ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಸರ್ಕಾರ ರಚಿಸುವುದಕ್ಕೆ ರಹಸ್ಯವಾಗಿ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಬಣ್ಣ ಬಯಲು ಸ್ವತಃ ಆಫ್ಘನ್ನರೇ ಈಗ ಪಾಕಿಸ್ತಾನದ ವಿರುದ್ಧ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ

ಪೇಶಾವರ/ಕಾಬೂಲ್‌ (ಸೆ.08): ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಸರ್ಕಾರ ರಚಿಸುವುದಕ್ಕೆ ರಹಸ್ಯವಾಗಿ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಬಣ್ಣ ಬಯಲಾಗಿದ್ದು, ಸ್ವತಃ ಆಫ್ಘನ್ನರೇ ಈಗ ಪಾಕಿಸ್ತಾನದ ವಿರುದ್ಧ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಮಂಗಳವಾರ ಕಾಬೂಲ್‌ನಲ್ಲಿರುವ ಪಾಕಿಸ್ತಾನದ ದೂತಾವಾಸ ಕಚೇರಿ ಎದುರು ಮಹಿಳೆಯರು ಸೇರಿದಂತೆ ನೂರಾರು ಜನರು, ‘ಪಾಕಿಸ್ತಾನ ಸಾಯಲಿ’, ‘ಸ್ವಾತಂತ್ರ್ಯ ಬೇಕು’, ‘ಅಲ್ಲಾ ಹು ಅಕ್ಬರ್‌’ ಮುಂತಾದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.

ಇದು ಅಷ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿ ಉಗ್ರರ ಪರವಾಗಿ ಮಾತನಾಡುತ್ತಿರುವ ಭಾರತೀಯರಿಗೆ ನೆರೆಯ ದೇಶದಿಂದ ರವಾನೆಯಾದ ಸೂಕ್ತ ಸಂದೇಶ ಎಂದೇ ಹೇಳಲಾಗಿದೆ. ಈ ನಡುವೆ ರಾಯಭಾರ ಕಚೇರಿ ಎದುರು ನಡೆದ ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ತಾಲಿಬಾನಿ ಉಗ್ರರು ಗಾಳಿಯಲ್ಲಿ ಗುಂಡುಹಾರಿಸಿ ಬೆದರಿಸುವ ಯತ್ನ ಮಾಡಿದ್ದಾರೆ. ಅಲ್ಲದೆ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ ಹಲವು ಪತ್ರಕರ್ತರು ಮತ್ತು ಛಾಯಾಗ್ರಾಹಕರನ್ನು ಬಂಧಿಸಿರುವ ಉಗ್ರರು, ಹಲವು ಗಂಟೆಗಳ ಕಾಲ ಹಿಂಸೆ ನೀಡಿ ಬಳಿಕ ಬಿಡುಗಡೆ ಮಾಡಿದ್ದಾರೆ.

ತಾಲಿಬಾನಿ ಆಫ್ಘನ್‌ನಿಂದ ಭಾರತಕ್ಕೆ ಉಗ್ರ ಅಪಾಯ!

ಪ್ರತಿಭಟನೆ: ಪಂಜ್‌ಶೀರ್‌ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವುದಾಗಿ ತಾಲಿಬಾನ್‌ ಸೋಮವಾರ ಹೇಳಿತ್ತು. ಈ ವೇಳೆ ಪಾಕಿಸ್ತಾನದ ಯುದ್ಧ ವಿಮಾನಗಳು ಪಂಜ್‌ಶೀರ್‌ನಲ್ಲಿ ತಾಲಿಬಾನ್‌ಗಳ ಪರವಾಗಿ ಬಾಂಬ್‌ ದಾಳಿ ನಡೆಸಿವೆ, ಅದನ್ನು ಖಂಡಿಸಿ ಪಂಜ್‌ಶೀರ್‌ ಹೋರಾಟಗಾರರ ಮುಖ್ಯಸ್ಥ ಅಹ್ಮದ್‌ ಮಸೌದ್‌ ಅಷ್ಘಾನಿಸ್ತಾನವನ್ನು ಉಳಿಸಿಕೊಳ್ಳಲು ತಾಲಿಬಾನ್‌ ಹಾಗೂ ಪಾಕಿಸ್ತಾನದ ವಿರುದ್ಧ ಆಫ್ಘನ್ನರು ಸಿಡಿದೇಳಬೇಕು ಎಂದು ಕರೆ ನೀಡಿದ್ದ.

ಅದರ ಬೆನ್ನಲ್ಲೇ ಸೋಮವಾರ ರಾತ್ರಿ ಬ್ಲಾಖ್‌ ಹಾಗೂ ದೈಕುಂಡಿ ಪ್ರಾಂತ್ಯದ ರಾಜಧಾನಿಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮಂಗಳವಾರ ಕಾಬೂಲ್‌ನಲ್ಲಿರುವ ಪಾಕಿಸ್ತಾನದ ದೂತಾವಾಸ ಕಚೇರಿ ಎದುರು ‘ಪಾಕಿಸ್ತಾನ ಸಾಯಲಿ’, ‘ಸ್ವಾತಂತ್ರ್ಯ ಬೇಕು’, ‘ಅಲ್ಲಾ ಹು ಅಕ್ಬರ್‌’ ಮುಂತಾದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಈ ಕೂಡಲೇ ಪಾಕಿಸ್ತಾನೀಯರು ಅಷ್ಘಾನಿಸ್ತಾನ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ. ಇವರನ್ನು ಚದುರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಅದನ್ನೂ ಲೆಕ್ಕಿಸದೆ ಹೋರಾಟ ಮುಂದುವರೆದಿದೆ.