ಕೆಲಸಗಾರನಿಗೆ 30 ಕೆಜಿ ನಾಣ್ಯಗಳ ಮೂಲಕ ಸಂಬಳ ಕೊಟ್ಟ ಮಾಲೀಕ!

ರೆಸ್ಟೋರೆಂಟ್ ಮಾಲೀಕರೊಬ್ಬರು ಕೆಲಸ ಬಿಟ್ಟುಹೋದ ಉದ್ಯೋಗಿಗೆ ಬಾಕಿ ಒಂದು ತಿಂಗಳ ಸಂಬಳವನ್ನು ಬಕೆಟ್‌ನಲ್ಲಿ ನಾಣ್ಯಗಳನ್ನು ತುಂಬಿ ನೀಡಿದ್ದಾರೆ. ಈ ನಾಣ್ಯಗಳನ್ನು ತೂಕ ಹಾಕಿದರೆ ಬರೋಬ್ಬರಿ 30 ಕೆ.ಜಿ. ತೂಕ ಹೊಂದಿದ್ದು, ಕೆಲಸಗಾರ ಸಂಬಳ ಹಣವನ್ನು ಬಕೆಟ್‌ನಲ್ಲಿ ಹೊತ್ತುಕೊಂಡು ಹೋಗಿದ್ದಾನೆ.

Restaurant owner Pays Employee Salary in 30 kg of Coins sat

ಸಾಮಾನ್ಯವಾಗಿ ಯಾವುದೇ ಒಂದು ಸಂಸ್ಥೆ, ಕಂಪನಿ, ಹೋಟೆಲ್, ರೆಸ್ಟೋರೆಂಟ್, ಜಮೀನಿನಲ್ಲಿ ಕೆಲಸ ಮಾಡುವ ನೌಕರರಿಗೆ ದಿನಗೂಲಿ ಮತ್ತು ತಿಂಗಳ ಸಂಬಳವನ್ನು ಹಣದ ರೂಪದಲ್ಲಿ ನೀಡಲಾಗುತ್ತಿದೆ. ಇನ್ನು ಮಾಸಿಕ ಸಂಬಳ ನೀಡುವಾಗ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಅವರ ಖಾತೆಗೆ ಹಣ ಜಮಾವಣೆ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ರೆಸ್ಟೋರೆಂಟ್ ಮಾಲೀಕ ತನ್ನ ಕೆಲಸಗಾರನಿಗೆ ಬಕೆಟ್‌ನಲ್ಲಿ ನಾಣ್ಯಗಳನ್ನು ತುಂಬಿ ಸಂಬಳವನ್ನು ಕೊಟ್ಟಿದ್ದಾರೆ. ಈ ಸಂಬಳದ ನಾಣ್ಯಗಳ ತೂಕ ಬರೋಬ್ಬರು 30 ಕೆ.ಜಿ ಇತ್ತು ಎಂದು ಉದ್ಯೋಗಿ ಹೇಳಿಕೊಂಡಿದ್ದಾರೆ.

ಈ ಘಟನೆ ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಒಂದು ರೆಸ್ಟೋರೆಂಟ್‌ನಲ್ಲಿ ನಡೆದಿದೆ. ರೆಸ್ಟೋರೆಂಟ್ ಮಾಲೀಕರು ತಮ್ಮ ಒಬ್ಬ ಉದ್ಯೋಗಿಗೆ ನಾಣ್ಯಗಳಲ್ಲಿ ಸಂಬಳ ನೀಡಿದ್ದಾರೆ. ಅದೂ ದೇಶದ ಅತ್ಯಂತ ಚಿಕ್ಕ ನಾಣ್ಯಗಳಲ್ಲಿ ಒಂದಾದ 5 ಸೆಂಟ್‌ನ ಒಂದು ಬಕೆಟ್ ನಾಣ್ಯಗಳನ್ನು ನೀಡಿದ್ದಾರೆ. ಡಬ್ಲಿನ್ ನಗರ ಕೇಂದ್ರದಲ್ಲಿರುವ ಆಲ್ಫೀಸ್ ರೆಸ್ಟೋರೆಂಟ್ ತಮ್ಮ ಉದ್ಯೋಗಿ ರಿಯಾನ್ ಕಿಯೋಗ್‌ಗೆ 355 ಯುರೋ (32,000 ರೂಪಾಯಿ) ಸಂಬಳವನ್ನು ಐದು ಸೆಂಟ್ ನಾಣ್ಯಗಳಲ್ಲಿ ಪಡೆದುಕೊಂಡಿದ್ದಾರೆ. ಆದರೆ, ಈ ಘಟನೆ 2021ರಲ್ಲಿ ನಡೆದಿದ್ದು, ಅದನ್ನು ಸ್ವತಃ ಉದ್ಯೋಗಿಯೇ ಈಗ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ತಮಗಾದ ಅನುಭವ ಬಿಚ್ಚಿಟ್ಟಿದ್ದಾರೆ.

