Asianet Suvarna News Asianet Suvarna News

Modi In Glasgow| ದ್ವೀಪ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೆರವು: ಮೋದಿ!

*  ಗ್ಲಾಸ್ಗೋ ಸಮ್ಮೇಳನದಲ್ಲಿ ‘ಐರಿಸ್‌’ ಯೋಜನೆಗೆ ಮೋದಿ ಚಾಲನೆ

* ದ್ವೀಪ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೆರವು: ಮೋದಿ

 

PM Modi launches Infrastructure for Resilient Island States for most vulnerable countries pod
Author
Bangalore, First Published Nov 3, 2021, 6:43 AM IST
  • Facebook
  • Twitter
  • Whatsapp

ಗ್ಲಾಸ್ಗೋ(ನ. 03): ಹವಾಮಾನ ಬದಲಾವಣೆಯ ಅಡ್ಡ ಪರಿಣಾಮಗಳಿಂದ ಪುಟ್ಟ ದ್ವೀಪ ದೇಶಗಳು ಎದುರಿಸುವ ಸಮಸ್ಯೆಯನ್ನು ನಿವಾರಿಸಲು ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಭಾರತದ ಯೋಜನೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಇಲ್ಲಿ ಚಾಲನೆ ನೀಡಿದರು.

ಗ್ಲಾಸ್ಗೋದಲ್ಲಿ (Glasgow) ನಡೆಯುತ್ತಿರುವ ಕಾಪ್‌26 ಸಮ್ಮೇಳನದ ವೇಳೆ ಬ್ರಿಟನ್‌ (Britain) ಪ್ರಧಾನಿ ಬೋರಿಸ್‌ ಜಾನ್ಸನ್‌ (Bosi Jhonson), ಆಸ್ಪ್ರೇಲಿಯಾ (Austroalia) ಪ್ರಧಾನಿ ಸ್ಕಾಟ್‌ ಮಾರಿಸನ್‌ (Scott Morrison) ಮತ್ತು ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯರ್‍ದರ್ಶಿ ಆ್ಯಂಟೋನಿಯಾ ಗ್ಯುಟೆರ್ರೆಸ್‌ (António Guterres) ಸಮ್ಮುಖದಲ್ಲಿ ಮೋದಿ ಅವರು ಐರಿಸ್‌ (Resilient Island States) ಹೆಸರಿನ ಯೋಜನೆಗೆ ಚಾಲನೆ ನೀಡಿದರು.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ ‘ಐರಿಸ್‌ ಯೋಜನೆ ಜಾರಿಯು ಹೊಸ ಭರವಸೆ ಮತ್ತು ಹೊಸ ವಿಶ್ವಾಸ ಮೂಡಿಸುತ್ತದೆ. ಜೊತೆಗೆ ಅತ್ಯಂತ ಅಪಾಯದ ಭೀತಿಯಲ್ಲಿರುವ ದೇಶಗಳಿಗೆ ಏನಾದರೂ ಮಾಡಿದ ತೃಪ್ತಿಯ ಭಾವನೆ ಮೂಡಿಸುತ್ತದೆ. ಮನುಕುಲಕ್ಕೆ ನಾವೆಲ್ಲರೂ ಹೊಂದಿರುವ ಸಾಮುದಾಯಿಕ ಹೊಣೆಗಾರಿಕೆ, ಜೊತೆಗೆ ಒಂದು ರೀತಿಯಲ್ಲಿ ನಮ್ಮ ತಪ್ಪಿಗೆ ಪ್ರಾಯಶ್ಚಿತ್ತದ ಅವಕಾಶ ಎಂದು ಬಣ್ಣಿಸಿದರು.

ದ್ವೀಪ ದೇಶಗಳಿಗೆ ಇಸ್ರೋ ನೆರವು:

ಇದೇ ವೇಳೆ, ಪುಟ್ಟದ್ವೀಪ (Island) ದೇಶಗಳಿಗೆ ನೆರವಾಗಲೆಂದೇ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ (ISRO) ವಿಶೇಷ ವಿಭಾಗವೊಂದನ್ನು ತೆರೆದಿದ್ದು, ಅದರ ಮೂಲಕ ಈ ದೇಶಗಳಿಗೆ ಚಂಡಮಾರುತ, ಹಳವದ ದ್ವೀಪಗಳ ಮೇಲೆ ಕಣ್ಗಾವಲು, ಕರಾವಳಿ ಪ್ರದೇಶಗಳ ಮೇಲಿನ ನಿಗಾ ಮೊದಲಾದ ವಿಷಯಗಳ ಕುರಿತು ಉಪಗ್ರಹ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದರು.

