ಮಾಸ್ಕೋ(ನ. 07): ದಶಕಗಳಿಂದ ರಷ್ಯಾವನ್ನು ಆಳುತ್ತಿರುವ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪಾರ್ಕಿನ್ಸನ್‌ (ಮೆದುಳು ಮತ್ತು ನರ ಮಂಡಲಕ್ಕೆ ಸಂಬಂಧಿಸಿದ ರೋಗ) ಕಾಯಿಲೆಗೆ ತುತ್ತಾಗಿದ್ದು, ಜನವರಿಯಲ್ಲಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಪುಟಿನ್‌ ಅವರ 37 ವರ್ಷದ ಗೆಳತಿ ಅಲಿನಾ ಕಬಾಇವಾ ಮತ್ತು ಇಬ್ಬರು ಪುತ್ರಿಯರು ಅಧ್ಯಕ್ಷ ಹುದ್ದೆಯನ್ನು ತ್ಯಜಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮಾಸ್ಕೋ ರಾಜ್ಯಶಾಸ್ತ್ರಜ್ಞ ವಲೆರಿ ಸೊಲೊವೆಯಿ ಅವರ ಹೇಳಿಕೆಯ ಪ್ರಕಾರ, ಕುಟುಂಬವೊಂದು ಪುಟಿನ್‌ ಅವರ ಮೇಲೆ ಭಾರೀ ಪ್ರಭಾವ ಹೊಂದಿದೆ. ಹೀಗಾಗಿ 68 ವರ್ಷ ವಯಸ್ಸಿನ ಪುಟಿನ್‌ ಜನವರಿಯಲ್ಲಿ ಅಧಿಕಾರವನ್ನು ತ್ಯಜಿಸಲು ಉದ್ದೇಶಿಸಿದ್ದಾರೆ ಎಂದು ‘ದ ಸನ್‌’ ಪತ್ರಿಕೆ ವರದಿ ಮಾಡಿದೆ.

ವರದಿಗಳ ಪ್ರಕಾರ ಪುಟಿನ್‌ಗೆ ತಮ್ಮ ಕರ್ಚಿಯ ಮೇಲೆ ಕೈಚಾಚಿಕೊಳ್ಳುವಾಗ ನೋವು ಹಾಗೂ ಕಾಲುಗಳಲ್ಲಿ ನಡುಕ ಕಾಣಿಸಿಕೊಳ್ಳುತ್ತಿದೆ. ರಷ್ಯಾದ ಸಂಸತ್ತು ಮಾಜಿ ಅಧ್ಯಕ್ಷರ ವಿರುದ್ಧದ ಕ್ರಿಮಿನಲ್‌ ವಿಚಾರಣೆಗೆ ಜೀವನ ಪರ್ಯಂತ ರಕ್ಷಣೆ ನೀಡುವ ಕಾನೂನುವೊಂದನ್ನು ಜಾರಿಗೊಳಿಸಲು ಹೊರಟಿರುವುವಾಗಲೇ ಪುಟಿನ್‌ ಅವರ ಪದತ್ಯಾದ ವದಂತಿಗಳು ಹರಿದಾಡಲು ಆರಂಭಿಸಿವೆ.

ಆದರೆ ಪುಟಿನ್‌ ಆಪ್ತ ಮೂಲಗಳು ಮಾತ್ರ, ಇದೊಂದು ವದಂತಿ ಎಂದು ವರದಿಯನ್ನು ತಳ್ಳಿಹಾಕಿವೆ.