ಅಂಗೋಲಾದಲ್ಲಿ ಅಪರೂಪದ ಪ್ಯೂರ್ ಪಿಂಕ್ ಬಣ್ಣದ ವಜ್ರವೊಂದು ಸಿಕ್ಕಿದೆ. ಈ ಬೆಲೆಬಾಳುವ ವಜ್ರ 300 ವರ್ಷಗಳಲ್ಲೇ ದೊರೆತ ಅತಿದೊಡ್ಡ ವಜ್ರ ಎಂದು ನಂಬಲಾಗಿದ್ದು, ಇದು 170 ಕ್ಯಾರಟ್ ತೂಗುತ್ತದೆ.
ಆಭರಣವೆಂದರೆ ಮೂಗು ಮುರಿಯುವ ಮಹಿಳೆಯರ ಸಂಖ್ಯೆ ಬಹಳ ಅಪರೂಪವೇ ಸರಿ. ಬೆಳ್ಳಿ, ಚಿನ್ನ, ವಜ್ರ - ಹೀಗೆ ನಾನಾ ರೀತಿಯ ಲೋಹಗಳ ಆಭರಣಗಳನ್ನು ಕಂಡರೆ ಸಾಕು ಮಹಿಳೆಯರ ಮೊಗ ಅರಳುತ್ತದೆ. ಈಗ್ಯಾಕಪ್ಪಾ ಈ ಲೋಹಗಳ ವಿಚಾರ ಅಂದರೆ ಅಪರೂಪದ ಹೆಚ್ಚು ಬೆಲೆ ಬಾಳುವ ಪಿಂಕ್ ಡೈಮೆಂಡ್ (Pink Diamond) ಅನ್ನು ಭೂಮಿಯಿಂದ ಹೊರತೆಗೆಯಲಾಗಿದೆ ನೋಡಿ. ಬನ್ನಿ, ಈ ಅಪರೂಪದ ವಜ್ರದ ಬಗ್ಗೆ ತಿಳಿದುಕೊಳ್ಳೋಣ..
ಅಂಗೋಲಾದಲ್ಲಿ ವಜ್ರದ ಗಣಿಗಾರಿಕೆ (Miners) ಮಾಡುತ್ತಿದ್ದವರಿಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಅಪರೂಪದ ಪ್ಯೂರ್ ಪಿಂಕ್ ಬಣ್ಣದ ವಜ್ರವೊಂದು (Rare Pure Pink Diamond) ಅವರಿಗೆ ಸಿಕ್ಕಿದೆ. ಈ ಬೆಲೆಬಾಳುವ ವಜ್ರ 300 ವರ್ಷಗಳಲ್ಲೇ ದೊರೆತ ಅತಿದೊಡ್ಡ ವಜ್ರ ಎಂದು ನಂಬಲಾಗಿದೆ. ಅಂಗೋಲಾದ ಆ ಜಾಗದ ಉಸ್ತುವಾರಿ ಹೊತ್ತಿರುವ ಆಸ್ಟ್ರೇಲಿಯಾದ ಆಪರೇಟರ್ ಈ ಬಗ್ಗೆ ಬುಧವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Gold and Silver Price: ಆಭರಣ ಪ್ರಿಯರಿಗೆ ಸಂತಸದ ಸುದ್ದಿ: ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ
170 ಕ್ಯಾರಟ್ ತೂಕದ ಪಿಂಕ್ ವಜ್ರವನ್ನು ದಿ ಲುಲೋ ರೋಸ್ (The Lulo Rose) ಎಂದು ಕರೆಯಲಾಗಿದ್ದು, ಇದು ಅಂಗೋಲಾದ ಲುಲೋ ಮೈನ್ಸ್‌ನಲ್ಲಿ ದೊರೆತಿದ್ದು, ಈ ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚು ವಜ್ರ ದೊರೆಯುತ್ತದೆ ಎಂದು ತಿಳಿದುಬಂದಿದೆ. ಹಾಗೂ, ಈವರೆಗೆ ದೊರೆತ ಅತಿದೊಡ್ಡ ಪಿಂಕ್ ಬಣ್ಣದ ವಜ್ರಗಳ ಪಟ್ಟಿಯಲ್ಲಿ ಇದು ಸಹ ಸ್ಥಾನ ಪಡೆಯುತ್ತದೆ ಎಂದು ಲ್ಯೂಕಾಪಾ ವಜ್ರದ ಕಂಪನಿ ಹೂಡಿಕೆದಾರರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಈ ವಜ್ರ ದೊರೆತಿರುವುದನ್ನು ಅಂಗೋಲಾ ಸರ್ಕಾರ ಸಹ ಸ್ವಾಗತಿಸಿದ್ದು, ಈ ಗಣಿಗಾರಿಕೆಯಲ್ಲಿ ಅಲ್ಲಿನ ಸರ್ಕಾರ ಸಹ ಪಾಲುದಾರರು ಎಂದು ತಿಳಿದುಬಂದಿದೆ. ಟೈಪ್ IIa ಎಂಬ ಈ ವಜ್ರ ನೈಸರ್ಗಿಕ ಕಲ್ಲುಗಳಲ್ಲಿ ದೊರೆಯುವ ಅಪರೂಪದ ಹಾಗೂ ಅತಿ ಶುದ್ಧವಾದ ವಜ್ರ ಎಂದು ತಿಳಿದುಬಂದಿದೆ.
