ತನ್ನ ನಾಗರಿಕರ ರಕ್ಷಣೆಗೆ ಮೊದಲ ವಿಮಾನ ಕಳುಹಿಸಿದ ಚೀನಾ ಚೀನಾಕ್ಕೆ ಬಂದಿಳಿದ ಮೊದಲ ವಿಮಾನ ರೊಮೇನಿಯಾದ ಬುಕಾರೆಸ್ಟ್‌ನಿಂದ ಹೊರಟಿದ್ದ ವಿಮಾನ

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಆರಂಭವಾಗಿ ಇಂದಿಗೆ 10 ದಿನಗಳಾಗಿದ್ದು, ಇದುವರೆಗೆ ಭಾರತ ಹೊರತುಪಡಿಸಿ ಚೀನಾ ಸೇರಿದಂತೆ ಇತರ ದೇಶಗಳು ತನ್ನ ಪ್ರಜೆಗಳ ರಕ್ಷಣೆಗೆ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಅಲ್ಲದೇ ಚೀನಾ ಹಾಗೂ ಅಮೆರಿಕಾ ದೇಶಗಳು ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದು ತನ್ನ ಪ್ರಜೆಗಳಿಗೆ ಖಡಕ್ ಆಗಿ ಹೇಳಿತ್ತು. ಈ ಮಧ್ಯೆ ನಿರ್ಧಾರ ಬದಲಿಸಿದ ಚೀನಾ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ಪ್ರಜೆಗಳ ರಕ್ಷಣೆಗೆ ಮೊದಲ ವಿಮಾನ ಕಳುಹಿಸಿದೆ. ಈ ಮೂಲಕ ತನ್ನ ಪ್ರಜೆಗಳ ರಕ್ಷಣೆಗೆ ಚೀನಾ ಮುಂದಾಗಿದೆ.

ಆದರೆ ಭಾರತ ಮಾತ್ರ ತನ್ನ ಪ್ರಜೆಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಿತ್ತು. ಯುದ್ಧ ಆರಂಭವಾದಂದಿನಿಂದಲೇ ಆಪರೇಷನ್‌ ಗಂಗಾ ಹೆಸರಿನಲ್ಲಿ ಸ್ಥಳಾಂತರ ಕಾರ್ಯ ಶುರು ಮಾಡಿದ ಭಾರತ ತನ್ನ ಸಾವಿರಾರು ಪ್ರಜೆಗಳು ಹಾಗೂ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ಕರೆತರಲು ಉಕ್ರೇನ್‌ ಸಮೀಪದ ರಾಷ್ಟ್ರಗಳಿಗೆ ವಿಮಾನವನ್ನು ಕಳುಹಿಸಿಕೊಟ್ಟಿತ್ತು. ಪ್ರಯಾಣಿಕ ವಿಮಾನಗಳಲ್ಲದೇ ಭಾರತ ವಾಯುಸೇನೆಯ ವಿಮಾನಗಳನ್ನು ಕೂಡ ತನ್ನ ಪ್ರಜೆಗಳ ರಕ್ಷಣೆಗಾಗಿ ಕಳುಹಿಸಿ ಕೊಟ್ಟಿದೆ. ಜೊತೆಗೆ ಕೇಂದ್ರ ಸಂಪುಟದ ನಾಲ್ವರು ಸಚಿವರು ಕೂಡ ಸಮೀಪದ ಬೇರೆ ಬೇರೆ ದೇಶಗಳಿಗೆ ತೆರಳಿದ್ದು, ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಉಕ್ರೇನ್‌ನಿಂದ (Ukraine) ಸ್ಥಳಾಂತರಿಸಲ್ಪಟ್ಟ ಚೀನೀ ವಿದ್ಯಾರ್ಥಿಗಳು ಮತ್ತು ಪ್ರಜೆಗಳನ್ನು ಹೊತ್ತ ಮೊದಲ ಚಾರ್ಟರ್ಡ್ ವಿಮಾನವು (chartered flight) ಶನಿವಾರ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ (Zhejiang Province) ರಾಜಧಾನಿ ಹ್ಯಾಂಗ್‌ಝೌಗೆ (Hangzhou) ಬಂದಿಳಿದಿದೆ. ಇದು ಉಕ್ರೇನ್‌ನಲ್ಲಿ ಸಿಲುಕಿದ್ದ ತನ್ನ ಪ್ರಜೆಗಳನ್ನು ಸ್ಥಳಾಂತರಿಸಲು ಚೀನಾ ಕಳುಹಿಸಿದ ಮೊದಲ ಚಾರ್ಟರ್ಡ್ ವಿಮಾನ ಆಗಿದೆ. ಉಕ್ರೇನ್‌ನಲ್ಲಿದ್ದ 3,000 ಕ್ಕೂ ಹೆಚ್ಚು ಚೀನೀ ನಾಗರಿಕರು ಉಕ್ರೇನ್‌ ತೊರೆದು ನೆರೆಯ ದೇಶಗಳಿಗೆ ಬಂದಿದ್ದರು.

