* ಬ್ರಿಟನ್‌ ಆಯ್ತು, ರಷ್ಯಾದಲ್ಲೂ ಮತ್ತೆ ಕೊರೋನಾ ರಣಸ್ಫೋಟ* ಸಾರ್ವಕಾಲಿಕ ಗರಿಷ್ಠ 37930 ಕೇಸ್‌ಗಳು ಪತ್ತೆ* ದೇಶಾದ್ಯಂತ ಲಾಕ್ಡೌನ್‌ ರೀತಿ ಕ್ರಮ ಘೋಷಣೆ* 3ನೇ ಅಲೆ ಅಲ್ಲಲ್ಲಿ ಆರಂಭ?

ಮಾಸ್ಕೋ(ಅ.26): ಬ್ರಿಟನ್‌(Britain) ಬಳಿಕ ಇದೀಗ ರಷ್ಯಾದಲ್ಲೂ(Russia) ಮತ್ತೆ ಕೊರೋನಾ ಪ್ರಕರಣಗಳು(Covid 19) ಸ್ಫೋಟಗೊಂಡಿದ್ದು, ಸೋಮವಾರ ಒಂದೇ ದಿನ ದಾಖಲೆಯ 37930 ಹೊಸ ಪ್ರಕರಣಗಳು ಪತ್ತೆಯಾಗಿವೆ. 1069 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗಿಂದ ಇದೇ ಮೊದಲ ಬಾರಿಗೆ ಒಂದೇ ದಿನ ಈ ಪ್ರಮಾಣದ ಮಂದಿಗೆ ಸೋಂಕು ದೃಢಪಟ್ಟಿದೆ.

ದೇಶದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿ ಎವೈ 4.2 ಪತ್ತೆಯಾದ ಬೆನ್ನಲ್ಲೇ ಸೋಂಕು ಉಲ್ಬಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ತಳಿ ಪತ್ತೆಯಾದ ಬ್ರಿಟನ್‌ನಲ್ಲೂ(Britain) ಕಳೆದ ಕೆಲ ದಿನಗಳಿಂದ ಹೊಸ ಪ್ರಕರಣಗಳಲ್ಲಿ ಹೆಚ್ಚಳ ದಾಖಲಾಗಿದೆ.

ಸೋಂಕು ಹೆಚ್ಚಳದ ಬೆನ್ನಲ್ಲೆ ಅ.30ರಿಂದ ನ.7ರವರೆಗೆ ಯಾರೂ ಸಹ ಕೆಲಸಕ್ಕೆ ಹೋಗದಂತೆ ರಷ್ಯಾ ಅಧ್ಯಕ್ಷ ವ್ಲಾದಿಮರ್‌ ಪುಟಿನ್‌(Vladimir Putin) ಆದೇಶಿಸಿದ್ದಾರೆ. ಮಾಸ್ಕೋದಲ್ಲಿ ಗುರುವಾರದಿಂದ ಬಸ್‌ ಸಂಚಾರ, ಜಿಮ್‌ ಹಾಗೂ ಅಂಗಡಿಗಳನ್ನು 11 ದಿನಗಳ ಕಾಲ ಮುಚ್ಚಲು ತೀರ್ಮಾನಿಸಲಾಗಿದೆ. ಈ ಅವಧಿಯಲ್ಲಿ ಔಷಧ ಅಂಗಡಿಗಳು, ರೆಸ್ಟೋರೆಂಟ್‌ ಹಾಗೂ ಕೆಫೆಗಳು ಮಾತ್ರವೇ ತೆರೆದಿರಲಿದ್ದು, ರೆಸ್ಟೋರೆಂಟ್‌ ಮತ್ತು ಕೆಫೆಗಳಲ್ಲಿ ಪಾರ್ಸಲ್‌ ತೆಗೆದುಕೊಳ್ಳುವ ಅವಕಾಶ ಮಾತ್ರ ನೀಡಲಾಗಿದೆ.

ಇನ್ನು ವಸ್ತು ಸಂಗ್ರಹಾಲಯ, ಸಿನಿಮಾ ಮಂದಿರಗಳು, ಮತ್ತು ಸಂಗೀತ ಕಚೇರಿಗಳು ಸೇರಿದಂತೆ ಇನ್ನಿತರ ಸ್ಥಳಗಳಿಗೆ ಲಸಿಕೆ ಪಡೆದ ಮತ್ತು ಯಾವುದೇ ಕಾಯಿಲೆ ಇಲ್ಲದಿರುವ ಬಗ್ಗೆ ಡಿಜಿಟಲ್‌ ದಾಖಲಾತಿ ಹೊಂದಿದವರಿಗೆ ಮಾತ್ರವೇ ಸೀಮಿತಗೊಳಿಸಲಾಗಿದೆ.

ಎವೈ 4.2 ತಳಿ ಹಾವಳಿ

- ಬ್ರಿಟನ್‌ನಲ್ಲಿ ಪತ್ತೆಯಾದ ರೂಪಾಂತರಿ ತಳಿಯೇ ರಷ್ಯಾದಲ್ಲೂ ಸ್ಫೋಟ

- ರಷ್ಯಾದಲ್ಲಿ ಇಷ್ಟುಕೋವಿಡ್‌ ಕೇಸ್‌ ಒಂದೇ ದಿನ ಪತ್ತೆ ಇದೇ ಮೊದಲು

- ಎವೈ 4.2 ತಳಿಯ ಕೋವಿಡ್‌ ವೈರಸ್‌ನಿಂದಾಗಿ ಸೋಂಕು ಭಾರಿ ಏರಿಕೆ

- ಅ.30ರಿಂದ ನ.7ರವರೆಗೆ ಯಾರೂ ಕೆಲಸಕ್ಕೆ ಹೋಗದಂತೆ ಸರ್ಕಾರ ಆದೇಶ

- ಮಾಸ್ಕೋದಲ್ಲಿ ಬಸ್‌ ಸಂಚಾರ, ಜಿಮ್‌, ಅಂಗಡಿಗಳು 11 ದಿನ ಬಂದ್‌