಂದಾಜಿಸಲಾಗಿದೆ.