ವಂದೇ ಭಾರತ ಮಿಷನ್‌ ಅಡಿಯಲ್ಲಿ ವಿಮಾನ ನಿಯೋಜನೆ  ಫೆ.22, 24 ಮತ್ತು 26ರಂದು ಏರ್‌ಲಿಫ್ಟ್‌ಗೆ ವೇಳಾಪಟ್ಟಿ ತಯಾರಿ  ಬೋರಿಸ್ಪಿಲ್‌ ನಿಲ್ದಾಣದಿಂದ ಏರ್‌ಇಂಡಿಯಾ ಕಾರಾರ‍ಯಚರಣೆ

ನವದೆಹಲಿ(ಫೆ.19): ರಷ್ಯಾ-ಉಕ್ರೇನ್‌ ನಡುವೆ ಯುದ್ಧ(Russia Ukraine Crisis) ಭೀತಿ ಉಂಟಾಗಿದೆ. ಈ ನಡುವೆ ಉಕ್ರೇನ್‌ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ವಂದೇ ಭಾರತ ಮಿಷನ್‌(Vande Bharat Mission) ಅಡಿಯಲ್ಲಿ ಮೂರು ವಿಮಾನಗಳನ್ನು ನಿಯೋಜಿಸಲಾಗುತ್ತದೆ. ಫೆ.22, 24 ಮತ್ತು 26ರಂದು ಏರ್‌ಲಿಫ್ಟ್‌ಗೆ ವೇಳಾಪಟ್ಟಿಸಿದ್ಧಪಡಿಸಲಾಗಿದೆ ಎಂದು ಏರ್‌ ಇಂಡಿಯಾ ಘೋಷಿಸಿದೆ. ಏರ್‌ಇಂಡಿಯಾ(AirIndia) ಕಚೇರಿ, ವೆಬ್‌ಸೈಟ್‌, ಕಾಲ್‌ ಸೆಂಟರ್‌ ಅಧಿಕೃತ ಟ್ರಾವೆಲ್‌ ಏಜೆನ್ಸಿಗಳ ಮೂಲಕ ಟಿಕೆಟ್‌ ಬುಕ್‌ ಮಾಡಬಹುದು ಎಂದು ತಿಳಿಸಿದೆ.

ಉಕ್ರೇನ್‌ನ ಅತಿ ದೊಡ್ಡ ವಿಮಾನ ನಿಲ್ದಾಣ ಬೋರಿಸ್ಪಿಲ್‌ ಅಂತಾರಾಷ್ಟ್ರೀಯ ವಿಮಾನದಿಂದ ಏರ್‌ಇಂಡಿಯಾ ಕಾರಾರ‍ಯಚರಣೆ ಆರಂಭಿಸಲಿದೆ. ಏರ್‌ ಬಬಲ್‌ ಒಪ್ಪಂದದ ಅಡಿಯಲ್ಲಿ ಉಕ್ರೇನ್‌ ದೇಶಕ್ಕೆ ತೆರಳುವ ಮತ್ತು ವಾಪಸ್‌ ಬರುವ ವಿಮಾನಗಳ ಸಂಖ್ಯೆಯ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಭಾರತ ಸರ್ಕಾರ ತೆರವುಗೊಳಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

Russia Ukraine Crisis: ಉಕ್ರೇನ್‌ ಗಡಿಯಲ್ಲಿ 1.30 ಲಕ್ಷ ರಷ್ಯಾ ಸೈನಿಕರ ನಿಯೋಜನೆ

 ರಷ್ಯಾ ದಾಳಿ: ಅಮೆರಿಕ ಆರೋಪ
ಯುದ್ಧಭೀತಿ ಆವರಿಸಿರುವ ನಡುವೆಯೇ ಉಕ್ರೇನ್‌ನ ಡಾನ್‌ಬಾಸ್‌ ಪ್ರಾಂತ್ಯದ ಶಿಶುವಿಹಾರದ ಮೇಲೆ ರಷ್ಯಾ ಶೆಲ್‌ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ದಾಳಿಯಲ್ಲಿ ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ ಹಾಗೂ ಇಡೀ ಗ್ರಾಮ ಕಾರ್ಗತ್ತಲಲ್ಲಿ ಮುಳುಗಿದೆ. ಇದು ಮಿನ್ಸ್‌$್ಕ ಒಪ್ಪಂದದ ಉಲ್ಲಂಘನೆ ಎಂದು ಉಕ್ರೇನ್‌ನ ಅಮೆರಿಕ ದೂತಾವಾಸ ಹೇಳಿದೆ. ಈ ನಡುವೆ, ಅಮೆರಿಕ-ರಷ್ಯಾ ಸಂಬಂಧ ಹಳಸುತ್ತಿರುವ ದ್ಯೋತಕವಾಗಿ ಮಾಸ್ಕೋದಲ್ಲಿನ ಅಮೆರಿಕ ರಾಯಭಾರ ಕಚೇರಿ ಉಪಮುಖ್ಯಸ್ಥ ಬಾರ್ಟ್‌ ಗಾರ್ಮನ್‌ರನ್ನು ರಷ್ಯಾ ಉಚ್ಚಾಟನೆ ಮಾಡಿದೆ.

ರಾಜತಾಂತ್ರಿಕ ಮಾತುಕತೆಯಿಂದಾಗಿ ಅಚ್ಚರಿಯ ಬೆಳವಣಿಗೆ
ಪಾಶ್ಚಾತ್ಯ ರಾಷ್ಟ್ರಗಳ ಸಂಗಡ ಸೇರಿರುವ ಉಕ್ರೇನ್‌ಗೆ ಪಾಠ ಕಲಿಸಲು ಆ ದೇಶದ ಮೇಲೆ ಬಲಾಢ್ಯ ರಷ್ಯಾ ಯಾವುದೇ ಕ್ಷಣದಲ್ಲಿಯಾದರೂ ಯುದ್ಧ ಸಾರಬಹುದು ಎಂಬ ಆತಂಕ ಸೃಷ್ಟಿಯಾಗಿರುವಾಗಲೇ ಅನಿರೀಕ್ಷಿತ ಬೆಳವಣಿಗೆಯೊಂದು ಮಂಗಳವಾರ ನಡೆದಿದೆ. ಉಕ್ರೇನ್‌ ಗಡಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಒಂದು ಲಕ್ಷಕ್ಕೂ ಹೆಚ್ಚು ಯೋಧರ ಪೈಕಿ ಒಂದಷ್ಟುಮಂದಿಯನ್ನು ರಷ್ಯಾ ವಾಪಸ್‌ ಕರೆಸಿಕೊಂಡಿದೆ. ರಾಜತಾಂತ್ರಿಕ ಮಾರ್ಗದಲ್ಲಿ ನಡೆದ ಸಂಧಾನ ಪ್ರಕ್ರಿಯೆಗಳ ಫಲ ಇದಾಗಿದ್ದು, ರಷ್ಯಾ ಮತ್ತಷ್ಟುಯೋಧನ್ನು ಹಿಂಪಡೆದುಕೊಂಡರೆ ಯುದ್ಧ ಸಾಧ್ಯತೆ ಕ್ಷೀಣಿಸಲಿದೆ.

Russia-Ukraine Crisis: ಪುಟಿನ್ ಅಣುಬಾಂಬ್ ವಾರ್ನಿಂಗ್, ಜಗತ್ತಿಗೆ ಮಹಾಯುದ್ಧ ಭೀತಿ

‘ಉಕ್ರೇನ್‌ ಗಡಿಗೆ ನಿಯೋಜಿಸಲಾಗಿದ್ದ ಒಂದಷ್ಟುತುಕಡಿಗಳು ತಮ್ಮ ಕಾರ್ಯ ಮುಗಿಸಿ, ಗಂಟು ಮೂಟೆ ಕಟ್ಟಿಕೊಂಡಿವೆ. ಈಗಾಗಲೇ ರೈಲು, ರಸ್ತೆ ಮಾರ್ಗವಾಗಿ ತಮ್ಮ ಸೇನಾ ನೆಲೆಗಳಿಗೆ ಪ್ರಯಾಣ ಆರಂಭಿಸಿವೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮುಖ್ಯ ವಕ್ತಾರ ಇಗೋರ್‌ ಕೊನಾಶೆಂಕೋವ್‌ ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಉಕ್ರೇನ್‌ ಗಡಿಯಲ್ಲಿ 1.30 ಲಕ್ಷ ಯೋಧರನ್ನು ಜಮಾವಣೆ ಮಾಡಿರುವ ರಷ್ಯಾ, ಆ ಪೈಕಿ ಎಷ್ಟುಮಂದಿಯನ್ನು ವಾಪಸ್‌ ಕರೆಸಿಕೊಂಡಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಬಿಕ್ಕಟ್ಟು ಆರಂಭವಾದ ಬಳಿಕ ರಷ್ಯಾ ತನ್ನ ಯೋಧರನ್ನು ಕರೆಸಿಕೊಳ್ಳುತ್ತಿರುವುದು ಧನಾತ್ಮಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಕ್ರೇನ್‌ ಮೇಲೆ ಎರಗುವ ರಷ್ಯಾದ ಚಿಂತನೆ ಕೇವಲ ಆ ಎರಡೂ ದೇಶಗಳ ನಡುವಣ ಬಿಕ್ಕಟ್ಟು ಮಾತ್ರವೇ ಆಗಿರದೆ, ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳ ಪರೋಕ್ಷ ಸಮರವೆಂದೇ ಬಿಂಬಿತವಾಗಿತ್ತು. ಶೀತಲ ಸಮರದ ಅಂತ್ಯದ ಬಳಿಕ ಸೃಷ್ಟಿಯಾದ ಮಹಾ ಬಿಕ್ಕಟ್ಟು ಇದಾಗಿತ್ತು. ರಷ್ಯಾ ಏನಾದರೂ ಉಕ್ರೇನ್‌ ಮೇಲೆ ದಾಳಿ ಮಾಡಿದರೆ ಉಕ್ರೇನ್‌ ಬೆಂಬಲಕ್ಕೆ ನಿಲ್ಲುವುದಾಗಿ ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು ಘೋಷಣೆ ಮಾಡಿದ್ದವು. ಹೀಗಾಗಿ ಈ ಸಮರ ವಿಕೋಪಕ್ಕೆ ಹೋಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಸಂಘರ್ಷ ತಪ್ಪಿಸಲು ಹಲವು ದೇಶಗಳು ರಷ್ಯಾ ಜತೆ ರಾಜತಾಂತ್ರಿಕವಾಗಿ ಮಾತುಕತೆ ನಡೆಸಿದ್ದವು. ರಷ್ಯಾದ ಹೊಸ ನಡೆಯಿಂದಾಗಿ ಉಕ್ರೇನ್‌ ಮಾತ್ರವೇ ಅಲ್ಲದೆ ಇಡೀ ಯುರೋಪ್‌ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.