Russia Ukraine War: ಸರ್ವಾಧಿಕಾರಿಗಳು ಬೆಲೆ ತೆರಲಿದ್ದಾರೆ: ಪುಟಿನ್‌ಗೆ ಬೈಡೆನ್‌ ಎಚ್ಚರಿಕೆ!

*ಈಗ ರಷ್ಯಾ ಯುದ್ಧದಲ್ಲಿ ಮುನ್ನಡೆಯುತ್ತಿರಬಹುದು
*ಮುಂದೆ ಆಗುವ ಪರಿಣಾಮದ ಅರಿವು ಅವರಿಗಿಲ್ಲ
*ಉಕ್ರೇನ್‌ ಬದಲು ‘ಇರಾನ್‌’ ಎಂದ ಬೈಡೆನ್‌!
*ರಷ್ಯಾ ವಿಮಾನಗಳಿಗೆ ಅಮೆರಿಕ ವಾಯುಸೀಮೆ ನಿಷೇಧ

Russia Ukraine War Vladimir Putin miscalculated and he will pay for it warns US President Joe Biden mnj

ವಾಷಿಂಗ್ಟನ್‌ (ಮಾ. 03): ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಮತ್ತೊಮ್ಮೆ ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ವಿದೇಶವೊಂದರ ಮೇಲೆ ಪೂರ್ವ ನಿರ್ಧರಿತ ಮತ್ತು ಅಪ್ರಚೋದಿತ ದಾಳಿ ನಡೆಸಿದ ಸರ್ವಾಧಿಕಾರಿಗಳು ಸೂಕ್ತ ಬೆಲೆ ತೆರಬೇಕಾಗಿ ಬರಲಿದೆ’ ಎಂದು ಪರೋಕ್ಷವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.‘ಈಗ ಪುಟಿನ್‌ ಯುದ್ಧದಲ್ಲಿ ಮುನ್ನಡೆಯುತ್ತಿರಬಹುದು. ಮುಂದಿನ ದಿನದಲ್ಲಿ ಅವರು ಭಾರೀ ಬೆಲೆ ತೆರಬೇಕಾಗುತ್ತದೆ. ಇದರ ಪರಿಣಾಮ ಅರಿವು ಅವರಿಗಿಲ್ಲ’ ಎಂದು ಬೈಡೆನ್‌ ಚಾಟಿ ಬೀಡಿದ್ದಾರೆ.

ಮಂಗಳವಾರ ದೇಶವನ್ನು ಉದ್ದೇಶಿಸಿದ ಮಾತನಾಡಿದ ಬೈಡೆನ್‌ ‘ರಷ್ಯಾದ ಸರ್ವಾಧಿಕಾರಿ, ವಿದೇಶವೊಂದರ ಮೇಲೆ ದಾಳಿ ನಡೆಸಿದ್ದಾರೆ. ಅದು ಇಡೀ ವಿಶ್ವದಾದ್ಯಂತ ಪರಿಣಾಮಗಳನ್ನು ಬೀರಿದೆ. ಸರ್ವಾಧಿಕಾರಿಯೊಬ್ಬ ಇಂಥ ದಾಳಿಗೆ ಸೂಕ್ತ ಬೆಲೆ ತೆರದೇ ಹೋದ ಸಂದರ್ಭದಲ್ಲಿ ಆತ ಮತ್ತಷ್ಟುಅನಾಹುತಗಳನ್ನು ಸೃಷ್ಟಿಸುತ್ತಲೇ ಹೋಗುತ್ತಾನೆ. ಆತ ಮುಂದುವರೆಯುತ್ತಲೇ ಹೋಗುತ್ತಾನೆ. ಅದರ ಪರಿಣಾಮ, ಅಮೆರಿಕ ಮತ್ತು ವಿಶ್ವದ ಮೇಲಿನ ಅಪಾಯವೂ ಹೆಚ್ಚುತ್ತಲೇ ಹೋಗುತ್ತದೆ ಎಂಬುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತಲೇ ಬಂದಿದ್ದೇವೆ. ಈ ಕಾರಣಕ್ಕಾಗಿಯೇ 2ನೇ ವಿಶ್ವ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ಸ್ಥಿರತೆ ಸ್ಥಾಪಿಸಲು ನಾವು ನ್ಯಾಟೋ ಮೈತ್ರಿಕೂಟವನ್ನು ಸ್ಥಾಪಿಸಿದ್ದು. ಈ ಒಕ್ಕೂಟದಲ್ಲಿ ಅಮೆರಿಕ ಮತ್ತು ಇತರೆ 29 ದೇಶಗಳು ಸದಸ್ಯರಾಗಿವೆ. ಇದು ಮಹತ್ವದ್ದು. ಏಕೆಂದರೆ ಅಮೆರಿಕದ ರಾಜತಾಂತ್ರಿಕತೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ’ ಎಂದು ಹೇಳಿದರು.

ಇದನ್ನೂ ಓದಿ: Russia Ukraine War: ಭಾರತೀಯರ ರಕ್ಷಣೆಗೆ ರಷ್ಯಾದಿಂದಲೇ ಸಾಥ್‌: ನಾಯಿಯೊಂದಿಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿ!

ಜೊತೆಗೆ, ‘ಪುಟಿನ್‌ನ ದಾಳಿ ಪೂರ್ವನಿರ್ಧರಿತ ಮತ್ತು ಅಪ್ರಚೋದಿತ. ಅವರು ರಾಜತಾಂತ್ರಿಕತೆಯ ಪ್ರಯತ್ನಗಳನ್ನು ನಿರಾಕರಿಸಿದ್ದಾರೆ. ಪಶ್ಚಿಮದ ದೇಶಗಳು ಮತ್ತು ನ್ಯಾಟೋ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಅವರು ಇಲ್ಲಿ ನಮ್ಮ ನೆಲದಲ್ಲಿ ನಮ್ಮನ್ನು ವಿಭಜಿಸಬಹುದು ಎಂದು ಅಂದುಕೊಂಡಿದ್ದಾರೆ. ಅದರೆ ಪುಟಿನ್‌ ತಪ್ಪು ತಿಳಿದುಕೊಂಡಿದ್ದಾರೆ. ನಾವು ಸಿದ್ಧರಾಗಿದ್ದೇವೆ’ ಎಂದು ನ್ಯಾಟೋ ದೇಶಗಳ ಮೇಲಿನ ಯಾವುದೇ ದಾಳಿಯನ್ನು ಎದುರಿಸಲು ಅಮೆರಿಕ ಸನ್ನದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದೇ ವೇಳೆ ಉಕ್ರೇನ್‌- ರಷ್ಯಾ ಯುದ್ಧದಲ್ಲಿ ನಾವು ಭಾಗಿಯಾಗಿಲ್ಲ, ಭಾಗಿಯಾಗುವುದೂ ಇಲ್ಲ ಎಂದು ಬೈಡೆನ್‌ ಸ್ಪಷ್ಟಪಡಿಸಿದರು.

ಉಕ್ರೇನ್‌ ಬದಲು ‘ಇರಾನ್‌’ ಎಂದ ಬೈಡೆನ್‌!: ಉಕ್ರೇನ್‌ ದಾಳಿ ವಿಷಯದಲ್ಲಿ ರಷ್ಯಾ ವಿರುದ್ಧ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮಾಡಿದ ಭಾಷಣ ಪ್ರಶಂಸೆಗೆ ಪಾತ್ರವಾಗಿದೆಯಾದರೂ, ಭಾಷಣದ ವೇಳೆ ‘ಉಕ್ರೇನ್‌’ ಎಂದು ಹೇಳುವ ಬದಲು ತಪ್ಪಾಗಿ ‘ಇರಾನ್‌’ ಎಂದು ಉಚ್ಚರಿಸಿದ್ದು ಸಾಕಷ್ಟುಸುದ್ದಿಯಾಗಿದೆ. ಭಾಷಣದ ವೇಳೆ ಬೈಡೆನ್‌ ‘ಪುಟಿನ್‌, ಟ್ಯಾಂಕ್‌ಗಳಿಂದ ಕಿವ್‌ ಅನ್ನು ಸುತ್ತುವರೆದಿರಬಹುದು. ಆದರೆ ಅವರೆಂದು ಇರಾನ್‌ ಜನರ ಹೃದಯ ಮತ್ತು ಆತ್ಮವನ್ನು ಗೆಲ್ಲಲಾರರು’ ಎಂದು ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಇದನ್ನೂ ಓದಿ: Russia Ukraine War: ರಷ್ಯಾದಿಂದ ಅಗ್ನಿ ಮಳೆ: 2000 ಉಕ್ರೇನ್‌ ನಾಗರಿಕರ ಸಾವು!

ಬೆಲಾರಸ್‌ ಮೇಲೂ ಅಮೆರಿಕ ನಿರ್ಬಂಧ: ಉಕ್ರೇನ್‌ ದಾಳಿ ನಡೆಸಿರುವ ರಷ್ಯಾಗೆ ಬೆಂಬಲ ನೀಡುತ್ತಿರುವ ಉಕ್ರೇನ್‌ನ ನೆರೆಯ ರಾಷ್ಟ್ರ ಬೆಲಾರಸ್‌ ಮೇಲೆ ಅಮೆರಿಕ ಮೊದಲ ಬಾರಿಗೆ ನಿಷೇಧ ಹೇರಿದೆ. ರಷ್ಯಾ ಆಕ್ರಮಣಕ್ಕೂ ಮೊದಲು ಸಮರಾಭ್ಯಾಸ ನಡೆಸಲು ಮತ್ತೂ ಉಕ್ರೇನ್‌ ಉತ್ತರ ಗಡಿಯಿಂದ ರಷ್ಯಾ ಆಕ್ರಮಣ ಮಾಡಲು ಬೆಲಾರಸ್‌ ನೀಡಿತ್ತು.

ಬೆಲಾರಾಸ್‌ನಿಂದ ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದ ತಂತ್ರಜ್ಞಾನ ಸರಕುಗಳಿಗೆ ಅಮೆರಿಕ ಸಂಪೂರ್ಣ ನಿರ್ಬಂಧ ಹೇರಿದೆ. ಅಷ್ಟೇ ಅಲ್ಲದೇ ರಷ್ಯಾದ ರಕ್ಷಣಾ ವಲಯವನ್ನು ಗುರಿಯಾಗಿಸಿಕೊಂಡು ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ಉತ್ಪಾದನಾ ಕಂಪನಿಗಳ ಮೇಲೆ ಗಮನಾರ್ಹ ವೆಚ್ಚವನು ವಿಧಿಸಲು ತೀರ್ಮಾನಿಸಿದೆ.

ರಷ್ಯಾ ವಿಮಾನಗಳಿಗೆ ಅಮೆರಿಕ ವಾಯುಸೀಮೆ ನಿಷೇಧ: ಅಮೆರಿಕದ ವಾಯುಸೀಮೆಯನ್ನು ತಕ್ಷಣದಿಂದಲೇ ರಷ್ಯಾದ ಎಲ್ಲಾ ವಿಮಾನಗಳಿಗೂ ನಿಷೇಧಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿದ್ದಾರೆ.

ಇದಲ್ಲದೆ ರಷ್ಯಾದ ತೈಲ ದೊರೆಗಳ ಸಂಪತ್ತು, ಅವರ ಆಸ್ತಿ, ಕಟ್ಟಡ, ವಿಮಾನ ಎಲ್ಲವನ್ನೂ ನಮ್ಮ ಯುರೋಪ್‌ ಮಿತ್ರರ ಜೊತೆಗೂಡಿ ಮುಟ್ಟುಗೋಲು ಹಾಕಿಕೊಳ್ಳಲಿದ್ದೇವೆ ಎಂದು ಪ್ರಕಟಿಸಿದ್ದಾರೆ. ಉಕ್ರೇನ್‌ ಮೇಲೆ ಯುದ್ಧ ಸಾರಿದ್ದಕ್ಕೆ ಯುರೋಪ್‌ ಒಕ್ಕೂಟದ ದೇಶಗಳು ತಮ್ಮ ವಾಯುವಲಯದಲ್ಲಿ ರಷ್ಯಾ ವಿಮಾನ ಹಾರಾಟಕ್ಕೆ ನಿಷೇಧ ಹೇರಿದ್ದವು. ಇದರ ಬೆನ್ನಲ್ಲೇ ಅಮೆರಿಕ ಅಂಥದ್ದೇ ಕ್ರಮ ಕೈಗೊಂಡಿದೆ.

Latest Videos
Follow Us:
Download App:
  • android
  • ios