ಬ್ರೆಸಿಲಿಯಾ(ನ.16): ನಿಗದಿಯಂತೆ ಭಾರತಕ್ಕೆ ಎಸ್ -400 ದೀರ್ಘ-ಶ್ರೇಣಿಯ ಕ್ಷಿಪಣಿ ಪೂರೈಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರವಸೆ ನೀಡಿದ್ದಾರೆ. 

ಎಸ್-400 ಟ್ರಯಂಫ್‌ನ ಕ್ಷಿಪಣಿ ವ್ಯವಸ್ಥೆಯನ್ನು 2015ರಲ್ಲಿ ಖರೀದಿಸುವುದಾಗಿ ಭಾರತ ಘೋಷಿಸಿತ್ತು. ಕಳೆದ ವರ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ 5.43 ಶತಕೋಟಿ ಡಾಲರ್ ಮೊತ್ತದ ಕ್ಷಿಪಣಿ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಭಾರತಕ್ಕೆ ಸಿಗಲಿದೆ ರಷ್ಯಾದ ಪ್ರಬಲ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ

ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾದಲ್ಲಿ ನಡೆಯುತ್ತಿರುವ  ಬ್ರಿಕ್ಸ್ ಶೃಂಗಸಭೆ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಪುಟಿನ್, ಯಎಸ್-400 ಕ್ಷಿಪಣಿಯನ್ನು ಭಾರತಕ್ಕೆ ನಿಗದಿತ ಸಮಯದಲ್ಲೇ ಪೂರೈಸಲಾಗುವುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬ್ರಿಕ್ಸ್ ಶೃಂಗಸಭೆಯ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಿ, ಕ್ಷಿಪಣಿ ಪೂರೈಕೆಯ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.

ಭಾರತದ ಮೇಲೆ ನಿರ್ಬಂಧ ಹಾಕ್ತಾರಂತೆ ಟ್ರಂಪ್: ಕಾರಣ ಎಸ್‌–400?

ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಾಮಗ್ರಿಗಳನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧ ಹೇರುವುದಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಬೆದರಿಕೆ ಹಾಕಿದ್ದು ಎಸ್-400 ಒಪ್ಪಂದಕ್ಕೆ ಕೂಡ ಅಮೆರಿಕ ವಿರೋಧ ವ್ಯಕ್ತಪಡಿಸಿದೆ.