*ನಿಖರ ಲೆಕ್ಕಾಚಾರ ನಡೆಸಿ ದಾಳಿಗೈದ ರಷ್ಯಾದ ಅಧ್ಯಕ್ಷ ಪುಟಿನ್‌*ಗಂಭೀರವಾಗಿ ತೆಗೆದುಕೊಳ್ಳದೆ ಬೆಲೆ ತೆತ್ತ ಉಕ್ರೇನ್‌ನ ಜೆಲೆನ್‌ಸ್ಕಿ*ಉಕ್ರೇನ್‌, ರಷ್ಯಾ ಸನಿಹ ಹೆಚ್ಚಿನ ಪಡೆಗಳ ನಿಯೋಜನೆ

ಮಾಸ್ಕೋ (ಫೆ. 25) : ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದರ ಹಿಂದಿನ ಬಹುಮುಖ್ಯ ರೂವಾರಿ ವ್ಲಾದಿಮಿರ್‌ ಪುಟಿನ್‌. ರಷ್ಯಾದ 69 ವರ್ಷದ ಅಧ್ಯಕ್ಷ. ರಷ್ಯಾ ಗುಪ್ತಚರ ಸಂಸ್ಥೆ ಕೆಬಿಜಿಯಲ್ಲಿ ಗೂಢಚಾರರಾಗಿ ಸೇವೆ ಆರಂಭಿಸಿದ ಪುಟಿನ್‌ರದ್ದು ವರ್ಣರಂಜಿತ ವ್ಯಕ್ತಿತ್ವ. 2000- 2008, 2012ರಿಂದ ಇಲ್ಲಿವರೆಗೂ ರಷ್ಯಾ ಅಧ್ಯಕ್ಷರಾಗಿದ್ದಾರೆ. ಪುಟಿನ್‌ ಅಂದುಕೊಂಡಿದ್ದನ್ನು ಸಾಧಿಸುವ ಹಟವಾದಿ. 2014ರಲ್ಲಿ ಉಕ್ರೇನ್‌ನ ಪ್ರಾಂತ್ಯವಾದ ಕ್ರಿಮಿಯಾವನ್ನು ತೆಕ್ಕೆಗೆ ತೆಗೆದುಕೊಂಡಿದ್ದರು. ಐಸಿಸ್‌ ಉಗ್ರರಿಂದ ರಕ್ಷಣೆ ಮಾಡುವಂತೆ ಸಿರಿಯಾ ಸರ್ಕಾರ ಮೊರೆ ಇಟ್ಟಾಗ ಬಹಳ ದೂರದಿಂದಲೇ ಕ್ಷಿಪಣಿಗಳನ್ನು ಹಾರಿಸಿ ಉಗ್ರರ ಹೆಡೆಮುರಿ ಕಟ್ಟಿದ್ದರು. 

ಒಮ್ಮೆ ವಿದೇಶ ಪ್ರವಾಸಕ್ಕೆ ಹೋದಾಗ ಅಣ್ವಸ್ತ್ರ ನೌಕೆಯನ್ನು ತಾವು ಭೇಟಿ ನೀಡುವ ದೇಶದ ಬಳಿ ನಿಯೋಜಿಸಿ ಸುದ್ದಿ ಮಾಡಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಕೈಯಾಡಿಸಿದ ಆರೋಪವನ್ನು ಎದುರಿಸಿದ್ದರು. ಬಲಾಢ್ಯ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಕಾರಣಕ್ಕೆ ಅವರದ್ದು ಡೋಂಟ್‌ ಕೇರ್‌ ವ್ಯಕ್ತಿತ್ವ. ಆದರೆ ಭಾರತದ ಜತೆ ಸುಮಧುರ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

1999ರಿಂದ 2000ರವರೆಗೆ ರಷ್ಯಾ ಪ್ರಧಾನಿಯಾಗಿದ್ದ ಪುಟಿನ್‌, 2000ರಿಂದ 2008ರವರೆಗೆ ಸತತ 2 ಬಾರಿ ರಷ್ಯಾ ಅಧ್ಯಕ್ಷರಾಗಿದ್ದರು. ಒಮ್ಮೆ ಅಧ್ಯಕ್ಷರಾದವರು ಸತತ 2ಕ್ಕಿಂತ ಹೆಚ್ಚು ಅವಧಿಗೆ ಆ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ ಎಂಬ ಕಾರಣಕ್ಕೆ ತಮ್ಮ ಆಪ್ತ ಮೆಡ್ವೆಡೇವ್‌ ಅವರನ್ನು ಅಧ್ಯಕ್ಷರನ್ನಾಗಿಸಿ, ಪ್ರಧಾನಿ ಪೀಠ ಅಲಂಕರಿಸಿದ್ದರು! 2012ರಲ್ಲಿ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾದರು. 

ಇದನ್ನೂ ಓದಿRussia-Ukraine Crisis: ಬ್ಲಾಸ್ಟ್‌ ಆಗ್ತಿದೆ, ನಮ್ಮನ್ನು ಕರ್ಕೊಂಡು ಹೋಗಿ: ಉಕ್ರೇನ್‌ನಲ್ಲಿ ಕನ್ನಡಿಗರ ಆಕ್ರಂದನ

ಸತತ 2ಕ್ಕಿಂತ ಹೆಚ್ಚು ಬಾರಿಗೆ ಅಧ್ಯಕ್ಷರಾಗುವಂತಿಲ್ಲ ಎಂಬ ನಿಯಮವನ್ನೇ ಬದಲಿಸಿದ್ದಾರೆ. ಸತತ 4 ಬಾರಿ ಅಧ್ಯಕ್ಷರಾಗಬಹುದು ಎಂದು 2020ರಲ್ಲಿ ತಿದ್ದುಪಡಿ ಮಾಡಿದ್ದಾರೆ. ಹೀಗಾಗಿ 2036ವರೆಗೂ ಪುಟಿನ್‌ಗೆ ಅಡ್ಡಿಯೇ ಇಲ್ಲ. ರಾಜಕೀಯ ಎದುರಾಳಿಗಳು, ತಮ್ಮ ವಿರೋಧಿ ಹೋರಾಟಗಾರರು, ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಿದ ಆರೋಪವೂ ಪುಟಿನ್‌ ಮೇಲಿದೆ.

ಉಕ್ರೇನ್‌ ಹಾಸ್ಯಗಾರ VS ರಷ್ಯಾದ ಗೂಢಚರ!: ಹಲವು ದಿನಗಳಿಂದ ಸಕಲ ಸಿದ್ಧತೆ ಮಾಡಿಕೊಂಡು ಸರ್ವ ದಿಕ್ಕುಗಳಿಂದ ರಷ್ಯಾ ಇದೀಗ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಿದೆ. ಈ ಏಕಾಏಕಿ ದಾಳಿಗೆ ಉಕ್ರೇನ್‌ ತತ್ತರಗೊಂಡಿದೆ. ರಷ್ಯಾದ ಬೆದರಿಕೆಯನ್ನು ಮೊದಲಿಗೆ ಗಂಭೀರವಾಗಿ ತೆಗೆದುಕೊಳ್ಳದೆ ಉಕ್ರೇನ್‌ ಈಗ ಬೆಲೆ ತೆರಬೇಕಾಗಿ ಬಂದಿದೆ ಎಂಬ ಟೀಕೆ ಕೇಳಿಬಂದಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌ ರಷ್ಯಾದ ಜಗತ್ಪ್ರಸಿದ್ಧ ಗುಪ್ತಚರ ದಳ ಕೆಜಿಬಿಯಲ್ಲಿ ಈ ಹಿಂದೆ 16 ವರ್ಷ ಗೂಢಚರನಾಗಿದ್ದರು. ಅವರಿಗೆ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಸಮರ ತಂತ್ರಗಳು ಕರಗತ. ಮೇಲಾಗಿ ಅವರು 23 ವರ್ಷದಿಂದ ರಷ್ಯಾದ ಪ್ರಧಾನಿ ಅಥವಾ ಅಧ್ಯಕ್ಷನಾಗಿ ನಿರಂತರ ಅಧಿಕಾರ ನಡೆಸುತ್ತಾ ಆಡಳಿತದಲ್ಲಿ ಬಿಗಿ ಹಿಡಿತ ಸಂಪಾದಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿದ ಕನ್ನಡಿಗರು: ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಬೊಮ್ಮಾಯಿ