ರಿಯಾನ್ ಕಿಯೋಗ್ ಸಾಮಾಜಿಕ ಮಾಧ್ಯಮದಲ್ಲಿ ನಾಣ್ಯಗಳಿಂದ ತುಂಬಿದ ಬಕೆಟ್‌ನ ಚಿತ್ರವನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ. 'ದಕ್ಷಿಣ ವಿಲಿಯಂ ಸ್ಟ್ರೀಟ್‌ನಲ್ಲಿರುವ ಆಲ್ಫೀಸ್‌ನಲ್ಲಿ ಕೆಲಸ ಮಾಡುವುದು ಹೇಗಿತ್ತು ಎಂದು ಯಾರಿಗಾದರೂ ತಿಳಿದುಕೊಳ್ಳಬೇಕಾದರೆ, ವಾರಗಟ್ಟಲೆ ನನ್ನ ಕೊನೆಯ ಸಂಬಳಕ್ಕಾಗಿ ಅಲೆದಾಡಿದ ನಂತರ ನನಗೆ ಸಂಬಳ ಸಿಕ್ಕಿತು, ಆದರೆ 5 ಸೆಂಟ್ ನಾಣ್ಯಗಳಿಂದ ತುಂಬಿದ ಬಕೆಟ್‌ನಲ್ಲಿ.' ಕೊನೆಯ ಸಂಬಳಕ್ಕಾಗಿ ವಾರಗಟ್ಟಲೆ ರೆಸ್ಟೋರೆಂಟ್‌ಗೆ ಅಲೆದಾಡಿದ ನಂತರ ಅವರಿಗೆ ಸಂಬಳ ಕೊಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಹೊಸ ದಾಖಲೆ: ಒಂದೇ ದಿನದಲ್ಲಿ 3 ಕೋಟಿ ಜನರ ಪ್ರಯಾಣ

ಆಲ್ಫೀ ರೆಸ್ಟೋರೆಂಟ್ ಮಾಲೀಕ ನಿಯಾಲ್ ಮ್ಯಾಕ್‌ಮೋಹನ್ ಅವರು ತನ್ನ ಉದ್ಯೋಗಿಗೆ ದಕ್ಷಿಣ ವಿಲಿಯಂ ಸ್ಟ್ರೀಟ್‌ಗೆ ಸಂಬಳ ಪಡೆಯಲು ಬರಲು ಹೇಳಿದ್ದಾರೆ. ಆಗ ರಿಯಾನ್‌ ತಮ್ಮ ಮಾಲೀಕ ಹೇಳಿದಲ್ಲಿಗೆ ಹೋದರು. ಆದರೆ, ಅವರು 5 ಸೆಂಟ್‌ನ ಸುಮಾರು 7,100 ನಾಣ್ಯಗಳಿಂದ ತುಂಬಿದ ದೊಡ್ಡ ಬಕೆಟ್‌ನಲ್ಲಿ ತನ್ನ ಸಂಬಳವನ್ನು ಕೊಡಲು ಮುಂದಾಗಿದ್ದಾರೆ. ನಾನು ಅದನ್ನು ನೋಡಿದಾಗ ದಂಗಾಗಿದ್ದಾಗಿ ಹೇಳಿದ್ದಾರೆ. 'ನಾನು ನಗಲು ಶುರುಮಾಡಿದೆ, ನನಗೆ ಮಾಡಲು ಸಾಧ್ಯವಾದದ್ದು ಅಷ್ಟೇ. ನಾನು ಒಂದು ಸಣ್ಣ ವಿಡಿಯೋ ತೆಗೆದು ನನ್ನ ಸ್ನೇಹಿತರಿಗೆ ಕಳುಹಿಸಿದೆ. ನಂತರ, ಬಾರ್ ಕೋಣೆಗೆ ಹೋದೆ. 'ನಾನು ಒಂದು ಪಾನೀಯ ಕುಡಿದು ಮನೆಗೆ ಹೋದೆ, ಎಂದು ಕಿಯೋಗ್ ದಿ ಜರ್ನಲ್‌ಗೆ ತಿಳಿಸಿದ್ದಾರೆ.

ಸಂಬಳ ಪಡೆದ ರಿಯಾಲ್ 15 ನಿಮಿಷಗಳ ದೂರದಲ್ಲಿರುವ ಮನೆಗೆ ತಲುಪಲು ಬಕೆಟ್ ಹೊತ್ತುಕೊಂಡು ಪ್ರಯಾಸದಿಂದ ನಡೆಯುತ್ತಾ 30 ನಿಮಿಷ ತಡವಾಗಿ ತಲುಪಿದರು. ಈ ಬಕೆಟ್ ಸುಮಾರು 30 ಕೆಜಿ ತೂಕ ಹೊಂದಿತ್ತು. ಆದರೆ, ನಾನು ನಾಣ್ಯಗಳನ್ನು ಎಣಿಸಲಿಲ್ಲ ಎಂದು ರಿಯಾನ್ ಹೇಳಿದ್ದಾರೆ. ನಾಣ್ಯಗಳನ್ನು ಎಣಿಸುವ ಬದಲಾಗಿ ಅದರ ತೂಕವನ್ನು ನೋಡಿದೆ. ಪ್ರತಿ 5 ಸೆಂಟ್ ನಾಣ್ಯವು 3.92 ಗ್ರಾಂ ತೂಗುತ್ತದೆ. 7,100 ನಾಣ್ಯಗಳು ಒಟ್ಟು 27.8 ಕಿಲೋಗ್ರಾಂ ತೂಗುತ್ತವೆ. ಆದ್ದರಿಂದ ನನ್ನ ಸಂಬಳ ಸರಿಯಾಗಿ ಕೊಟ್ಟಿದ್ದಾರೆ ಎಂದು ಲೆಕ್ಕ ಹಾಕಿಕೊಂಡು ಮನೆಗೆ ಹೋದೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios