* ವಲಯದಲ್ಲಿ ನಮ್ಮ ರಕ್ಷಣೆಗೆ ಇಂಥ ಕ್ರಮ ಅನಿವಾರ್ಯ: ರಷ್ಯಾ* ಮತ್ತೆ ಪರಮಾಣು ಅಸ್ತ್ರ ನಿಯೋಜನೆ ಎಚ್ಚರಿಕೆ ನೀಡಿದ ರಷ್ಯಾ* ಸ್ವೀಡನ್‌, ಫಿನ್ಲೆಂಡ್‌ ನ್ಯಾಟೋ ಸೇರ್ಪಡೆಗೆ ತೀವ್ರ ವಿರೋಧ 

ಮಾಸ್ಕೋ(ಏ.15): ಸ್ವೀಡನ್‌ ಮತ್ತು ಫಿನ್ಲೆಂಡ್‌ ದೇಶಗಳು ಅಮೆರಿಕ ನೇತೃತ್ವದ ನ್ಯಾಟೋ ಸೇರುವ ಪ್ರಸ್ತಾಪ ಮುಂದಿಟ್ಟಿರುವುದನ್ನು ಬಲವಾಗಿ ವಿರೋಧಿಸಿರುವ ರಷ್ಯಾ, ಒಂದು ವೇಳೆ ಅಂಥ ಬೆಳವಣಿಗೆ ನಡೆದರೆ, ನಮ್ಮ ವಲಯವನ್ನು ರಕ್ಷಿಸಿಕೊಳ್ಳಲು ನಾವು ಗಡಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದೆ.

ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ಬಳಿಕ ಇಡೀ ವಲಯದಲ್ಲಿನ ಭದ್ರತಾ ಸ್ಥಿತಿಯೇ ಬದಲಾಗಿ ಹೋಗಿದೆ. ಹೀಗಾಗಿ ನಮ್ಮ ರಕ್ಷಣೆಗೆ ನಾವು ಅಗತ್ಯ ಕ್ರಮ ಕೈಗೊಳ್ಳುವ ಸ್ಥಿತಿ ತಲುಪಿದ್ದೇವೆ. ಹೀಗಾಗಿ ನ್ಯಾಟೋ ಒಕ್ಕೂಟ ಸೇರಬೇಕೋ? ಬೇಡವೋ ಎಂಬುದರ ಕುರಿತು ಮುಂದಿನ ಕೆಲ ವಾರಗಳಲ್ಲೇ ನಿರ್ಧಾರ ಕೈಗೊಳ್ಳವುದಾಗಿ ಸ್ವೀಡನ್‌ ಮತ್ತು ಫಿನ್ಲೆಂಡ್‌ ದೇಶಗಳು ಬುಧವಾರವಷ್ಟೇ ಹೇಳಿಕೆ ನೀಡಿದ್ದವು. ಅದರ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆಪ್ತರೊಬ್ಬರು ಇಂಥ ಪರಮಾಣ ಅಸ್ತ್ರ ನಿಯೋಜನೆಯ ಎಚ್ಚರಿಕೆ ನೀಡಿದ್ದಾರೆ.

ಫಿನ್ಲೆಂಡ್‌, ರಷ್ಯಾದೊಂದಿಗೆ 1300 ಕಿ.ಮೀನಷ್ಟುಗಡಿ ಹಂಚಿಕೊಂಡಿದೆ. ಆದರೆ ಸ್ವೀಡನ್‌ ರಷ್ಯಾ ಜೊತೆ ನೇರ ಗಡಿ ಹಂಚಿಕೊಂಡಿಲ್ಲ. ಆದರೆ ಎರಡೂ ದೇಶಗಳು ನ್ಯಾಟೋ ಸೇರ್ಪಡೆಯಾದರೆ ತನ್ನೊಂದಿಗೆ ಹಂಚಿಕೊಂಡ ಫಿನ್ಲೆಂಡ್‌ನಲ್ಲಿ ನ್ಯಾಟೋ ಸೇನೆ ನಿಯೋಜನೆಯಾಗುತ್ತದೆ. ಇದರಿಂದ ತನಗೆ ಸದಾ ಅಪಾಯ ಕಟ್ಟಿಟ್ಟಬುತ್ತಿ ಎಂಬುದು ರಷ್ಯಾ ಆತಂಕ. ಹೀಗಾಗಿಯೇ ಉಭಯ ದೇಶಗಳೂ ನ್ಯಾಟೋ ಸೇರುವುದನ್ನು ರಷ್ಯಾ ವಿರೋಧಿಸುತ್ತಿದೆ.

