ಕ್ವಾಡ್ ಒಗ್ಗಟ್ಟು: ಚೀನಾಗೆ ಎಚ್ಚರಿಕೆಯ ಸಂದೇಶ!
* ಇಂಡೋ ಪೆಸಿಫಿಕ್ ವಲಯವನ್ನು ಸ್ವತಂತ್ರ, ಮುಕ್ತವಾಗಿಡಲು ಬದ್ಧತೆ
* ಈ ವಲಯದಲ್ಲಿ ಆರ್ಥಿಕ, ಪ್ರಜಾಸತ್ತಾತ್ಮಕ, ಸೇನಾ ಪ್ರಭಾವಕ್ಕೆ ಯತ್ನಿಸುತ್ತಿರುವ ಚೀನಾ
ವಾಷಿಂಗ್ಟನ್(ಸೆ.26): ಚೀನಾ(China) ತನ್ನ ಹಕ್ಕು ಸಾಧಿಸಲು ಯತ್ನಿಸುತ್ತಿರುವ ಇಂಡೋ-ಪೆಸಿಫಿಕ್(Indo-Pacific) ವಲಯನ್ನು ಸ್ವತಂತ್ರ ಮತ್ತು ಮುಕ್ತವಾಗಿರಿಸಲು ಎಲ್ಲಾ ರೀತಿಯ ಯತ್ನ ನಡೆಸಲು ಭಾರತ ಸೇರಿದಂತೆ ನಾಲ್ಕು ದೇಶಗಳ ಒಕ್ಕೂಟವಾಗಿರುವ ‘ಕ್ವಾಡ್’(Quad) ತನ್ನ ಬದ್ಧತೆ ವ್ಯಕ್ತಪಡಿಸಿದೆ. ಈ ಮೂಲಕ ಚೀನಾ ವಿರುದ್ಧ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿವೆ.
ಇಂಡೋ ಪೆಸಿಫಿಕ್(Indo pacific) ಸಮುದ್ರ ವಲಯ ಹಾಗೂ ಹೊಂದಿಕೊಂಡ ದೇಶಗಳಲ್ಲಿ ಚೀನಾ ಪ್ರಜಾಸತ್ತಾ್ತತ್ಮಕವಾಗಿ, ಆರ್ಥಿಕವಾಗಿ ಹಾಗೂ ಸೇನೆಯ ರೂಪದಲ್ಲಿ ತನ್ನ ಬಲ ವರ್ಧಿಸಿಕೊಳ್ಳಲು ಹೊರಟಿದೆ. ಹೀಗಿರುವಾಗ ಚೀನಾ(China) ಹಿಡಿತದಿಂದ ಇಂಡೋ-ಪೆಸಿಫಿಕ್ ವಲಯವನ್ನು ಮುಕ್ತ ಮಾಡಲು ಕ್ವಾಡ್ ಪಣತೊಟ್ಟಿರುವುದು ಗಮನಾರ್ಹವಾಗಿದೆ.
ಇದೇ ಮೊದಲ ಬಾರಿಗೆ ಕ್ವಾಡ್ ದೇಶಗಳ ನಾಯಕರಾದ ಪ್ರಧಾನಿ ನರೇಂದ್ರ ಮೋದಿ(Narendra Modi), ಅಮೆರಿಕ ಅಧ್ಯಕ್ಷ ಜೋ ಬೈಡೆನ್(Joe Biden), ಆಸ್ಪ್ರೇಲಿಯಾ(Australia) ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್(Japan) ಪ್ರಧಾನಿ ಯಶೋಹಿದೆ ಸುಗಾ ಅವರು ವಾಷಿಂಗ್ಟನ್ನಲ್ಲಿ ಭೌತಿಕ ಶೃಂಗ ಸಭೆ ನಡೆಸಿದರು. ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಿದ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಚೀನಾ ವಿರುದ್ಧ ಕ್ವಾಡ್ ಒಗ್ಗಟ್ಟು:
‘ಕ್ವಾಡ್(Quad) ಸಮ್ಮೇಳನದ ಈ ಸಂದರ್ಭವು ಇಂಡೋ- ಪೆಸಿಫಿಕ್ ವಲಯ ಮತ್ತು ನಾವು ಏನು ಕನಸು ಕಂಡಿದ್ದೇವೋ ಆ ಬಗ್ಗೆ ಪುನಃ ದೃಷ್ಟಿಯನ್ನು ಕೇಂದ್ರೀಕರಿಸಲು ಒಂದು ಅವಕಾಶವಾಗಿದೆ. ನಾವೆಲ್ಲಾ ಒಂದಾಗಿ, ಇಂಡೋ-ಪೆಸಿಫಿಕ್ ವಲಯವನ್ನು ಮುಕ್ತ, ಸ್ವತಂತ್ರ, ಕಾನೂನು ಆಧರಿತ ನಿಯಮ, ಅಂತಾರಾಷ್ಟ್ರೀಯ ಕಾನೂನು ಪಾಲನೆಯ ಮೂಲಕ ಅಲ್ಲಿಯ ಭದ್ರತೆ ಮತ್ತು ಅಭ್ಯುದಯದ ಬಗ್ಗೆ ಬದ್ಧತೆ ವ್ಯಕ್ತಪಡಿಸುತ್ತಿದ್ದೇವೆ. ನೆಲದ ಕಾನೂನು, ಸಂಚಾರದ ಸ್ವಾತಂತ್ರ್ಯ, ವಿವಾದಗಳಿಗೆ ಶಾಂತಿಯುತ ಪರಿಹಾರ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ದೇಶಗಳ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ನಾವೆಲ್ಲಾ ಒಂದಾಗಿ ಹೋರಾಡುವ ಒಮ್ಮತಕ್ಕೆ ಬಂದಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಹಾಗಂತ ಕ್ವಾಡ್ ಎಂಬುದು ಸೇನಾ ಮೈತ್ರಿಕೂಟವೇನಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.
