* ಹಜ್‌ ಯಾತ್ರೆ ವಿದೇಶಿಗರಿಗೆ ಅವಕಾಶವಿಲ್ಲ* ಕೊರೋನಾ ಕಾರಣ ವಿದೇಶಿಗರಿಗೆ ನಿರ್ಬಂಧ* ಕೇವಲ 60 ಸಾವಿರ ದೇಶೀ ಯಾತ್ರಿಕರಿಗೆ ಅವಕಾಶ* ಯಾತ್ರಿಕರಿಗೆ ಕೊರೋನಾ ಲಸಿಕೆ ಕಡ್ಡಾಯ* 18ರಿಂದ 65 ವರ್ಷದ ಯಾತ್ರಿಕರಿಗಷ್ಟೇ ದರ್ಶನ ಭಾಗ್ಯ

ದುಬೈ(ಜೂ.13): ಕೊರೋನಾ ವೈರಸ್‌ ಹಾವಳಿಯಿಂದಾಗಿ ವಿದೇಶೀಯರಿಗೆ ಈ ಸಲದ ಪವಿತ್ರ ಹಜ್‌ ಯಾತ್ರೆಯ ಅವಕಾಶ ನಿರ್ಬಂಧಿಸಲಾಗಿದೆ. ಸೌದಿ ಅರೇಬಿಯಾದ ಕೇವಲ 60 ಸಾವಿರ ದೇಶೀಯ ಭಕ್ತಾದಿಗಳಿಗೆ ಮಾತ್ರ ಯಾತ್ರೆಯ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಜುಲೈ ಮಧ್ಯ ಭಾಗದಲ್ಲಿ ಯಾತ್ರೆ ಆರಂಭವಾಗಲಿದೆ. ಈ ಯಾತ್ರೆಯಲ್ಲಿ 18 ವರ್ಷದಿಂದ 65 ವರ್ಷದೊಳಗಿನವರಿಗೆ ಮಾತ್ರವೇ ಅವಕಾಶವಿರಲಿದೆ. ಜತೆಗೆ ಯಾತ್ರಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ಯಾತ್ರಾಕಾಂಕ್ಷಿಗಳು ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರಲೇಬೇಕು ಎಂದು ಸೌದಿ ಅರೇಬಿಯಾದ ಹಜ್‌ ಮತ್ತು ಉಮ್ರಾ ಸಚಿವಾಲಯ ಹೇಳಿದೆ.

ಕಳೆದ ವರ್ಷ ಕೂಡ ಕೊರೋನಾ ಕಾರಣ ವಿದೇಶೀ ಯಾತ್ರಿಕರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ, ನಿರ್ಬಂಧ ಘೋಷಣೆ ಆಗುವಷ್ಟರಲ್ಲಿ 1000 ವಿದೇಶೀ ಯಾತ್ರಿಕರು ಸೌದಿ ತಲುಪಿ ಆಗಿತ್ತು. ಹೀಗಾಗಿ ಅವರಿಗಷ್ಟೇ ಯಾತ್ರೆಗೆ ಅವಕಾಶ ನೀಡಿ, ಮಿಕ್ಕವರಿಗೆ ದೇಶದ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ.