ಅಮೆರಿಕದಲ್ಲಿ ಮೋದಿ, ವಿಶ್ವಸಂಸ್ಥೆ ಉದ್ದೇಶಿಸಿ ಪ್ರಧಾನಿ ಭಾಷಣ!
* ಮೋದಿ ಅಮೆರಿಕ ಪ್ರವಾಸ ಆರಂಭ
* ಬೈಡೆನ್ ಭೇಟಿ, ಕ್ವಾಡ್ ಸಭೆಯಲ್ಲಿ ಭಾಗಿ
* ವಿಶ್ವಸಂಸ್ಥೆ ಉದ್ದೇಶಿಸಿ ಪ್ರಧಾನಿ ಭಾಷಣ
ನವದೆಹಲಿ(ಸೆ.23): ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು 5 ದಿನಗಳ ಪ್ರವಾಸಕ್ಕಾಗಿ ಬುಧವಾರ ಅಮೆರಿಕಕ್ಕೆ(USA) ಪ್ರಯಾಣ ಬೆಳೆಸಿದ್ದಾರೆ. 2 ವರ್ಷದ ಬಳಿಕ ಮೋದಿ ಅವರ ಮೊದಲ ಅಮೆರಿಕ ಪ್ರವಾಸ ಇದಾಗಿದೆ.
ತಮ್ಮ ಪ್ರವಾಸಕ್ಕೂ ಮುನ್ನ ಹೇಳಿಕೆಯನ್ನು ನೀಡಿರುವ ಮೋದಿ, ಭಾರತ- ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು, ಜಪಾನ್ ಮತ್ತು ಆಸ್ಪ್ರೇಲಿಯಾದೊಂದಿಗಿನ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸಲು ಇದೊಂದು ಉತ್ತಮ ಅವಕಾಶವಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೋವಿಡ್-19 ಸಾಂಕ್ರಾಮಿಕ(Covid 19), ಹವಾಮಾನ ಬದಲಾವಣೆ, ಭಯೋತ್ಪಾದನೆಯ ವಿರುದ್ಧದ ಹೋರಾಟ ಹಾಗೂ ಇನ್ನಿತರ ಜಾಗತಿಕ ಮಹತ್ವದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್(Joe Biden) ಅವರ ಆಹ್ವಾನದ ಮೇರೆಗೆ ಸೆ.22ರಿಂದ ಸೆ.25ರವರೆಗೆ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಭೇಟಿಯ ವೇಳೆ ಬೈಡೆನ್ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಾಗುವುದು. ಪರಸ್ಪರ ಹಿತಾಸಕ್ತಿಯ ಪ್ರದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತಂತೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರಕ್ಕಗಿ ಅವಕಾಶವನ್ನು ಅನ್ವೇಷಿಸಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗಿನ ಭೇಟಿಯನ್ನು ತಾವು ಎದುರು ನೋಡುತ್ತಿರುವುದಾಗಿಯೂ ಮೋದಿ ತಿಳಿಸಿದ್ದಾರೆ. ತಮ್ಮ ಪ್ರವಾಸದ ವೇಳೆ ಅಮೆರಿಕ, ಆಸ್ಪ್ರೇಲಿಯಾ, ಜಪಾನ್ ಅನ್ನು ಒಳಗೊಂಡ ಕ್ವಾಡ್ ಶೃಂಗ ಸಭೆಯಲ್ಲಿಯೂ ಮೋದಿ ಭಾಗಿಯಾಗಲಿದ್ದಾರೆ.
ಮೋದಿ ಕಾರ್ಯಕ್ರಮ
ಗುರುವಾರ ಸೆ.23
* ಕ್ವಾಲ್‌ಕಾಂ ಇನ್‌ಕಾರ್ಪೊರೇಟೆಡ್ ಅಧ್ಯಕ್ಷ ಸಿಇಒ ಕ್ರಿಸ್ಟಿಯಾನೋ ಅಮೊನ್ ಜತೆ ಸಭೆ
* ಅಡೋಬ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಿಇಒ ಶಂತನು ನಾರಾಯಣ್ ಅವರ ಜತೆ ಚರ್ಚೆ
* ಫಸ್ಟ್ ಸೋಲಾರ್ ಕಂಪನಿಯ ಸಿಇಒ ಮಾರ್ಕ್ ವಿಡ್‌ಮಾರ್ ಜತೆ ಮಾತುಕತೆ
* ಜನರಲ್ ಆಟೋಮಿಕ್ಸ್ ಸಿಇಒ ವಿವೇಕ್ ಲಾಲ್ ಜತೆ ಸಭೆ
* ಬ್ಲಾಕ್‌ಸ್ಟೋನ್ ಕಂಪನಿಯ ಸಿಇಒ ಸ್ಟೀಪೆಹನ್ ಎ ಶ್ವಾರ್ಜಮನ್ ಅವರೊಂದಿಗೆ ಚರ್ಚೆ
* ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆ ದ್ವಿಪಕ್ಷೀಯ ಮಾತುಕತೆ
ಶುಕ್ರವಾರ ಸೆ.24
* ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
* ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ಜತೆ ದ್ವಿಪಕ್ಷೀಯ ಬಾಂಧವ್ಯದ ಮಾತು
* ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ದ್ವಿಪಕ್ಷೀಯ ಸಭೆ
* ಅಮೆರಿಕ, ಜಪಾನ್, ಆಸ್ಪ್ರೇಲಿಯಾ ರಾಷ್ಟ್ರಗಳ ಜತೆಗಿನ ಕ್ವಾಡ್ ಸಭೆಯಲ್ಲಿ ಭಾಗಿ
ಶನಿವಾರ ಸೆ.25
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮೋದಿ ಭಾಷಣ
* ಅಮೆರಿಕ ಪ್ರವಾಸ ಅಂತ್ಯ. ಭಾರತದತ್ತ ಪ್ರಯಾಣ
ಭಾನುವಾರ ಸೆ.26
* ಬೆಳಗ್ಗೆ 11.30ಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಲಿರುವ ಮೋದಿ.