ಇಸ್ಲಮಾಬಾದ್[ನ.16]: ಭಾರತ ಹಾಗೂ ಪಾಕಿಸ್ತಾನ ಬದ್ಧ ವೈರಿಗಳು ಎಂಬ ವಿಚಾರ ಇಡೀ ವಿಶ್ವಕ್ಕೇ ತಿಳಿದಿದೆ. ಕಾಶ್ಮೀರ ವಿಚಾರವಾಗಿ ಉಭಯ ದೇಶಗಳ ನಡುವಿನ ಸಂಬಂಧ ಚೆನ್ನಾಗಿಲ್ಲ. ಭಯೋತ್ಪಾದನೆಯ ವಿಚಾರದಲ್ಲೂ ಎರಡೂ ದೇಶಗಳ ನಿಲುವು ಭಿನ್ನ. ಈ ಎಲ್ಲಾ ವೈಷಮ್ಯಗಳ ನಡುವೆಯೂ ಪಾಕಿಸ್ತಾನದ ಏರ್ ಟ್ರಾಫಿಕ್ ಕಂಟ್ರೋಲರ್ ಸುಮಾರು 150 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ವಿಮಾನವನ್ನು ಕಾಪಾಡಿ ಕರ್ತವ್ಯಕ್ಕೆ ಯಾವುದೇ ಗಡಿ ಇಲ್ಲ ಎಂಬುವುದನ್ನು ಸಾರಿದ್ದಾರೆ.

ಆಂಗ್ಲ ಪತ್ರಿಕೆಯೊಂದು ಈ ಕುರಿತು ವರದಿ ಪ್ರಕಟಿಸಿದೆ. ಗುರುವಾರದಂದು 150 ಪ್ರಯಾಣಿಕರಿದ್ದ ಭಾರತ ವಿಮಾನವೊಂದು ಜೈಪುರದಿಂದ ಮಸ್ಕಟ್ ಗೆ ಹಾರಾಟವಾರಂಭಿಸಿತ್ತು. ಆದರೆ ಕರಾಚಿ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದ್ದಕ್ಕಿದ್ದಂತೆ ಮಳೆ, ಮಿಂಚು ಕಾಣಿಸಿಕೊಂಡಿದೆ. ಅಪಾಯವನ್ನರಿತ ಪೈಲಟ್ 36 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಕೂಡಲೇ 34 ಸಾವಿರ ಅಡಿ ಕೆಳಕ್ಕಿಳಿಸಿದ್ದಾರೆ. ಇದಕ್ಕಾಗಿ ಹತ್ತಿರದ ನಿಲ್ದಾಣಗಳಿಗೆ 'ಮೇ ಡೇ' ಪ್ರೋಟೋಕಾಲ್ ರವಾನಿಸಿದ ಪೈಲಟ್, ತುರ್ತು ಸಹಾಯಕ್ಕೆ ಕರೆ ನೀಡಿದ್ದಾರೆ.

ಭಾರತೀಯ ವಿಮಾನದ ಈ ತುರ್ತು ಕರೆಯನ್ನಾಲಿಸಿದ ಪಾಕಿಸ್ತಾನದ ಏರ್ವ ಟ್ರಾಫಿಕ್ ಕಂಟ್ರೋಲರ್ ಕೂಡಲೇ ಕ್ಯಾಪ್ಟನ್ ಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಪಾಕಿಸ್ತಾನದ ವಾಯುಮಾರ್ಗದಲ್ಲಿ ಹಾರಾಟ ನಡೆಸಲು ಬೇಕಾದ ಸೂಕ್ತ ಸೂಚನೆಗಳನ್ನು ನೀಡಿ, ಸುರಕ್ಷಿತವಾಗಿ ಹಾರಾಟ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.  

ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಿಮಾನಯಾನ ಸಂಸ್ಥೆ 'ಜೈಪುರದಿಂದ ಹಾರಾಟವನ್ನಾರಂಭಿಸಿದ್ದ ವಿಮಾನ ಸಿಂಧ್ ಪ್ರದೇಶದ ಬಳಿ ತಲೆದೋರಿದ ಹವಾಮಾನ ವೈಪರೀತ್ಯದಿಂದಾಗಿ ಹಾರಾಟ ನಡೆಸಲು ಸಮಸ್ಯೆ ಎದುರಾಯ್ತು' ಎಂದಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ್ದು, ಈ ವಿಚಾರನ್ನು ಪಾಕಿಸ್ತಾನ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಪಾಕಿಸ್ತಾನವು ತನ್ನ ವಾಯು ಪ್ರದೇಶದಲ್ಲಿ ಭಾರತೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ ಎಂಬುವುದು ಉಲ್ಲೇಖನೀಯ.

ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: