ನವದೆಹಲಿ(ಜೂ.03):: ಕಪ್ಪು ವರ್ಣೀಯನ ಸಾವಿನ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ಕೊರೋನಾ ಹಾವಳಿ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಾರತ- ಚೀನಾ ಗಡಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಕುರಿತಂತೆಯೂ ಉಭಯ ನಾಯಕರ ನಡುವೆ ಸಮಾಲೋಚನೆ ನಡೆದಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಜಿ-7 ಒಕ್ಕೂಟವನ್ನು ವಿಸ್ತರಿಸುವ ತಮ್ಮ ಬಯಕೆಯನ್ನು ಟ್ರಂಪ್‌ ಅವರು ಮೋದಿ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಅಮೆರಿಕದಲ್ಲಿ ನಡೆಯಲಿರುವ ಜಿ-7 ಶೃಂಗಕ್ಕೆ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಇದೇ ವೇಳೆ ಮೋದಿ ಅವರು ಅಮೆರಿಕದಲ್ಲಿನ ಹಿಂಸಾಚಾರ ಕುರಿತು ಪ್ರಸ್ತಾಪಿಸಿ, ಬಿಕ್ಕಟ್ಟು ಬೇಗ ಬರೆಯಲಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದೆ. ವಿಶ್ವ ಅರೋಗ್ಯ ಸಂಸ್ಥೆ ಸುಧಾರಣೆಯ ಅಗತ್ಯ, ಕೊರೋನಾ ಸ್ಥಿತಿಗತಿಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದ್ದಾರೆ.

ಚೀನಾ ವಿರೋಧ

ಜಿ7 ರಾಷ್ಟ್ರಗಳ ಒಕ್ಕೂಟ ವಿಸ್ತರಿಸಿ, ಅದಕ್ಕೆ ಭಾರತ ಇನ್ನಿತರೆ ದೇಶಗಳನ್ನು ಸೇರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಪ್ರಸ್ತಾಪಕ್ಕೆ ಚೀನಾ ಪರೋಕ್ಷವಾಗಿ ಕ್ಯಾತೆ ತೆಗೆದಿದೆ. ಟ್ರಂಪ್‌ರ ಈ ಹೇಳಿಕೆ ತನ್ನನ್ನು ಹಣಿಯುವ ಯತ್ನ ಎಂದು ಭಾವಿಸಿರುವ ಚೀನಾ, ಬೀಜಿಂಗ್‌ ಅನ್ನು ಸುತ್ತುವರೆಯುವ ಇಂಥ ಯಾವುದೇ ಯತ್ನಗಳು ವಿಫಲವಾಗಲಿದೆ. ಒಕ್ಕೂಟ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದೆ.