ನ್ಯೂಯಾರ್ಕ್(ನ.10): ವಿಶ್ವದಾದ್ಯಂತ 5 ಕೋಟಿ ಜನರನ್ನು ಬಾಧಿಸಿ, 12 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲು ರೇಸ್‌ ಮುಂದುವರೆದಿದ್ದು, ಇದೀಗ ಅಮೆರಿಕ ಮೂಲದ ಫೈಝರ್‌ ಕಂಪನಿ ತನ್ನ ಲಸಿಕೆ ಶೇ.90ರಷ್ಟುಪರಿಣಾಮಕಾರಿ ಎಂದು ಹೇಳಿಕೊಂಡಿದೆ. ಜೊತೆಗೆ ಇದೇ ತಿಂಗಳಾಂತ್ಯಕ್ಕೆ ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಸುಳಿವನ್ನೂ ನೀಡಿದೆ.

ಫೈಝರ್‌ ಕಂಪನಿಯು ಜರ್ಮನ್‌ ಮೂಲದ ಬಯೋ ಎನ್‌ಟೆಕ್‌ ಜೊತೆಗೂಡಿ ‘ಬಿಎನ್‌ಟಿ 162ಬಿ2’ ಎಂಬ ಲಸಿಕೆ ಅಭಿವೃದ್ಧಿಪಡಿಸಿದ್ದು, ಅದನ್ನು ಅಮೆರಿಕ ಸೇರಿ 5 ದೇಶಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಹಾಲಿ ಮೂರನೇ ಹಂತದಲ್ಲಿ 44000 ಜನರು ಪ್ರಯೋಗಕ್ಕೆ ಒಳಪಟ್ಟಿದ್ದು, ಆ ಪೈಕಿ 94 ಜನರ ಆರೋಗ್ಯ ವರದಿಯನ್ನು ಸ್ವತಂತ್ರ ಸಂಸ್ಥೆಯೊಂದು ಅಧ್ಯಯನ ನಡೆಸಿದೆ. ಈ ವೇಳೆ ಲಸಿಕೆ ಶೇ.90ರಷ್ಟುಪರಿಣಾಮಕಾರಿ ಎಂದು ಕಂಡುಬಂದಿದೆ.

ಈ ಲಸಿಕೆ ಎರಡು ಡೋಸ್‌ನದ್ದಾಗಿದ್ದು, ಎರಡನೇ ಡೋಸ್‌ ನೀಡಿದ 7 ದಿನಗಳ ಬಳಿಕದ ಫಲಿತಾಂಶವನ್ನು ಇದೀಗ ಪ್ರಕಟಿಸಲಾಗಿದೆ. ಅಂದರೆ ಮೊದಲ ಡೋಸ್‌ ಪಡೆದ 28 ದಿನಗಳ ಬಳಿಕ ರೋಗಿಯ ದೇಹಕ್ಕೆ ರಕ್ಷಣೆ ಸಿಕ್ಕಿರುವುದು ಖಚಿತಪಟ್ಟಿದೆ ಎಂದು ಕಂಪನಿ ತಿಳಿಸಿದೆ.

ವಿಶ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಮೂರನೇ ಹಂತದ ಪರೀಕ್ಷೆಗೆ ಒಳಪಡುತ್ತಿರುವ 10 ಕಂಪನಿಗಳ ಪೈಕಿ ಫೈಝರ್‌ನ ಲಸಿಕೆ ಕೂಡ ಸೇರಿದೆ.