ಭಾರತೀಯ ಸೇನೆಯು ರುದ್ರ ಮತ್ತು ಭೈರವ ಎಂಬ ಹೊಸ ದಳ ಮತ್ತು ಬೆಟಾಲಿಯನ್‌ಗಳನ್ನು ಸ್ಥಾಪಿಸಿದೆ. ಈ ಹೊಸ ಘಟಕಗಳು ಆಧುನಿಕ ಯುದ್ಧೋಪಕರಣಗಳನ್ನು ಹೊಂದಿದ್ದು, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಿವೆ.
ಭಾರತೀಯ ಸೇನೆಗೀಗ ರುದ್ರ, ಭೈರವ ದಳಗಳ ಬಲ
ನವದೆಹಲಿ: ಭಾರತಕ್ಕೆ ಪಾಕಿಸ್ತಾನ, ಚೀನಾಗಳಂತಹ ನೆರೆದೇಶಗಳ ಉಪಟಳ ಹೆಚ್ಚುತ್ತಿರುವ ಮತ್ತು ಆಧುನಿಕ ಯುದ್ಧವು ಹೊಸ ಹೊಸ ರೂಪ ಪಡೆಯುತ್ತಿರುವ ಹೊತ್ತಿನಲ್ಲೇ, ಭಾರತೀಯ ಸೇನೆಯಲ್ಲಿ 'ರುದ್ರ' ಎಂಬ ಹೊಸ ಬ್ರಿಗೇಡ್ ಮತ್ತು 'ಭೈರವ' ಎಂಬ ಹೊಸ ಬೆಟಾಲಿಯನ್ ಸ್ಥಾಪನೆ ಘೋಷಣೆಯನ್ನು ಸೇನಾ ಮುಖ್ಯಸ್ಥ ಜ। ಉಪೇಂದ್ರ ದ್ವಿವೇದಿ ಮಾಡಿದ್ದಾರೆ.
ಕಾರ್ಗಿಲ್ ವಿಜಯ ದಿನವಾದ ಶನಿವಾರ ಮಾತನಾಡಿದ ಅವರು ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ವ ಶಸ್ತ್ರ ದಳ ಮತ್ತು ವಿಶೇಷ ಪಡೆಗಳ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. 'ಭಾರತೀಯ ಸೇನೆಯು ಪ್ರಸ್ತುತವಿರುವ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುವುದಷ್ಟೇ ಅಲ್ಲ, ಆಧುನೀಕರಣಗೊಂಡು, ಭವಿಷ್ಯದಲ್ಲಿ ಬೇಕಾಗುವಂತೆ ರೂಪುಗೊಳ್ಳುತ್ತಿದೆ.
ಇದರಡಿಯಲ್ಲಿ ರಚನೆಯಾಗಿರುವ ರುದ್ರ ದಳದಲ್ಲಿ ಶಸ್ತ್ರಸಜ್ಜಿತ ಪದಾತಿದಳ, ಫಿರಂಗಿ ಘಟಕಗಳು, ವಿಶೇಷ ಪಡೆಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ಶಸ್ತ್ರಾಸ್ತ್ರ ಸಾಗಣೆ ವ್ಯವಸ್ಥೆಗಳು ಇರಲಿವೆ ಎಂದು ಅವರು ಹೇಳಿದ್ದಾರೆ. ಈಗಾಗಲೇ 2 ಪದಾತಿದಳಗಳನ್ನು ರುದ್ರ ಪಡೆಗಳಾಗಿ ಮಾರ್ಪಡಿಸಲಾಗಿದ್ದು, ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿರುವುದೇ ಇದರ ವಿಶೇಷತೆ.
ಗಡಿ ಕಾಯಲೂ ಹೊಸಪಡೆ: ಗಡಿಭಾಗಗಳಲ್ಲಿ ಶತ್ರುಗಳಿಗೆ ಮಾರಕವಾಗಿ ಪರಿಣಮಿಸ ಬಹುದಾದ 'ಭೈರವ' ಎಂಬ ವಿಶೇಷ ಬೆಟಾಲಿಯನ್ ರಚಿಸಲಾಗುವುದು. ಪ್ರತಿ ಪದಾತಿದಳ ಬಳಿಯೂ ಡ್ರೋನ್ ಸಮೂಹ ಇರಲಿದೆ. ಜತೆಗೆ ಫಿರಂಗಿಗಳ ದಾಳಿ ಸಾಮರ್ಥ ವೃದ್ಧಿಗೆ 'ದಿವ್ಯಾಸ್ತ್ರ' ಮತ್ತು ನಿಖರ ದಾಳಿ ಮಾಡಬಲ್ಲ ಬ್ಯಾಟರಿಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಬ್ರಿಗೇಡ್ ಅಥವಾ ದಳ ಎಂಬುದು 400 ರಿಂದ 1200 ಸೈನಿಕರ ಒಂದು ಗುಂಪಾಗಿದ್ದರೆ ಬೆಟಾಲಿಯನ್ 3000-4000 ಯೋಧರನ್ನು ಒಳಗೊಂಡಿರುತ್ತದೆ.
