* ರಷ್ಯಾದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಉಲ್ಬಣ* ಒಂದೇ ದಿನ ರಷ್ಯಾದಲ್ಲಿ 40,993 ಹೊಸ ಕೇಸ್‌ಗಳು ಪತ್ತೆ

ಮಾಸ್ಕೋ(ನ.01): ರಷ್ಯಾದಲ್ಲಿ (Russia) ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಸೋಂಕು (Covid 19 Infection) ಉಲ್ಬಣಗೊಳ್ಳುತ್ತಿದ್ದು, ಭಾನುವಾರ ಒಂದೇ ದಿನ ರಷ್ಯಾದಲ್ಲಿ (Russia) 40,993 ಹೊಸ ಕೇಸ್‌ಗಳು ಪತ್ತೆಯಾಗಿವೆ. ಇದು ಇದುವರೆಗಿನ ಗರಿಷ್ಠ ಸಂಖ್ಯೆಯಾಗಿದೆ.

ಸಾವು ಕೂಡ ನಿತ್ಯ ಸಾವಿರದ ಮೇಲೆಯೇ ದಾಖಲಾಗುತ್ತಿದ್ದು ಭಾನುವಾರ ಸೋಂಕಿನಿಂದ 1,158 ಮಂದಿ ಮೃತಪಟ್ಟಿದ್ದಾರೆ. ಪರಿಣಾಮ ಒಟ್ಟು ಸಾವಿನ ಸಂಖ್ಯೆ ರಷ್ಯಾದಲ್ಲಿ 2.39 ಲಕ್ಷಕ್ಕೆ ತಲುಪಿದೆ.

ರಷ್ಯಾದ 14 ಕೋಟಿ ಜನಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 1 ಕೋಟಿ ಸಮೀಪಿಸಿದೆ. ಕಳೆದೊಂದು ವಾರದಿಂದ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿವೆ. ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅ.30ರಿಂದ ನ.7ರವರೆಗೆ 10 ದಿನ ‘ನಾನ್‌ ವರ್ಕಿಂಗ್‌ ಡೇ’ ಎಂದು ಘೋಷಿಸಿದ್ದು, ಪರಿಣಾಮ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಇನ್ನು ಗುರುವಾರದಿಂದಲೇ ಶಾಲೆಗಳು, ಜಿಮ್‌, ಪಾರ್ಕ್ ಮತ್ತು ಮನರಂಜನಾ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಔಷಧ ಕಂಪನಿಗಳಿಗೆ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.

ಇನ್ನು ಲಸಿಕೆಹಾಕಿಸಿಕೊಳ್ಳದ 60 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿಬಂರ್‍ಧಿಸಿದ್ದು, ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ನವೆಂಬರ್‌ 7ರ ಬಳಿಕವೂ ಮ್ಯೂಸಿಯಂ, ಚಿತ್ರಮಂದಿರ ಮತ್ತು ಸಭಾಂಗಣಗಳಲ್ಲಿ ಲಸಿಕೆ ಹಾಕಿಸಿಕೊಂಡ ಜನತೆಗೆ ಮಾತ್ರ ಅವಕಾಶ ನೀಡಲಾಗಿದೆ.

2020ರ ಆಗಸ್ಟ್‌ನಲ್ಲೇ ರಷ್ಯಾ ಲಸಿಕೆಗೆ ಅನುಮತಿ ಪಡೆದು, ಜಗತ್ತಿನಲ್ಲೇ ಮೊದಲ ರಾಷ್ಟ್ರ ಎಂದು ಗುರತಿಸಿಕೊಂಡಿತ್ತು. ಆದರೆ ಲಸಿಕಾಕರಣಕ್ಕೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಸೋಂಕು ಮತ್ತೆ ಸ್ಫೋಟಗೊಂಡು ರಷ್ಯಾ ಸ್ತಬ್ಧಗೊಳ್ಳುವಂತೆ ಮಾಡಿದೆ.