 ತೈಲ ನಿರ್ಬಂಧ: ಪಾಶ್ಚಾತ್ಯ ದೇಶಗಳಿಗೆ ಪುಟಿನ್‌ ತಿರುಗೇಟು

ರಷ್ಯಾದಿಂದ ತೈಲೋತ್ಪನ್ನ ಆಮದು ನಿಲ್ಲಿಸಿರುವ ಅಮೆರಿಕ ಹಾಗೂ ಯುರೋಪ್‌ ದೇಶಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ತಿರುಗೇಟು ನೀಡಿದ್ದಾರೆ.

ತಮ್ಮಲ್ಲಿರುವ ಇಂಧನ ಸಂಪನ್ಮೂಲಗಳನ್ನು ಯುರೋಪಿನ ಬದಲಾಗಿ ನೈಸರ್ಗಿಕ ಅನಿಲ, ಕಚ್ಚಾತೈಲದ ಅಗತ್ಯವಿರುವ ಜಗತ್ತಿನ ಬೇರೆ ರಾಷ್ಟ್ರಗಳಿಗೆ ರಷ್ಯಾ ಪೂರೈಕೆ ಮಾಡಲು ಬದ್ಧವಾಗಿದೆ ಎಂದು ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಬುಧವಾರ ಹೇಳಿದ್ದಾರೆ.

‘ಐರೋಪ್ಯ ರಾಷ್ಟ್ರಗಳು ರಷ್ಯಾಕ್ಕೆ ಸಹಕಾರ ನೀಡಲು ನಿರಾಕರಿಸಿದ ಪರಿಣಾಮ ಯುರೋಪಿನ ಲಕ್ಷಾಂತರ ಜನರು ಇಂಧನದ ಬಿಕ್ಕಟ್ಟನ್ನು ಎದುರಿಸಲಿದ್ದಾರೆ. ಇದರಿಂದ ರಷ್ಯಾಕ್ಕೂ ತೊಂದರೆಯಾಗಿದೆ. ಶತ್ರುರಾಷ್ಟ್ರಗಳು ರಷ್ಯಾದ ಇಂಧನ ಪೂರೈಕೆ ಸರಪಳಿಯನ್ನು ನಾಶಪಡಿಸಿದ್ದಾರೆ. ಇನ್ನು ಕೆಲವು ರಾಷ್ಟ್ರಗಳು ಮಾಡಿಕೊಂಡ ಇಂಧನ ಒಪ್ಪಂದವನ್ನು ಉಲ್ಲಂಘಿಸುತ್ತಿವೆ’ ಎಂದು ಪುಟಿನ್‌ ಆರೋಪಿಸಿದ್ದಾರೆ.

‘ಇದು ರಷ್ಯಾದ ಇಂಧನ ಪೂರೈಕೆಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ರಷ್ಯಾ ಇಂಧನದ ಅಗತ್ಯವಿರುವ ಜಗತ್ತಿನ ವಿವಿಧ ಮಿತ್ರ ದೇಶಗಳಿಗೆ ಯಾವುದೇ ಬೆಲೆಯ ಶ್ರೇಣಿಯಲ್ಲಿಯೂ ಇಂಧನ ಪೂರೈಸಲು ನಿರ್ಧರಿಸಿದೆ’ ಎಂದಿದ್ದಾರೆ.