Russia Ukraine War: ರಷ್ಯಾ ಪರ ಇದ್ದ ಚೀನಾದಿಂದ ಈಗ ಉಕ್ರೇನ್‌ ಪರ ಬ್ಯಾಟಿಂಗ್‌

ವೇರಿಫ್ಲೈಟ್ ಗ್ಲೋಬಲ್ ಟೈಮ್ಸ್‌ಗೆ ಕಳುಹಿಸಿದ ಮಾಹಿತಿಯ ಪ್ರಕಾರ, ಶುಕ್ರವಾರದಂದು 20:08 (ಬೀಜಿಂಗ್ ಸಮಯ) ಕ್ಕೆ ರೊಮೇನಿಯಾದ (Romania) ರಾಜಧಾನಿ ಬುಕಾರೆಸ್ಟ್‌ನಿಂದ (Bucharest) ಫ್ಲೈಟ್ CA702 ಚೀನಾಗೆ 48 ನಿಮಿಷ ತಡವಾಗಿ ಹೊರಟಿತು. ಮತ್ತೊಂದು ವಿಮಾನವು ಶನಿವಾರ(ಇಂದು) ಬೆಳಗ್ಗೆ 10:15 ಕ್ಕೆ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ (Henan Province) ಝೆಂಗ್‌ಝೌನಲ್ಲಿ (Zhengzhou) ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಏರ್ ಚೀನಾದ ಚಾರ್ಟರ್ ಫ್ಲೈಟ್‌ಗಳು ಗರಿಷ್ಠ 301 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿವೆ. ಉಕ್ರೇನ್‌ನಲ್ಲಿ ಓದುತ್ತಿದ್ದ ಇಬ್ಬರು ಚೀನೀ ವಿದ್ಯಾರ್ಥಿಗಳು ಚೀನಾಕ್ಕೆ ಹಿಂತಿರುಗಿದವರಲ್ಲಿ ಮೊದಲಿಗರಾಗಿದ್ದು, ಉಕ್ರೇನ್‌ನಲ್ಲಿ ತಮ್ಮ ಇತ್ತೀಚಿನ ಅನುಭವ ಕನಸಿನಂತೆ ಆಗಿತ್ತು ಎಂದು ವಿಮಾನ ಹತ್ತುವ ಮೊದಲು ಅವರು ಮಾಧ್ಯಮಕ್ಕೆ ತಿಳಿಸಿದರು. ಅವರು ಚೀನೀ ರಾಯಭಾರ ಕಚೇರಿ ಮತ್ತು ಅವರಿಗೆ ಸಹಾಯ ಮಾಡಿದ ಎಲ್ಲ ಜನರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. 

Russia Ukraine Crisis: ತನ್ನ ಪ್ರಜೆಗಳನ್ನು ರಕ್ಷಿಸಿ ಮಾದರಿಯಾದ ಭಾರತ: ತನ್ನವರ ರಕ್ಷಣೆಗೆ ಮುಂದಾಗದ ಚೀನಾ!