ಮೋದಿ ಗ್ಲಾಸ್ಗೋ ಭಾಷಣಕ್ಕೆ ಭಾರೀ ಶ್ಲಾಘನೆ

2070ರ ವೇಳೆಗೆ ಭಾರತ ಇಂಗಾಲ ತಾಟಸ್ಥ್ಯದ ಗುರಿ ಮುಟ್ಟಲಿದೆ ಮತ್ತು 2030ರ ವೇಳೆಗೆ ಭಾರತ ತನ್ನ ಒಟ್ಟು ಇಂಧನ ಬೇಡಿಕೆಯಲ್ಲಿ ಶೇ.50ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದಲೇ ಪೂರೈಸಿಕೊಳ್ಳಲಿದೆ ಎಂಬ ಘೋಷಣೆಗಳುಳ್ಳ ಪ್ರಧಾನಿ ನರೇಂದ್ರ ಮೋದಿ ಅವರ ‘ಕಾಪ್‌ 26’ ಶೃಂಗದ ಭಾಷಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ‘2030ರ ವೇಳೆಗೆ ತನ್ನ ಇಂಧನ ಬೇಡಿಕೆಯಲ್ಲಿ ಶೇ.50ರಷ್ಟನ್ನು ನವೀಕರಿಸಬಹುದಾದ ಇಂಧನಗಳ ಮೂಲಕ ಈಡೇರಿಸಿಕೊಳ್ಳುವುದಾಗಿ ಇಂದು ಭಾರತ ತನ್ನ ಮಹತ್ವಾಕಾಂಕ್ಷೆಯ ಗುರಿಯನ್ನು ಮುಂದಿಟ್ಟಿದೆ. ಇದು 100 ಕೋಟಿ ಟನ್‌ಗಳಷ್ಟುಇಂಗಾಲ ಬಿಡುಗಡೆಯನ್ನು ಕಡಿತಗೊಳಿಸಲಿದೆ. ಈ ಮೂಲಕ ಹವಾಮಾನ ಬದಲಾವಣೆ ಅಡ್ಡ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಇಡೀ ವಿಶ್ವಕ್ಕೆ ಒಂದು ದಶಕದ ಮುನ್ನೋಟ ನೀಡಿದೆ’ ಎಂದು ಶ್ಲಾಘಿಸಿದ್ದಾರೆ.

ಇನ್ನು ಹವಾಮಾನ ಬದಲಾವಣೆ ಕಾರ್ಯಕರ್ತೆ ಸುನೀತಾ ನಾರಾಯಣ್‌ ಪ್ರತಿಕ್ರಿಯಿಸಿ ‘ಪಳೆಯುಳಿಕೆ ಇಂಧನ ಕಡಿತ, ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಳ, ಇಂಗಾಲ ಬಿಡುಗಡೆ ಪ್ರಮಾಣ ಕಡಿತ ವಿಷಯದಲ್ಲಿ ಭಾರತ ತನ್ನ ಮುಂದಿನ ಹಾದಿಯನ್ನು ಸ್ಪಷ್ಟವಾಗಿ ಇಡೀ ವಿಶ್ವದ ಮುಂದಿಟ್ಟಿದೆ. ಇದು ಒಇಸಿಡಿ ದೇಶಗಳು ಮತ್ತು ಚೀನಾ ಏನು ಮಾಡಿದೆಯೋ ಅದಕ್ಕಿಂತ ಹೆಚ್ಚಿನ ಸಾಧನೆ’ ಎಂದು ಬಣ್ಣಿಸಿದ್ದಾರೆ.

ಇನ್ನು ಇಂಧನ, ಪರಿಸರ ಮತ್ತು ಜಲ ಮಂಡಳಿ ಸಂಸ್ಥಾಪಕಿ ಅರುಣಾಭಾ ಘೋಷ್‌ ಮಾತನಾಡಿ ‘ದೇಶದ ಪರವಾಗಿ ಪ್ರಧಾನಿ ಮೋದಿ ದಿಟ್ಟಘೋಷಣೆ ಮಾಡಿದ್ದಾರೆ. ಈ ಮೂಲಕ ಇದೀಗ ಪರಿಸರ ಬದಲಾವಣೆ ಅಪಾಯ ತಗ್ಗಿಸುವ ಕ್ರಮಗಳ ಚೆಂಡನ್ನು ಅಭಿವೃದ್ಧಿ ದೇಶಗಳ ಅಂಗಳಕ್ಕೆ ಎಸೆದಿದ್ದಾರೆ. ಇದುವೇ ನಿಜವಾದ ಕಾರ್ಯಯೋಜನೆ. ಇದೀಗ ಭಾರತ ಶ್ರೀಮಂತ ದೇಶಗಳಿಂದ 1 ಲಕ್ಷ ಕೋಟಿ ಡಾಲರ್‌ಗಳಷ್ಟುಹವಾಮಾನ ಆರ್ಥಿಕ ನೆರವನ್ನು ಆದಷ್ಟುಬೇಗ ನೀಡುವಂತೆ ಬೇಡಿಕೆ ಇಡುತ್ತಿದೆ’ ಎಂದಿದ್ದಾರೆ.

Follow Us:
Download App:
  • android
  • ios