ಇದಕ್ಕೆ ವ್ಯತಿರಿಕ್ತವಾಗಿ ಉಕ್ರೇನ್‌ನ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ 1999ರಲ್ಲಿ ಅಚಾನಕ್ಕಾಗಿ ಅಧಿಕಾರಕ್ಕೆ ಬಂದ ಹಾಸ್ಯಗಾರ. ಅಲ್ಲಿಯವರೆಗೆ ಅವರು ನೆಟ್‌ಫ್ಲಿಕ್ಸ್‌ ಹಾಗೂ ಟೀವಿಯಲ್ಲಿ ಜನಪ್ರಿಯ ಕಾಮಿಡಿ ಶೋಗಳನ್ನು ನಡೆಸಿಕೊಡುತ್ತಿದ್ದರು. ಶಿಕ್ಷಕನೊಬ್ಬ ದಿಢೀರನೆ ಉಕ್ರೇನ್‌ನ ಅಧ್ಯಕ್ಷನಾದರೆ ಏನಾಗುತ್ತದೆ ಎಂಬ ಅವರ ಕಾರ್ಯಕ್ರಮ ಹಿಟ್‌ ಆಗಿ, ಕೊನೆಗೆ ನಿಜ ಜೀವನದಲ್ಲಿ ಸ್ವತಃ ತಾನೇ ಉಕ್ರೇನ್‌ನ ಅಧ್ಯಕ್ಷರಾದರು. ರಷ್ಯಾ ದಾಳಿ ನಡೆಸುತ್ತದೆ ಎಂಬುದು ಗೊತ್ತಿದ್ದರೂ ಗಡಿಯಲ್ಲಿ ಕಟ್ಟೆಚ್ಚರ ವಹಿಸದೆ ತಮ್ಮ ಅನುಭವದ ಕೊರತೆಯನ್ನು ತೋರಿದ ಅವರೀಗ ದುಬಾರಿ ಬೆಲೆ ತೆರುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟುಸೇನೆ ನಿಯೋಜನೆಗೆ ನ್ಯಾಟೋ ನಿರ್ಧಾರ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಉಕ್ರೇನ್‌ ಮೇಲೆ ದಾಳಿ ಘೋಷಿಸುತ್ತಿದ್ದಂತೆಯೇ ಉಕ್ರೇನ್‌ ಮತ್ತು ತನ್ನ ವ್ಯಾಪ್ತಿಗೆ ಬರುವ ದೇಶಗಳ ಪರ ಟೊಂಕಕಟ್ಟಿನಿಂತಿರುವ ನ್ಯಾಟೋ ಪಡೆಗಳು ರಷ್ಯಾ ಹಾಗೂ ಉಕ್ರೇನ್‌ ಸುತ್ತಲಿನ ದೇಶಗಳಲ್ಲಿನ ತಮ್ಮ ನೆಲೆಗಳಲ್ಲಿ ಇನ್ನಷ್ಟುಸೇನಾ ನಿಯೋಜನೆಗೆ ತೀರ್ಮಾನಿಸಿವೆ. ಅಲ್ಲದೆ, ಉಕ್ರೇನ್‌ಗೆ ಸೇನಾ ಸಲಕರಣೆ ಪೂರೈಕೆಗೂ ತೀರ್ಮಾನಿಸಿವೆ.‘ನ್ಯಾಟೋ’ ಸಂಘಟನೆಯು 30 ದೇಶಗಳ ಸಮೂಹವಾಗಿದೆ. ರಷ್ಯಾ ಯುದ್ಧ ಘೋಷಣೆ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಕೆಲವು ದೇಶಗಳು ಈ ತೀರ್ಮಾನಕ್ಕೆ ಬಂದಿವೆ.

ಇಡೀ ನ್ಯಾಟೋ ಸಂಘಟನೆಯ ಒಮ್ಮತದ ನಿರ್ಣಯ ಇದಾಗಿರುವುದಿಲ್ಲ. ಬದಲಾಗಿ ಕೆಲವು ನ್ಯಾಟೋ ದೇಶಗಳು ತಮ್ಮ ವ್ಯಯಕ್ತಿಕ ನಿರ್ಣಯದ ಆಧಾರದಲ್ಲಿ ಉಕ್ರೇನ್‌ ಪರ ನಿಲ್ಲಲು ಮುಂದಾಗಿವೆ. ಎಸ್ಟೋನಿಯಾ, ಲಾತ್ವಿಯಾ, ಲುಥುವೇನಿಯಾ ಹಾಗೂ ಪೋಲಂಡ್‌- ಈ ದೇಶಗಳು ಯುದ್ಧಪೀಡಿತ ಪೂರ್ವ ಉಕ್ರೇನ್‌ ಸನಿಹದಲ್ಲಿವೆ. ಪ್ರದೇಶದ ಸಮಗ್ರತೆ, ರಾಜಕೀಯ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ ಸಿಡಿದೇಳಲು ನಿರ್ಧರಿಸಿವೆ.

40 ಸಾವಿರ ನ್ಯಾಟೋ ಯೋಧರು ಸಿದ್ಧ: ರಷ್ಯಾ ಬೆದರಿಕೆಯ ಬೆನ್ನಲ್ಲೇ 40 ಸಾವಿರ ‘ನ್ಯಾಟೋ’ ಪಡೆಗಳ ಯೋಧರು ರಷ್ಯಾ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿದ್ದಾರೆ ಎಂದು ವರದಿಗಳು ಹೇಳಿವೆ. 30 ನ್ಯಾಟೋ ಸದಸ್ಯ ದೇಶಗಳು 33 ಲಕ್ಷ ಯೋಧರ ಸಾಮರ್ಥ್ಯ ಹೊಂದಿವೆ. ಈ ಪೈಕಿ 40 ಸಾವಿರ ಮಂದಿ ತಕ್ಷಣಕ್ಕೆ, ರಷ್ಯಾಗೆ ತಿರುಗೇಟು ನೀಡಲು ಸಿದ್ಧರಾಗಿದ್ದಾರೆ. ಇವರು ಉಕ್ರೇನ್‌ ಸುತ್ತಲಿನ 4 ದೇಶಗಳಲ್ಲಿ ಬೀಡು ಬಿಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ರಷ್ಯಾ ಸುಮಾರು 9 ಲಕ್ಷ ಯೋಧರನ್ನು ಹೊಂದಿದೆ.