ಪಶ್ಚಿಮ ರಾಷ್ಟ್ರಗಳಲ್ಲಿ ಕೋವಿಡ್‌ ಹೊಸ ಅಲೆ!

ಅಮೆರಿಕ, ಬ್ರಿಟನ್‌, ರಷ್ಯಾ, ಉಕ್ರೇನ್‌, ಟರ್ಕಿ, ಜರ್ಮನಿ, ಬ್ರೆಜಿಲ್‌ ಸೇರಿದಂತೆ ಹಲವು ದೇಶಗಳಲ್ಲಿ ಕಳೆದ 2 ತಿಂಗಳ ಬಳಿಕ ಮತ್ತೆ ಹೊಸ ಕೊರೋನಾ ಪ್ರಕರಣ ಮತ್ತು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಭಾರತ ಸೇರಿದಂತೆ ಇತರೆ ದೇಶಗಳಿಗೆ 3ನೇ ಅಲೆಯ ಎಚ್ಚರಿಕೆಯ ಕರೆಗಂಟೆಯಾಗಿ ಕೇಳಿಸಿದೆ.

ಭಾರತದಲ್ಲಿ ಕಳೆದ 126 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದು, ಹೊಸ ಸೋಂಕು ಮತ್ತು ಸಾವು ಎರಡೂ ನಿಯಂತ್ರಣದಲ್ಲಿದೆ ಎಂದು ಕಂಡುಬರುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಅ.28ರಂದು ಬಿಡುಗಡೆ ಮಾಡಿದ ತನ್ನ ವಾರದ ಕೋವಿಡ್‌ ವರದಿಯಲ್ಲಿ, ‘ವಿಶ್ವದ ಎಲ್ಲಾ ದೇಶಗಳು ಇನ್ನೂ ಎರಡೂ ಲಸಿಕೆ ಪಡೆದವರೂ ಸೇರಿದಂತೆ ಎಲ್ಲರಿಗೂ ಹೊಸ ಕೊರೋನಾ ತಳಿಗಳು ಬಾಧಿಸುವ ಅಪಾಯ ಎದುರಿಸುತ್ತಿವೆ’ ಎಂದು ಎಚ್ಚರಿಕೆ ನೀಡಿದೆ. ಇದು ಭಾರತಕ್ಕೂ ಆತಂಕ ಮೂಡಿಸುವ ವಿಚಾರವಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧೋನಾಮ್‌ ಘೇಬ್ರಿಯಾಸಿಸ್‌, ‘ಕಳೆದ 2 ತಿಂಗಳಲ್ಲೇ ಮೊದಲ ಬಾರಿಗೆ ವಿಶ್ವದಾದ್ಯಂತ ಹೊಸ ಪ್ರಕರಣ ಮತ್ತು ಸಾವು ಎರಡರಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಕೋವಿಡ್‌ ಸಾಂಕ್ರಾಮಿಕದ ಅಪಾಯ ಇನ್ನೂ ಮುಗಿದಿಲ್ಲ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿ ದೇಶದಲ್ಲೂ ಕೋವಿಡ್‌ ನಿಯಂತ್ರಣವಾಗದ ಹೊರತಾಗಿಯೂ, ವೈರಸ್‌ ಹೊಸ ಹೊಸ ರೂಪ ತಾಳುತ್ತಲೇ ಇರುತ್ತದೆ ಮತ್ತು ಎಲ್ಲೆಡೆ ಹಬ್ಬುತ್ತಲೇ ಇರುತ್ತದೆ. ಶ್ರೀಮಂತ ದೇಶಗಳು ಸೇರಿದಂತೆ ಎಲ್ಲಾ ದೇಶಗಳು ಮತ್ತೆ ಕೋವಿಡ್‌ ಪಿಡುಗಿಗೆ ತುತ್ತಾಗುವ ಭೀತಿಯನ್ನು ಎದುರಿಸುತ್ತಿವೆ. ಹೀಗಾಗಿ ದೇಶಗಳು ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟುಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕಿದೆ’ ಎಂದು ಹೇಳಿದ್ದಾರೆ.