* ನೈಜೀರಿಯಾದಿಂದ ಮರಳಿದ ವ್ಯಕ್ತಿಯಲ್ಲಿ ಸೋಂಕು* ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ* ಬ್ರಿಟನ್‌ನಲ್ಲಿ ಮಂಕಿಪಾಕ್ಸ್‌ ಕೇಸು ಪತ್ತೆ

ಲಂಡನ್‌(ಮೇ.09): ಕೊರೋನಾ ಹಾವಳಿ ನಡುವೇಯೇ ನೈಜೀರಿಯಾದಿಂದ ಇತ್ತೀಚೆಗೆ ಬ್ರಿಟನ್‌ಗೆ ಮರಳಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ವೈರಸ್‌ ಸೋಂಕು ಪತ್ತೆಯಾಗಿದೆ.

ಮಂಕಿಪಾಕ್ಸ್‌ ಎಂಬುದು ಅಪರೂಪದ ವೈರಲ್‌ ಸೋಂಕಾಗಿದ್ದು, ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೌಮ್ಯ ಲಕ್ಷಣಗಳಿದ್ದ ರೋಗಿಗಳು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಇದು ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆದರೆ ಇದು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸೋಂಕು ಸಾರ್ವಜನಿಕರಿಗೆ ಹರಡುವ ಸಾಧ್ಯತೆ ಸಾಧ್ಯತೆ ಅತ್ಯಂತ ಕಡಿಮೆಯಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಜ್ವರ, ತಲೆನೋವು, ಸ್ನಾಯು ಸೆಳೆತ, ಬೆನ್ನುನೋವು, ನಡುಕ, ಬಳಲಿಕೆ ಮೊದಲಾದವು ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಕಣ್ಣು, ಮೂಗು, ಬಾಯಿಯ ಮೂಲಕ ವೈರಾಣು ರೋಗಿಯ ನಿಕಟ ಸಂಪರ್ಕದಲ್ಲಿರುವವರಿಗೆ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಯೊಂದಿಗೆ ಸಂಪರ್ಕದಲ್ಲಿರುವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ಈ ಮೊದಲು 2018ರಲ್ಲಿ ಮೊಟ್ಟಮೊದಲ ಬಾರಿ ಬ್ರಿಟನ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ವರದಿಯಾಗಿತ್ತು.