ಲುಲೋದಲ್ಲಿ ದೊರೆತ ಈ ದಾಖಲೆಯ ಹಾಗೂ ಅದ್ಭುತವಾದ ವಜ್ರ ವಿಶ್ವ ವೇದಿಕೆಯಲ್ಲಿ ಅಂಗೋಲಾವನ್ನು ಪ್ರಮುಖ ಆಟಗಾರನಾಗಿ ಪ್ರದರ್ಶಿಸುವುದನ್ನು ಮುಂದುವರೆಸಿದೆ ಎಂದು ಅಂಗೋಲಾದ ಖನಿಜ ಸಂಪನ್ಮೂಲ ಸಚಿವರಾದ ಡಯಾಮ್ಯಾಂಟಿನೋ ಅಜ್ವೆಡೋ ಹೇಳಿದ್ದಾರೆ. ಅಲ್ಲದೆ, ಈ ವಜ್ರವನ್ನು ಅಂತಾರಾಷ್ಟ್ರೀಯ ಟೆಂಡರ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಎಂದೂ ತಿಳಿದುಬಂದಿದೆ. ಅಲ್ಲದೆ, ಈ ಅಪರೂಪದ ಬೆರಗುಗೊಳಿಸುವ ಪಿಂಕ್ ಬಣ್ಣದ ವಜ್ರಕ್ಕೆ ಬೆರಗುಗೊಳಿಸುವ ಬೆಲೆಯೇ ಸಿಗಲಿದೆ ಎಂದೂ ಹೇಳಲಾಗಿದೆ. ಆದರೆ, ಸದ್ಯದ ಮಟ್ಟಿಗೆ ಈ ವಜ್ರಕ್ಕೆ ಎಷ್ಟು ಬೆಲೆ ಸಿಗಲಿದೆ ಎಂಬುದನ್ನು ಈಗಲೇ ಊಹಿಸಲಾಗಲ್ಲ.
ಇನ್ನು, ದಿ ಲುಲೋ ರೋಸ್‌ನ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ಆ ಡೈಮೆಂಡ್ ಅನ್ನು ಕತ್ತರಿಸಿ ಪಾಲಿಶ್ ಮಾಡಬೇಕಾಗಿದ್ದೆ. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ಬೆಲೆಬಾಳುವ ಸ್ಟೋನ್ ತನ್ನ ತೂಕದ 50 ಪ್ರತಿಶತವನ್ನು ಕಳೆದುಕೊಳ್ಳುತ್ತದೆ ಎಂದು ಹೇಳಳಾಗಿದೆ. ಆದರೂ, ಇದೇ ರೀತಿಯ ಗುಲಾಬಿ ಅಥವಾ ಪಿಂಕ್ ವಜ್ರಗಳು ದಾಖಲೆಯ ಬೆಲೆಗೆ ಮಾರಾಟವಾಗಿವೆ ಎಂಬುದು ಪ್ರಮುಖಾಂಶವಾಗಿದೆ.
ಅಬ್ಬಬ್ಬಾ.. ಇದು 24,679 ವಜ್ರ ಅಳವಡಿಸಿದ ಉಂಗುರ, ಗಿನ್ನಿಸ್ ದಾಖಲೆಗೆ ಸೇರ್ಪಡೆ
ಹಾಂಗ್‌ಕಾಂಗ್‌ನಲ್ಲಿ 2017ರಂದು ನಡೆದಿದ್ದ ಹರಾಜಿನಲ್ಲಿ 59.6 ಕ್ಯಾರಟ್ ಪಿಂಕ್ ಸ್ಟಾರ್ ಅನ್ನು 71. 2 ಮಿಲಿಯನ್ ಅಮೆರಿಕ ಡಾಲರ್‌ಗೆ ಮಾರಾಟ ಮಾಡಲಾಗಿತ್ತು. ಇದು ಈವರೆಗೆ ಮಾರಾಟವಾದ ಅತ್ಯಮೂಲ್ಯ ವಜ್ರ ಎಂದು ಹೇಳಲಾಗಿದೆ. ಆದರೆ ಈಗ ದೊರೆತಿರುವ ಪಿಂಕ್ ವಜ್ರ 170 ಕ್ಯಾರಟ್ ತೂಕದ್ದು ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಇದು ಅದಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಇಂತಹ ಅಪರೂಪದ , ಆಕರ್ಷಕವಾದ ಪಿಂಕ್ ವಜ್ರ ದೊರೆತಿದ್ದು ಮಾತ್ರ ವಿಸ್ಮಯದ ವಿಷಯವೇ ಸರಿ.
