ಧ್ವಂಸಗೊಂಡ ಹಿಂದೂ ದೇಗುಲ ಸರ್ಕಾರಿ ವೆಚ್ಚದಲ್ಲಿ ನಿರ್ಮಾಣ: ಪಾಕ್ ಭರವಸೆ
: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ 100 ವರ್ಷ ಇತಿಹಾಸದ ಹಿಂದು ದೇವಾಲಯ ಧ್ವಂಸ| ಧ್ವಂಸಗೊಂಡ ದೇಗುಲ ಸರ್ಕಾರಿ ವೆಚ್ಚದಲ್ಲಿ ನಿರ್ಮಾಣ: ಪಾಕ್ ಭರವಸೆ
ನವದೆಹಲಿ(ಜ.02): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ 100 ವರ್ಷ ಇತಿಹಾಸದ ಹಿಂದು ದೇವಾಲಯದ ಧ್ವಂಸ ಮತ್ತು ಬೆಂಕಿ ಇಟ್ಟಿರುವ ಪ್ರಕರಣ ಸಂಬಂಧ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜತಾಂತ್ರಿಕ ಹಾದಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪ್ರತಿಭಟನೆ ದಾಖಲಿಸಿದೆ. ಮಾನವ ಹಕ್ಕುಗಳ ಹೋರಾಟಗಾರರೂ ಘಟನೆಯನ್ನು ಖಂಡಿಸಿದ್ದಾರೆ.
ಹಿಂದು ದೇಗುಲಕ್ಕೆ ಪಾಕಿಸ್ತಾನದಲ್ಲಿ ಬೆಂಕಿ: 30 ದುರುಳರು ಅರೆಸ್ಟ್
ಏತನ್ಮಧ್ಯೆ, ಧ್ವಂಸವಾಗಿರುವ ದೇವಾಲಯವನ್ನು ಸರ್ಕಾರದ ವೆಚ್ಚದಲ್ಲೇ ನಿರ್ಮಿಸಿಕೊಡಲಾಗುತ್ತದೆ ಎಂದು ಪಾಕಿಸ್ತಾನದ ಪ್ರಾಂತೀಯ ಸರ್ಕಾರ ಭರವಸೆ ನೀಡಿದೆ. ಈ ಸಂಬಂಧ ಹೇಳಿಕೆ ನೀಡಿದ ವಾರ್ತಾ ಇಲಾಖೆ, ಉದ್ರಿಕ್ತರ ದಾಳಿಯಿಂದ ದೇವಸ್ಥಾನಕ್ಕೆ ಆಗಿರುವ ಹಾನಿಯನ್ನು ವಿಷಾದಿಸುತ್ತೇವೆ. ದೇವಸ್ಥಾನ ಮತ್ತು ಪಕ್ಕದ ಮನೆಯ ಮರು ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರೇ ಆದೇಶಿಸಿದ್ದಾರೆ.
ಅಲ್ಲದೆ ಹಿಂದೂ ಸಮುದಾಯದ ನೆರವಿನೊಂದಿಗೆ ಶೀಘ್ರವೇ ದೇಗುಲ ನಿರ್ಮಿಸಲಾಗುತ್ತದೆ. ಜೊತೆಗೆ ಮುಂದೆ ಇಂಥ ಘಟನೆ ಮರುಕಳಿಸದಂತೆ ದೇವಸ್ಥಾನಕ್ಕೆ ಭದ್ರತೆ ಕಲ್ಪಿಸಲಾಗುತ್ತದೆ ಎಂದಿದೆ.