ಕೊರಿಯಾ ಬಿಕ್ಕಟ್ಟು:
ಕ್ಷಿಪಣಿ ಪರೀಕ್ಷೆಯ ಮೂಲಕ ಪರಸ್ಪರ ಯುದ್ಧ ಭೀತಿ ಎದುರಿಸುತ್ತಿರುವ ಉತ್ತರ ಮತ್ತು ದಕ್ಷಿಣಾ ಕೊರಿಯಾ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಸಭೆ ಸಲಹೆ ನೀಡಿದೆ.
ಮ್ಯಾನ್ಮಾರ್ ಹಿಂಸಾಚಾರ:
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳ್ಳಲು ಕ್ರಮ ಕೈಗೊಳ್ಳಬೇಕು. ಬಂಧಿತ ರಾಜಕೀಯ ನಾಯಕರ ಬಿಡುಗಡೆ ಮಾಡಬೇಕು. ರಚನಾತ್ಮಕ ಮಾತುಕತೆಗೆ ಮುಂದಾಗಬೇಕು ಎಂದು ಸಭೆ ಕರೆ ಕೊಟ್ಟಿದೆ.
120 ಕೋಟಿ ಡೋಸ್ ಲಸಿಕೆ:
ಕೋವ್ಯಾಕ್ಸ್ ಯೋಜನೆ ಹೊರತುಪಡಿಸಿ ವಿಶ್ವದ ವಿವಿಧ ದೇಶಗಳಿಗೆ 120 ಕೋಟಿ ಡೋಸ್‌ನಷ್ಟುಕೋವಿಡ್ ಲಸಿಕೆಯನ್ನು ಉಚಿತವಾಗಿ ವಿತರಿಸುವ ಮಹತ್ವದ ನಿರ್ಧಾರವನ್ನು ಕ್ವಾಡ್ ದೇಶಗಳು ತೆಗೆದುಕೊಂಡಿವೆ. ಇನ್ನು ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶೀಘ್ರವೇ ಭಾರತ ಲಸಿಕೆ ರಫ್ತು ಆರಂಭಿಸಲಿದೆ ಎಂದು ಭರವಸೆ ನೀಡಿದರು.
ಕ್ವಾಡ್ ಫೆಲೋಶಿಪ್:
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯದಲ್ಲಿ ಉನ್ನತ ಪದವಿ ಪಡೆಯಲು ಅವಕಾಶ ಕಲ್ಪಿಸುವ ಕ್ವಾಡ್ ಫೆಲೋಶಿಪ್ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಕಟಿಸಿದರು. ಈ ಯೋಜನೆಯಡಿ ಪ್ರತಿ ಸದಸ್ಯ ದೇಶದ ತಲಾ 25 ವಿದ್ಯಾರ್ಥಿಗಳಿಗೆ ಫೆಲೋಶಿಪ್ ಸಿಗಲಿದೆ.
ಹವಾಮಾನ:
ಪ್ಯಾರಿಸ್ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಪಾಲಿಸುವ ಮೂಲಕ ಜಾಗತಿಕ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ತಮ್ಮ ಕೊಡುಗೆ ನೀಡಲೂ ಕ್ವಾಡ್ ದೇಶಗಳು ಒಪ್ಪಿವೆ. ಅಲ್ಲದೆ 2050ರೊಳಗೆ ಶೂನ್ಯ ಇಂಗಾಲ ಬಿಡುಗಡೆಯ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ನಿರ್ಧಾರವನ್ನೂ ಕೈಗೊಂಡಿವೆ.