- ಯಾರ ಬಳಿಯೂ ಸರಿಯಾಗಿ ಮಾತಿಲ್ಲ ಕತೆಯಿಲ್ಲ- ಹಿರಿಯ ಅಧಿಕಾರಿಗಳ ಮೇಲೆಲ್ಲಾ ಸಿಡುಕುತ್ತಾರೆ- ಹೆಂಡತಿ, ಮಕ್ಕಳ ಜೊತೆಗೂ ಹೆಚ್ಚು ಮಾತಾಡುತ್ತಿಲ್ಲ- ಪುಟಿನ್‌ಗೆ ನಾನಾ ವಿಧದ ತೀವ್ರ ಅನಾರೋಗ್ಯ: ವರದಿ

ಮಾಸ್ಕೋ(ಮಾ.21): ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿ ಮೂರು ವಾರ ಕಳೆದಿದ್ದರೂ ಆ ದೇಶವನ್ನು ಪೂರ್ಣ ಪ್ರಮಾಣದಲ್ಲಿ ಮಣಿಸಲು ಸಾಧ್ಯವಾಗಿಲ್ಲವೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಖಿನ್ನತೆಗೆ ಜಾರಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಅವರು ಇತ್ತೀಚೆಗೆ ಯಾರ ಬಳಿಯೂ ಸರಿಯಾಗಿ ಮಾತನಾಡುತ್ತಿಲ್ಲ. ಕಂಡಕಂಡವರ ಮೇಲೆಲ್ಲಾ ಸಿಡುಕುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

‘ಪುಟಿನ್‌ ನಾನಾ ವಿಧದ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಾನು ಅಂದುಕೊಂಡಂತೆ ಯುದ್ಧ ಮುಗಿಯುತ್ತಿಲ್ಲ ಎಂದು ಖಿನ್ನತೆಗೆ ಜಾರಿದ್ದಾರೆ. ಹೀಗಾಗಿ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಯಾರೊಂದಿಗೂ ಚರ್ಚೆ ನಡೆಸುತ್ತಿಲ್ಲ. ಕೇವಲ ಚುಟುಕಾಗಿ ಆದೇಶಗಳನ್ನು ಮಾತ್ರ ನೀಡುತ್ತಾರೆ. ಅಧಿಕಾರಿಗಳು ಹಾಗೂ ತಮ್ಮ ಬಳಿಗೆ ಬಂದವರ ಮೇಲೆ ರೇಗಾಡುತ್ತಾರೆ’ ಎಂದು ರಷ್ಯಾದ ಉನ್ನತ ಮೂಲಗಳು ಹೇಳಿರುವುದಾಗಿ ಬ್ರಿಟನ್‌ನ ಪ್ರತಿಷ್ಠಿತ ಪತ್ರಿಕೆ ವರದಿ ಮಾಡಿದೆ.

ಯುದ್ಧ ನಿಲ್ಲದಿದ್ದರೆ ಪುಟಿನ್‌ ಅಣ್ವಸ್ತ್ರ ಬೆದರಿಕೆ ಸಾಧ್ಯತೆ: ಗುಪ್ತಚರ ಸಂಸ್ಥೆ ವರದಿ

ಪುಟಿನ್‌ ತಮ್ಮ ಹೆಂಡತಿ, ಮಕ್ಕಳ ಜೊತೆಗೂ ಸರಿಯಾಗಿ ಮಾತನಾಡುತ್ತಿಲ್ಲ. ಪುಟ್ಟಮಕ್ಕಳಷ್ಟೇ ಅಲ್ಲ, ವಯಸ್ಸಿಗೆ ಬಂದ ಮಕ್ಕಳ ಜೊತೆಗೂ ಹೆಚ್ಚು ಮಾತನಾಡುತ್ತಿಲ್ಲ. ಅಧಿಕೃತ ಪತ್ನಿ ಹಾಗೂ ಮಕ್ಕಳಲ್ಲದೆ ಒಲಿಂಪಿಕ್‌ ಸ್ವರ್ಣ ಪದಕ ವಿಜೇತೆ ಅಲಿನಾ ಕಬಯೇವಾಗೆ ಜನಿಸಿದ ಮಕ್ಕಳ ಜೊತೆಗೂ ಮುಕ್ತ ಸಂಭಾಷಣೆ ನಿಲ್ಲಿಸಿದ್ದಾರೆ. ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ನಡೆಸಬೇಕಾಗಿ ಬರಬಹುದು ಎಂಬ ಮುನ್ನೆಚ್ಚರಿಕೆಯಿಂದ ಅವರನ್ನೆಲ್ಲ ರಹಸ್ಯ ಸ್ಥಳಕ್ಕೆ ಕಳಿಸಿದ್ದಾರೆ ಎಂದು ವರದಿ ಹೇಳಿದೆ.

ಈ ಹಿಂದೆ 2014ರಲ್ಲಿ ಪುಟಿನ್‌ರನ್ನು ಭೇಟಿಯಾಗಿದ್ದ ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ಬಳಿ, ‘ಪುಟಿನ್‌ ಬೇರೆಯದೇ ಲೋಕದಲ್ಲಿ ಬದುಕುತ್ತಿದ್ದಾರೆ’ ಎಂದು ಹೇಳಿದ್ದರೆಂದು ವರದಿಯಾಗಿತ್ತು. ಇತ್ತೀಚೆಗೆ ಪುಟಿನ್‌ರನ್ನು ಭೇಟಿಯಾದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಕೂಡ ಪುಟಿನ್‌ ‘ಮೊದಲಿಗಿಂತ ಈಗ ಬಹಳ ಹಟಮಾರಿ ಹಾಗೂ ಏಕಾಂಗಿಯಾಗಿದ್ದಾರೆ’ ಎಂದು ಹೇಳಿದ್ದಾರೆ ಎನ್ನಲಾಗಿತ್ತು.

ರಷ್ಯಾಕ್ಕೆ ದೊಡ್ಡ ಇರುಸುಮುರುಸು... ಪೋಲೆಂಡ್‌ ಗಡಿಯಿಂದ ದಾಳಿ

ರಷ್ಯಾ ಟೀವಿಯಲ್ಲಿ ಪುಟಿನ್‌ ಭಾಷಣ ಮಧ್ಯದಲ್ಲೇ ಕಟ್‌!
ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮಾಸ್ಕೋದ ಮುಖ್ಯ ಫುಟ್ಬಾಲ್‌ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ರಷ್ಯಾದ ಸರ್ಕಾರಿ ಸುದ್ದಿ ವಾಹಿನಿಯು ಭಾಷಣದ ನೇರ ಪ್ರಸಾರವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

ರಷ್ಯಾ 2014ರಲ್ಲಿ ಕ್ರಿಮಿಯಾವನ್ನು ವಶ ಪಡಿಸಿಕೊಂಡಿದ್ದರ ಸ್ಮರಣಾರ್ಥವಾಗಿ ಆಯೋಜಿಸಿದ ಸಮಾರಂಭದಲ್ಲಿ ಪುಟಿನ್‌ ಉಕ್ರೇನಿನಲ್ಲಿ ಯುದ್ಧ ಮಾಡುತ್ತಿರುವ ರಷ್ಯಾದ ಯೋಧರನ್ನು ಬೆಂಬಲಿಸಿ ಮಾತನಾಡುತ್ತಿದ್ದರು. ಭಾಷಣದ ಮಧ್ಯದಲ್ಲೇ ನೇರ ಪ್ರಸಾರವನ್ನು ಕಡಿತಗೊಳಿಸಿ ಹಿಂದೆ ನಡೆ ಕಾರ್ಯಕ್ರಮಗಳಲ್ಲಿ ನುಡಿಸಲಾದ ದೇಶಭಕ್ತಿ ಗೀತೆಗಳ ವಿಡಿಯೋವನ್ನು ಟೀವಿಯಲ್ಲಿ ತೋರಿಸಲಾಯಿತು.

‘ಸರ್ವರ್‌ನ ತಾಂತ್ರಿಕ ದೋಷದಿಂದಾಗಿ ಭಾಷಣದ ಪ್ರಸಾರದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. 10 ನಿಮಿಷಗಳ ನಂತರ ಪುಟಿನ್‌ನ ಇಡೀ ಭಾಷಣವನ್ನು ಆರಂಭದಿಂದ ಕೊನೆಯವರೆಗೂ ಪ್ರಸಾರ ಮಾಡಲಾಗಿದೆ’ ಎಂದು ರಷ್ಯಾದ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್‌ ಹೇಳಿದೆ. ಆದರೂ ರಷ್ಯಾದ ಎಲ್ಲ ಮಾಧ್ಯಮಗಳು ಸರ್ಕಾರದ ಹಿಡಿತದಲ್ಲೇ ಇರುವುದರಿಂದ ಇಂತಹ ಅಡಚಣೆಗಳು ಅಸಾಮಾನ್ಯವಾದದ್ದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಉಕ್ರೇನ್‌ ಹೆಡೆಮುರಿ ಕಟ್ಟಲು ತನ್ನ ಒಂದೊಂದೇ ಅಸ್ತ್ರ ಬಳಸುತ್ತಿರುವ ರಷ್ಯಾ ಸೇನೆ ಇದೀಗ ಭಾರೀ ಹಾನಿ ಮಾಡುವ ಸಾಮರ್ಥ್ಯದ ‘ಕಿಂಝಾಲ್‌’ ಎಂಬ ಸೂಪರ್‌ ಸಾನಿಕ್‌ ಕ್ಷಿಪಣಿಯೊಂದನ್ನು ಬಳಸಿ ಶನಿವಾರ ದಾಳಿ ನಡೆಸಿದೆ. ಇವಾನೋ- ಫ್ರಾಂಕ್‌ವಿಸ್ಕ್‌ ಪ್ರಾಂತ್ಯದ ಡೆಲಿಟ್ಯನ್‌ ಎಂಬ ಗ್ರಾಮದಲ್ಲಿನ ಭೂಗತ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ನಾಶಪಡಿಸಲು ರಷ್ಯಾ ಸೇನೆ ಈ ಕ್ಷಿಪಣಿ ಬಳಸಿದೆ.‘ಕಿಂಝಾಲ್‌’ ಎಂದರೆ ಕನ್ನಡದಲ್ಲಿ ಹರಿತ ಆಯುಧವಾದ ‘ಬಾಕು’ ಎಂದರ್ಥ. ಇದರ ಅರ್ಥಕ್ಕೆ ಅನುಗುಣವಾಗಿಯೇ ಬಲು ತೀಕ್ಷ$್ಣವಾದ ಕ್ಷಿಪಣಿ ಇದೆ.