ನ್ಯೂಯಾರ್ಕ್(ನ.19): ಕಳೆದ 8 ತಿಂಗಳಿನಿಂದ ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್‌ ಹೆಮ್ಮಾರಿಯನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ಕೊನೆಗೂ ಲಸಿಕೆಯೊಂದು ಅಂತಿಮ ಹಂತದ ಪರೀಕ್ಷೆಯಲ್ಲಿ ಗೆದ್ದಿದೆ. ಅಮೆರಿಕದ ಜಾಗತಿಕ ಔಷಧ ಕಂಪನಿ ಫೈಝರ್‌ ಹಾಗೂ ಅದರ ಪಾಲುದಾರ ಕಂಪನಿ ಜರ್ಮನಿಯ ಬಯೋಎನ್‌ಟೆಕ್‌ ಕಂಪನಿಗಳ ಕೊರೋನಾ ಲಸಿಕೆ ಮೂರನೇ ಹಾಗೂ ಕೊನೆಯ ಹಂತದ ಪರೀಕ್ಷೆಯನ್ನು ಮುಗಿಸಿದೆ. ಕೊರೋನಾಗೆ ಸುಲಭ ತುತ್ತು ಎಂದು ಎಣಿಸಲಾಗಿರುವ 65 ವರ್ಷ ಮೇಲ್ಪಟ್ಟಹಿರಿಯರೂ ಸೇರಿದಂತೆ ಎಲ್ಲ ವಯೋಮಾನ, ಜನಾಂಗದ ಜನರಲ್ಲೂ ಈ ಲಸಿಕೆ ಶೇ.95ರಷ್ಟುಪರಿಣಾಮಕಾರಿಯಾಗಿದೆ ಎಂದು ಆ ಕಂಪನಿಗಳು ಘೋಷಣೆ ಮಾಡಿಕೊಂಡಿವೆ.

'ಮೊದಲ ಹಂತದಲ್ಲಿ 94000 ಕೊರೋನಾ ಯೋಧರಿಗೆ ಲಸಿಕೆ'

ಅಂತಿಮ ಹಂತದ ಪ್ರಯೋಗ ಮುಕ್ತಾಯವಾಗಿರುವುದರಿಂದ ಅಮೆರಿಕದಲ್ಲಿ ತಮ್ಮ ‘ಬಿಎನ್‌ಟಿ162ಬಿ2’ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಈ ಕಂಪನಿಗಳು ಅರ್ಜಿ ಸಲ್ಲಿಸಲು ತುದಿಗಾಲಿನಲ್ಲಿ ನಿಂತಿವೆ. 2020ನೇ ಇಸ್ವಿ ಮುಕ್ತಾಯವಾಗುವುದರೊಳಗೆ 5 ಕೋಟಿ ಹಾಗೂ 2021ರಲ್ಲಿ ಒಟ್ಟು 130 ಕೋಟಿ ಲಸಿಕೆಯನ್ನು ಈ ಕಂಪನಿಗಳು ಉತ್ಪಾದಿಸುವ ನಿರೀಕ್ಷೆ ಇದೆ.

ಎಲ್ಲ ವಯೋಮಾನ, ಲಿಂಗ, ಜನಾಂಗಗಳ ಜನರ ಮೇಲೆ ಪರೀಕ್ಷಿಸಿದಾಗಲೂ ಲಸಿಕೆಯ ಕ್ಷಮತೆ ಸ್ಥಿರವಾಗಿದೆ. 65 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಶೇ.94ರಷ್ಟುಕ್ಷಮತೆ ಹೊಂದಿದೆ. ಈ ಲಸಿಕೆ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ರಾಜ್ಯದಲ್ಲಿ ಕೊರೋನಾ ಕೇಸ್‌ ಭಾರೀ ಇಳಿಕೆ! : 23 ಜಿಲ್ಲೆಗಳಲ್ಲಿ ಶೂನ್ಯ ಸಾವು

ಮೊಡೆರ್ನಾ ಕೂಡ ಶೇ.94.5 ಕ್ಷಮತೆ:

ನವೆಂಬರ್‌ ಮೊದಲ ವಾರದಲ್ಲಿ ಫೈಝರ್‌ ಕಂಪನಿ ತನ್ನ ಪ್ರಯೋಗದ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಿ ತನ್ನ ಲಸಿಕೆ ಶೇ.90ಕ್ಕಿಂತಲೂ ಅಧಿಕ ಪರಿಣಾಮಕಾರಿ ಎಂದು ಹೇಳಿತ್ತು. ಸೋಮವಾರವಷ್ಟೇ ಅಮೆರಿಕ ಮೂಲದ ಮೊಡೆರ್ನಾ ಕಂಪನಿಯೂ ಮಧ್ಯಂತರ ವರದಿ ಬಿಡುಗಡೆ ಮಾಡಿ ತನ್ನ ಲಸಿಕೆ ಶೇ.94.5ರಷ್ಟುಪರಿಣಾಮಕಾರಿ ಎಂದು ಹೇಳಿತ್ತು. ಇದೀಗ ಫೈಝರ್‌ ಅಂತಿಮ ವರದಿ ಬಿಡುಗಡೆ ಮಾಡಿದ್ದು, ಮೊಡೆರ್ನಾ ಹಾಗೂ ಆಕ್ಸ್‌ಫರ್ಡ್‌ ಲಸಿಕೆಗಳ ವರದಿಗಳೂ ಸದ್ಯದಲ್ಲೇ ಹೊರಬರುವ ನಿರೀಕ್ಷೆ ಇದೆ.

ಫೈಜರ್‌ ಕಂಪನಿ ಲಸಿಕೆಯ 3ನೇ ಹಂತದ ಕ್ಲಿನಿಕಲ್‌ ಪ್ರಯೋಗ ಜುಲೈನಲ್ಲಿ ಆರಂಭವಾಗಿತ್ತು. 43,661 ಮಂದಿ ಪರೀಕ್ಷೆಯಲ್ಲಿ ಭಾಗಿಯಾಗಲು ನೋಂದಣಿ ಮಾಡಿಸಿಕೊಂಡಿದ್ದರು. ಆ ಪೈಕಿ 41,135 ಮಂದಿ ಲಸಿಕೆಯ ಎರಡನೇ ಡೋಸ್‌ ಅನ್ನು ನ.13ರಂದು ಪಡೆದಿದ್ದರು.