ಗುರುವಾರ ಮಧ್ಯಾಹ್ನದ ವೇಳೆಗೆ ಬಹುತೇಕ ಎಲ್ಲಾ ಚೀನೀ ಪ್ರಜೆಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯು ಗ್ಲೋಬಲ್ ಟೈಮ್ಸ್‌ಗೆ ಹೇಳಿದೆ. ಉಕ್ರೇನಿಯನ್ ಸರ್ಕಾರವು ಖಾರ್ಕಿವ್‌ನಲ್ಲಿ 180 ಚೀನೀ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ವಿಶೇಷ ರೈಲನ್ನು ವ್ಯವಸ್ಥೆ ಮಾಡಿದೆ ಎಂದು ಅದು ಹೇಳಿದೆ. ಈ ಎರಡು ವಿಮಾನಗಳ ಜೊತೆಗೆ, ವೇರಿಫ್ಲೈಟ್ ಒದಗಿಸಿದ ಮಾಹಿತಿಯ ಪ್ರಕಾರ, ಶನಿವಾರ ಮತ್ತು ಭಾನುವಾರದಂದು ಮತ್ತೊಂದು ನಾಲ್ಕು ಚಾರ್ಟರ್ಡ್ ಫ್ಲೈಟ್‌ಗಳು ರೊಮೇನಿಯಾದಿಂದ ಚೀನೀಯರನ್ನು ಕರೆತರುತ್ತವೆ ಎಂದು ತಿಳಿದು ಬಂದಿದೆ. 

ರಷ್ಯಾದಿಂದ ದಾಳಿಗೆ ತುತ್ತಾಗಿರುವ ಉಕ್ರೇನ್‌ನಿಂದ ತಮ್ಮ ನಾಗರಿಕರ ರಕ್ಷಣೆಗೆ ಭಾರತ ಸೇರಿ ಹಲವು ದೇಶಗಳು ಮುಂದಾಗಿದ್ದರೆ, ಚೀನಾ ಮಾತ್ರ ಈ ವಿಷಯದಲ್ಲಿ ಅಸಡ್ಡೆ ತೋರಿದೆ ಎಂಬ ಟೀಕೆ ಈ ಹಿಂದೆ ವ್ಯಕ್ತವಾಗಿತ್ತು. ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಈಗಿನ ಪರಿಸ್ಥಿತಿ ಸುರಕ್ಷಿವಲ್ಲ ಎಂದು ಚೀನಾ ಸರ್ಕಾರ ಕಾರಣ ನೀಡಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಉಕ್ರೇನ್‌ನಲ್ಲಿನ ಚೀನಾ ರಾಯಭಾರಿ ಫ್ಯಾನ್‌ ಕ್ಸಿಯಾನ್‌ರಾಂಗ್‌, ನಮ್ಮೆಲ್ಲಾ ನಾಗರಿಕರನ್ನು ಬಿಟ್ಟು ನಾನು ಉಕ್ರೇನ್‌ನಿಂದ ತೆರಳಿದ್ದೇನೆ ಎಂಬ ಸುದ್ದಿ ಸುಳ್ಳು. ನಾವು ಇಲ್ಲಿಂದ ತೆರವು ಕಾರ್ಯಾಚರಣೆ ಆರಂಭಿಸಲು, ಪರಿಸ್ಥಿತಿ ಸುಧಾರಣೆ ಆಗುವವರೆಗೂ ಕಾಯಬೇಕು. ಎಲ್ಲರಿಗೂ ಗರಿಷ್ಠ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ ಮತ್ತು ನಾವು ಎಲ್ಲರಿಗೂ ಸುರಕ್ಷತೆಯನ್ನು ಖಾತರಿಪಡಿಸುತ್ತೇವೆ. ನಾವು ಎಲ್ಲಾ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದರು.