ಗಾಳಿಯಿಂದ ನೀರು ಉತ್ಪಾದನೆ!| ಸಿಂಗಾಪುರ ಸಂಶೋಧಕರಿಂದ ಹೊಸ ಸಾಧನ ಸೃಷ್ಟಿ| ಆರೋಗ್ಯ ಸಂಸ್ಥೆ ಮಾನದಂಡಕ್ಕೆ ಅನುಗುಣವಾಗಿ ನೀರು

ಸಿಂಗಾಪುರ(ಜ.24): ಯಾವುದೇ ಬಾಹ್ಯ ಶಕ್ತಿಯನ್ನು ಬಳಸದೇ ಗಾಳಿಯಿಂದ ನೀರು ಉತ್ಪಾದಿಸಬಲ್ಲ ಭೌತಿಕ ಸಾಧನವೊವೊಂದನ್ನು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧಕರು ಸೃಷ್ಟಿಸಿದ್ದಾರೆ.

ಈ ಭೌತಿಕ ಸಾಧನದ ಹೆಸರು ‘ಅಲ್ಟಾ್ರ ಲೈಟ್‌ ಏರೋಜೆಲ್‌’. ಇದಕ್ಕೆ ಯಾವುದೇ ಬ್ಯಾಟರಿ ಬೇಡ. ಕೇವಲ ಸ್ಪಾಂಜ್‌ ರೀತಿ ಕೆಲಸ ಮಾಡುತ್ತದೆ. ಗಾಳಿಯಲ್ಲಿನ ನೀರಿನ ಅಂಶವನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ. ಹೀರಿಕೊಂಡ ನೀರನ್ನು ಪಡೆಯಲು ಅದನ್ನು ಹಿಂಡುವ ಅಗತ್ಯವೂ ಇಲ್ಲ. 1 ಕೇಜಿಯಷ್ಟುಏರೋಜೆಲ್‌, 17 ಲೀಟರ್‌ ನೀರನ್ನು ಉತ್ಪಾದಿಸುತ್ತದೆ.

ಕಾರ‍್ಯನಿರ್ವಹಣೆ ಹೇಗೆ?:

ಸ್ಪಾಂಜ್‌ ರೀತಿಯ ಏರೋಜೆಲ್‌ ಅನ್ನು ಪಾಲಿಮರ್‌ನಿಂದ ಸಿದ್ಧಪಡಿಸಲಾಗಿರುತ್ತದೆ. ಗಾಳಿಯಲ್ಲಿರುವ ಸಣ್ಣ ನೀರಿನ ಕಣಗಳನ್ನು ಹೀರಿಕೊಳ್ಳುವುದೇ ಈ ಪಾಲಿಮರ್‌ಗಳು. ಬಳಿಕ ಈ ಸಣ್ಣ ಕಣಗಳನ್ನು ನೀರಿನ ರೂಪಕ್ಕೆ ಪರಿವರ್ತಿಸುತ್ತರದೆ. ಬಳಿಕ ನೀರನ್ನು ಹೊರಹಾಕುತ್ತದೆ.

ಬಿಸಿಲು ಜಾಸ್ತಿ ಇದ್ದಾಗ ಏರೋಜೆಲ್‌ ಇನ್ನೂ ತ್ವರಿತವಾಗಿ ಕೆಲಸ ಮಾಡುತ್ತದೆ. ಶೇ.95ರಷ್ಟುನೀರಿನ ಆವಿಯನ್ನು ನೀರನ್ನಾಗಿ ಪರಿವರ್ತಿಸುತ್ತದೆ. ಇದರಿಂದ ಉತ್ಪಾದನೆಯಾದ ನೀರು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಾನದಂಡಕ್ಕೆ ಅನುಗುಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

‘ವಿವಿಧ ಬಗೆಯ ವಾತಾವರಣದಲ್ಲಿ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಕುಡಿಯಲು ಯೋಗ್ಯವಾದ ನೀರನ್ನು ಉತ್ಪಾದಿಸಿ ನೀರಿನ ಸಮಸ್ಯೆಯನ್ನು ನಿವಾರಿಸುವ ಭರವಸೆಯನ್ನು ಇದು ನೀಡಿದೆ’ ಎಂದು ವಿವಿಯ ಪ್ರಾಧ್ಯಾಪಕ ಹೊ ಘಿಮ್‌ ವೈ ತಿಳಿಸಿದ್ದಾರೆ.