ಥಾಯ್-ಕಾಂಬೋಡಿಯಾ ಕದನ ನಿಲ್ಲಿದ್ದೂ ನಾನೇ: ಟ್ರಂಪ್
ಲಂಡನ್: ಹಿಂದೂ ದೇಗುಲಕ್ಕಾಗಿ ಕೆಲ ದಿನಗಳಿಂದ ಯುದ್ಧದಲ್ಲಿರುವ ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನಲ್ಲಿಯೂ ಭಾರತ-ಪಾಕಿಸ್ತಾನ ರೀತಿ ಕದನವಿರಾಮ ಮಾಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಬಗ್ಗೆ ಟ್ರುತ್ ಸೋಷಿಯಲ್‌ನಲ್ಲಿ ಹಂಚಿಕೊಂಡಿರುವ ಟ್ರಂಪ್, 'ಕಾಂಬೋಡಿಯಾ ಮತ್ತು ಥಾಯ್ಲೆಂಡ್‌ನ ಪ್ರಧಾನಿಗಳ ಜತೆ ಮಾತಾಡಿದೆ. ಯುದ್ಧ ನಿಲ್ಲುವ ತನಕ ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದು ಹೇಳಿ ಕದನ ವಿರಾಮಕ್ಕೆ ಒಪ್ಪಿಸಿದೆ. ಭಾರತ-ಪಾಕಿಸ್ತಾನದ ಮಧ್ಯೆಯೂ ವ್ಯಾಪರ ಒಪ್ಪಂದದ ಮೇಲೆ ಶಾಂತಿ ಮಾಡಿಸಿದೆ' ಎಂದು ಬರೆದುಕೊಂಡಿದ್ದಾರೆ.
ಥಾಯ್-ಕಾಂಬೋಡಿಯಾ ಯುದ್ಧಕ್ಕೆ 33 ಬಲಿ: ಇದೇ ವೇಳೆ ಕಾಂಬೋಡಿಯಾ ಮತ್ತು ಥಾಯ್ಲೆಂಡ್ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳು ಪರಸ್ಪರ ಶೆಲ್ ಹಾಗೂ ವೈಮಾನಿಕ ದಾಳಿ ಮುಂದುವರಿಸಿದ್ದು, ಈ ಸಂಘರ್ಷದಲ್ಲಿ ಈವರೆಗೆ 33 ಮಂದಿ ಮೃತಪಟ್ಟಿದ್ದಾರೆ. ಎರಡೂ ದೇಶಗಳಲ್ಲಿ ಸುಮಾರು 1.70 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ.
ಪುಣೆ ಅವ್ಯವಸ್ಥೆ ಬಗ್ಗೆ ಪವಾರ್ ಕೆಂಡಾಮಂಡಲ
ಪುಣೆ: ಭಾರತದ ಐಟಿ ರಾಜಧಾನಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಅನ್ಯ ರಾಜ್ಯಗಳ ಐಟಿ ಉದ್ಯೋಗಿಗಳು ಟೀಕೆ ಮಾಡುತ್ತಿರುವ ಹೊತ್ತಿನಲ್ಲೇ, ರಾಜ್ಯದ ಅವ್ಯವಸ್ಥೆಯಿಂದಾಗಿ ಐಟಿ ಕಂಪನಿಗಳು ಬೆಂಗಳೂರಿನತ್ತ ವಲಸೆ ಹೋಗುತ್ತಿವೆ ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಗೋಳಿಟ್ಟುಕೊಂಡಿದ್ದಾರೆ. ಪಿಂಪ್ರಿ ಚಿಂಚ್ಚಾಡದಲ್ಲಿ ರಸ್ತೆ, ಚರಂಡಿಗಳಲ್ಲಿ ನೀರುನಿಲ್ಲುವಿಕೆಯಂಥ ಸಮಸ್ಯೆ ಪರಿಶೀಲನೆಗೆ ಬೆಳ್ಳಂಬೆಳಗ್ಗೆ ತೆರಳಿದ್ದ ವೇಳೆ ಕೋಪಗೊಂಡ ಅಜಿತ್, 'ನಾವು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಹಿಂಜವಾಡಿ ಐಟಿ ಪಾರ್ಕ್ ಪುಣೆಯಿಂದಷ್ಟೇ ಏಕೆ, ಮಹಾರಾಷ್ಟ್ರದಿಂದಲೇ ಹೊರ ಹೋಗಿ ಬೆಂಗಳೂರು, ಹೈದರಾಬಾದ್‌ನಲ್ಲಿ ನೆಲೆಸುತ್ತಿದೆ. ನಿಮಗ್ಯಾರಿಗೂ ಚಿಂತೆಯೇ ಇಲ್ಲವೇ? ಎಂದು, ಸರಪಂಚ್ ಗಣೇಶ್ ಜಂಭುಲ್ಕರ್ ಅವರೆದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂಜವಾಡಿಯಲ್ಲಿ 2,800 ಎಕರೆ ವ್ಯಾಪ್ತಿಯಲ್ಲಿ ರಾಜೀವ್ ಗಾಂಧಿ ಟೆಕ್ ಪಾರ್ಕ್ ಇದ್ದು, ಅಲ್ಲಿ 800ಕ್ಕೂ ಅಧಿಕ ಕಂಪನಿಗಳಿವೆ. ಅವುಗಳೆಲ್ಲ ಈಗ ಬೇರೆ ರಾಜ್ಯದ ಮಹಾ ನಗರಗಳಿಗೆ ಸ್ಥಳಾಂತರಗೊಳ್ಳುತ್ತಿರುವುದು ಅಜಿತ್ ಅಸಮಾಧಾನಕ್ಕೆ ಕಾರಣವಾಗಿದೆ.
