ಶಾಲಾ ಬಾಲಕಿಯನ್ನು ಬೆನ್ನಟ್ಟಿ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ
ಶಾಲೆಗೆ ಹೋಗುತ್ತಿದ್ದ ಅಥವಾ ಟ್ಯೂಷನ್ ಮುಗಿಸಿ ಬರುತ್ತಿದ್ದ ಬಾಲಕಿಯನ್ನು ಬೆನ್ನಟ್ಟಿ ಲೈಂಗಿಕ ಕಿರುಕುಳ ನೀಡಿ ಹಿಂಸಿಸಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇದರ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲೆಗೆ ಹೋಗುತ್ತಿದ್ದ ಅಥವಾ ಟ್ಯೂಷನ್ ಮುಗಿಸಿ ಬರುತ್ತಿದ್ದ ಬಾಲಕಿಯನ್ನು ಬೆನ್ನಟ್ಟಿ ಲೈಂಗಿಕ ಕಿರುಕುಳ ನೀಡಿ ಹಿಂಸಿಸಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇದರ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದೆಂದು ಹೇಳಲಾಗುತ್ತಿರುವ ವೀಡಿಯೋದಲ್ಲಿ ಬಾಲಕಿಯೊಬ್ಬಳು ಬ್ಯಾಗ್ ಏರಿಸಿ ಕಟ್ಟಡಗಳ ಮಧ್ಯೆ ಇರುವ ಜಾಗದಲ್ಲಿ ಸಾಗಿ ಹೋಗುತ್ತಿದ್ದರೆ, ಇದನ್ನು ಗಮನಿಸಿದ ಕಾಮುಕನೋರ್ವ ಆಕೆಯನ್ನು ಆಕೆಗೆ ತಿಳಿಯದಂತೆ ಬೆನ್ನಟ್ಟಿ ಹೋಗಿ ಕಿರುಕುಳ ನೀಡಿದ್ದಾನೆ. ಆಕೆಯನ್ನು ತಬ್ಬಿ ಹಿಡಿದು ಕಿರುಕುಳ ನೀಡಿದ್ದು, ಆಕೆ ವಿರೋಧಿಸಿದಾಗ ಬಂದ ದಾರಿಯಲ್ಲಿ ತಿರುಗಿ ಓಡಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು,ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಸಿಗುವ ಮಾಹಿತಿ ಪ್ರಕಾರ ಈ ಘಟನೆ ಭಾನುವಾರ ಅಂದರೆ ಮಾರ್ಚ್ 17 ರ ಬೆಳಗ್ಗೆ 8,41ರ ಸಮಯದಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ನಟ್ಟಿಗರು ಆರೋಪಿಯ ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 18 ಸೆಕೆಂಡ್‌ಗಳ ವೀಡಿಯೋದಲ್ಲಿ ಬಾಲಕಿ ಬಿಳಿ ಬಣ್ಣದ ಚೂಡಿದಾರ್ ಧರಿಸಿ ಬೆನ್ನಿಗೆ ಬ್ಯಾಗ್ ಏರಿಸಿ ಬರುತ್ತಿದ್ದು, ಈಕೆಯ ಹಿಂದೆ ಮಣ್ಣಿನ ಬಣ್ಣದ ಲಾಂಗ್ ಜುಬ್ಬಾ ಧರಿಸಿ ತಲೆಗೆ ಟೋಪಿ ಧರಿಸಿದ್ದ ಕಾಮುಕ ಆಕೆಗೆ ತಿಳಿಯದಂತೆ ಆಕೆಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇತ್ತ ಆತನ ಕೃತ್ಯದ ಊಹೆಯೂ ಮಾಡಿರದ ಬಾಲಕಿಗೆ ಇದರಿಂದ ಆಘಾತವಾಗಿದ್ದು, ಘಟನೆಯ ಬಳಿಕ ಆಕೆ ಅಳುವುದನ್ನು ಕಾಣಬಹುದಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕಾಮುಕನ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದರು. ಅದರಂತೆ ಬಾಂಗ್ಲಾದೇಶದ ಪೊಲೀಸರು ಆತನನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಬಾಂಗ್ಲಾದೇಶದವೂ ಲಿಂಗಾಧಾರಿತ ಹಿಂಸೆಗೆ ಕುಖ್ಯಾತಿ ಪಡೆದಿದ್ದು, ಶೇ.51ರಷ್ಟು ಬಾಲ್ಯ ವಿವಾಹಗಳಾಗತ್ತಿದೆ. ಬಾಂಗ್ಲಾದೇಶದ ಮಹಿಳಾ ಕಲ್ಯಾಣ ಇಲಾಖೆಯ ಪ್ರಕಾರ, ಜನವರಿಯಿಂದ ಅಕ್ಟೋಬರ್ 2023ರವರೆಗೆ 2575 ಮಹಿಳೆಯರು ಹೆಣ್ಣು ಮಕ್ಕಳು ಲೈಂಗಿಕ ಹಿಂಸೆಗೆ ಒಳಗಾಗಿದ್ದಾರೆ. 221 ಮಹಿಳೆಯರು ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಮತ್ತು 443 ಇತರರನ್ನು ಹತ್ಯೆ ಮಾಡಲಾಗಿದೆ. ಈ ಅವಧಿಯಲ್ಲಿ 21 ಬಾಲ್ಯ ವಿವಾಹಗಳು, 142 ಲೈಂಗಿಕ ದೌರ್ಜನ್ಯ ಪ್ರಕರಣಗಳು ಮತ್ತು 61 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ, ಬಾಂಗ್ಲಾದೇಶದಲ್ಲಿ ಸುಮಾರು 231 ಮಹಿಳೆಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.