2ನೇ ಬಾರಿ ನ್ಯೂಜಿಲೆಂಡ್ ಪ್ರಧಾನಿಯಾದ ಜೆಸಿಂಡಾ ಆರ್ಡನ್‌ಗೆ ಮೋದಿ ಶುಭಾಶಯ!
ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಜೆಸಿಂಡಾ ಆರ್ಡನ್| ಪ್ರಧಾನಿ ಜೆಸಿಂಡಾ ಆರ್ಡನ್‌ಗೆ, ಶುಭ ಕೋರಿದ ಮೋದಿ| ಉಭಯ ದೇಶದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವ ಭರವಸೆ
ನವದೆಹಲಿ(ಅ.18): ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಭೂತಪೂರ್ವ ಜಯ ಸಾಧಿಸಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಜೆಸಿಂಡಾ ಆರ್ಡನ್‌ಗೆ, ಪಿಎಂ ಮೋದಿ ಶುಭ ಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಿಎಂ ಮೋದಿ ಅಭೂತಪೂರ್ವ ಜಯ ಸಾಧಿಸಿದ ನ್ಯೂಜಿಲೆಂಡ್ ಪ್ರಧಾನ ಮಂತ್ರಿ ಜೆಸಿಂಡಾ ಆರ್ಡನ್‌ಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನಮ್ಮ ಕೊನೆಯ ಭೇಟಿಯನ್ನು ಮೆಲುಕು ಹಾಕುತ್ತಾ, ಮುಂದೆಯೂ ಭಾರತ ಹಾಗೂ ನ್ಯೂಜಿಲೆಂಡ್ ಒಂದಾಗಿ ಕಾರ್ಯ ನಿರ್ವಹಿಸುತ್ತಾ, ಉಭಯ ದೇಶದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುವ ಭರವಸೆ ಇದೆ' ಎಂದಿದ್ದಾರೆ.
ಮೂರನೇ ಎರಡರಷ್ಟು ಮತಗಳ ಎಣಿಕೆಯೊಂದಿಗೆ ಜೆಸಿಂಡಾ ಅವರ ಲೇಬರ್ ಪಕ್ಷವು ಶೇ 49.2 ಮತಗಳನ್ನು ಪಡೆದಿದ್ದು, 120 ಸದಸ್ಯರ ಸಂಸತ್‌ನಲ್ಲಿ ಸುಮಾರು 64 ಸೀಟುಗಳನ್ನು ಪಡೆದುಕೊಂಡಿದೆ. 1996ರಲ್ಲಿ ಪ್ರಮಾಣಾನುಗುಣ ಮತದಾನದ ಪದ್ಧತಿಯನ್ನು ನ್ಯೂಜಿಲೆಂಡ್ ಅಳವಡಿಸಿಕೊಂಡಾಗಿನಿಂದ ಇದುವರೆಗೂ ಯಾವ ನಾಯಕರೂ ಸಂಪೂರ್ಣ ಬಹುಮತ ಪಡೆದಿರಲಿಲ್ಲ. ಇದರಿಂದಾಗಿ ಇದುವರೆಗೂ ಬಹು ಪಕ್ಷಗಳ ಸಮ್ಮಿಶ್ರ ಸರ್ಕಾರಗಳೇ ಆಡಳಿತ ನಡೆಸುತ್ತಿದ್ದವು.
ಶೇ 87ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದೆ. ಇದರಲ್ಲಿ ಜೆಸಿಂಡಾ ಅವರ ಪಕ್ಷ ಶೇ 49.2ರಷ್ಟು ಬೆಂಬಲ ಪಡೆದುಕೊಂಡಿದೆ. 1930ರಿಂದ ನ್ಯೂಜಿಲೆಂಡ್‌ನಲ್ಲಿ ಇದು ಅತ್ಯಧಿಕ ಮತ ಹಂಚಕೆಯಾಗಿದೆ. ವಿರೋಧ ಪಕ್ಷ ರಾಷ್ಟ್ರೀಯ ಪಾರ್ಟಿ ಶೇ 27 ಮತಗಳಿಗೆ ಕುಸಿದಿದೆ. 2002ರಿಂದ ಇದು ವಿರೋಧಪಕ್ಷಗಳ ಅತ್ಯಂತ ಕಳಪೆ ಸಾಧನೆಯಾಗಿದೆ.