ಬೆಂಗಳೂರು(ಜು.21): ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಈಚೆಗೆ ದಾಖಲೆಯ ಮಟ್ಟದಲ್ಲಿ ಕೊರೋನಾ ವೈರಸ್‌ ಪರೀಕ್ಷೆಯ ಪ್ರಮಾಣ ಹೆಚ್ಚಿಸುತ್ತಿದ್ದು ಪರೀಕ್ಷೆ ಹೆಚ್ಚಾದಂತೆ ಸರಾಸರಿ ಪಾಸಿಟಿವಿಟಿ (ಶೇಕಡಾವಾರು ಸೋಂಕು) ದರ ಕಡಿಮೆಯಾಗುತ್ತಿದೆ. ಇದು ಆತಂಕದಲ್ಲಿರುವ ಜನತೆ ನಿಟ್ಟಿಸಿರು ಬಿಡುವಂತೆ ಮಾಡಿದೆ.

ಪ್ರತಿ 100 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಸೋಂಕಿತರಾಗುತ್ತಿರುವವರ ಪ್ರಮಾಣ ಜು.16ರಿಂದ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜು.16ರಂದು ಶೇ.17.77ರಷ್ಟಿದ್ದ ಪಾಸಿಟಿವಿಟಿ ದರ ಕ್ರಮೇಣ ಕಡಿಮೆಯಾಗುತ್ತಾ ಬಂದು ಸೋಮವಾರಕ್ಕೆ (ಜು.20ಕ್ಕೆ) ಶೇ.10ಕ್ಕೆ ಕುಸಿದಿದೆ.

ಲಾಕ್ಡೌನ್‌ ವೇಳೆ ಶೇ.55ರಷ್ಟು ಕುಟುಂಬಕ್ಕೆ ದಿನಕ್ಕೆ 2 ಹೊತ್ತು ಮಾತ್ರ ಊಟ!

ರಾಜ್ಯವು ಭಾನುವಾರವಷ್ಟೇ 10 ಲಕ್ಷ ಸೋಂಕು ಪರೀಕ್ಷೆಯ ಮೈಲಿಗಲ್ಲು ದಾಟಿದೆ. ಒಟ್ಟು ಪರೀಕ್ಷೆಗಳ ಪೈಕಿ ಸರಾಸರಿ 6.37 ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಒಂದು ತಿಂಗಳಿಂದ ಈಚೆಗೆ ಪಾಸಿಟಿವಿಟಿ ದರ ಏರಿಕೆಗತಿಯತ್ತ ಸಾಗಿತ್ತು. ಆದರೆ, ಕಳೆದ ಐದು ದಿನಗಳಿಂದ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಬೆಂಗಳೂರಿನಲ್ಲಿ ಶೇ.12 ಪಾಸಿಟಿವ್‌:

ರಾಜ್ಯದ ಒಟ್ಟು ಪರೀಕ್ಷೆಗಳಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಶೇ.25ರಷ್ಟುಪರೀಕ್ಷೆಗಳು ನಡೆದಿವೆ. 2,47,800 ಪರೀಕ್ಷೆ ನಡೆದಿರುವ ಬೆಂಗಳೂರು ನಗರದಲ್ಲಿ ಸೋಂಕಿನ ದರ ಶೇ.12ರಷ್ಟುಇದೆ.

ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು:

ಸೋಂಕು ಪರೀಕ್ಷೆಯಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಲಾಗಿದೆ. ಜುಲೈ 16ರ ವೇಳೆಗೆ ದೇಶದಲ್ಲಿ ಪ್ರತಿ 10 ಲಕ್ಷ ಮಂದಿಗೆ ಸರಾಸರಿ 10,266 ಮಂದಿಗೆ ಪರೀಕ್ಷೆ ನಡೆಸಿದ್ದರೆ ರಾಜ್ಯದಲ್ಲಿ ಬರೋಬ್ಬರಿ 14,756 ಮಂದಿಗೆ ಪರೀಕ್ಷೆ ನಡೆಸಲಾಗಿತ್ತು.

ಸೊಳ್ಳೆಯಿಂದ ಹರಡುತ್ತಾ ಕೊರೋನಾ? ಕೊನೆಗೂ ಸಿಕ್ತು ಉತ್ತರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಉದಾ: ಬೆಂಗಳೂರಿನಲ್ಲಿ ನಿತ್ಯ 4,370 ಪರೀಕ್ಷೆಯ ಗುರಿ ನಿಗದಿಯಾಗಿದ್ದರೆ ಶೇ.119.7 ರಷ್ಟುಗುರಿ ಸಾಧನೆ ಮಾಡಲಾಗಿದೆ. ಉಳಿದಂತೆ ಚಿಕ್ಕಮಗಳೂರಿನಲ್ಲಿ ಬರೋಬ್ಬರಿ ಶೇ.240.8, ಬೆಂಗಳೂರು ಗ್ರಾಮಾಂತರ ಶೇ.170.6, ಕಲಬುರಗಿ ಶೇ.140.2, ವಿಜಯಪುರ ಶೇ.112.4 ಹೀಗೆ ಹಲವು ಜಿಲ್ಲೆಗಳಲ್ಲಿ ಗುರಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗಿದೆ.

ಇಳಿಕೆಗೆ ಏನು ಕಾರಣ?

ಕಳೆದ ನಾಲ್ಕು ದಿನದಿಂದ ಪರೀಕ್ಷೆಗಳ ಪ್ರಮಾಣ ತೀವ್ರ ಏರಿಕೆ ಮಾಡಿದ್ದು ಸಮುದಾಯದ ಹಂತದಲ್ಲಿ ಸೋಂಕು ಹರಡಿರುವುದನ್ನು ಪರೀಕ್ಷೆ ಮಾಡಲು ಹಲವೆಡೆ ರಾರ‍ಯಂಡಮ್‌ ಪರೀಕ್ಷೆಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಪರೀಕ್ಷೆ ಹೆಚ್ಚಾದಂತೆ ಸೋಂಕು ಕಡಿಮೆಯಾಗುತ್ತಿರುವುದರಿಂದ ಸೋಂಕು ಇನ್ನೂ ಸಮುದಾಯದ ಹಂತಕ್ಕೆ ಹರಡಿಲ್ಲ ಎಂಬ ತೀರ್ಮಾನಕ್ಕೆ ಆರೋಗ್ಯ ಇಲಾಖೆ ಬಂದಿದೆ. ಸಮುದಾಯಕ್ಕೆ ಹರಡದಿರುವುದರಿಂದಲೇ ಪರೀಕ್ಷೆ ಹೆಚ್ಚಾದಂತೆ ಪಾಸಿಟಿವಿಟಿ ದರ ಇಳಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.